ಪಾಳು ಬಿದ್ದಿದ್ದ ಕಾರ್ಖಾನೆಯೊಂದನ್ನು ಶುಚಿಗೊಳಿಸಲು ಹೋಗಿ ಓರ್ವ ಕಾರ್ಮಿಕ ಸಾವನ್ನಪ್ಪಿರುವ ಘಟನೆ ಕೊಪ್ಪಳ ಜಿಲ್ಲೆಯ ಗಿಣಿಗೇರಾ ಕೈಗಾರಿಕಾ ಪ್ರದೇಶದಲ್ಲಿ ನಡೆದಿದೆ. ಅಲ್ಲಾನಗರ ನಿವಾಸಿ ಮಾರುತಿ ಕೊರಗಲ್ ಮೃತ ದುರ್ದೈವಿ.
ಗಿಣಿಗೇರಾ ಕೈಗಾರಿಕಾ ಪ್ರದೇಶದಲ್ಲಿರುವ ಕಾಮಿನಿ ಇಸ್ಪಾತ್ ʼಐರನ್ ಅಂಡ್ ಸ್ಪಾಂಜ್ʼ ಕಾರ್ಖಾನೆಯು ಕೆಲ ದಿನಗಳಿಂದ ಪಾಳು ಬಿದ್ದಿತ್ತು. ಅದನ್ನು ಶುಚಿಗೊಳಿಸಲು ಮಾರುತಿ ಮುಂದಾಗಿದ್ದಾರೆ. ಆಗ ಪಕ್ಕದಲ್ಲೇ ಸೋರಿಕೆಯಾದ ಕಾರ್ಬನ್ ಮಾನಾಕ್ಸೈಡ್ ವಿಷಾನಿಲದಿಂದಾಗಿ ಮಾರುತಿ ಸಾವನ್ನಪ್ಪಿದ್ದು, ಇನ್ನೊಬ್ಬ ಕಾರ್ಮಿಕ ಮಹಾಂತೇಶ ಎಂಬುವವರ ಸ್ಥಿತಿ ಚಿಂತಾಜನಕವಾಗಿದೆ. ಅಲ್ಲದೇ ಹತ್ತಕ್ಕೂ ಹೆಚ್ಚು ಜನ ಅಸ್ವಸ್ಥಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಬಂದ್ ಆಗಿದ್ದ ಘಟಕದಲ್ಲಿ ಮಾರುತಿ ಮತ್ತು ಮಹಾಂತೇಶ ಕಿರುಚಾಡಿ ಅಸ್ವಸ್ಥರಾಗಿ ಬಿದ್ದಿದ್ದಾರೆ. ಅವರ ಕಿರುಚಾಟ ಕೇಳಿ ಉಳಿದ ಮಂದಿ ಅವರ ರಕ್ಷಣೆಗೆ ಹೋಗಿ ಅವರೂ ಅಸ್ವಸ್ಥರಾದರು ಎಂದು ಅಲ್ಲಿನ ಪ್ರತ್ಯಕ್ಷದರ್ಶಿ ಕಾರ್ಖಾನೆ ಸಿಬ್ಬಂದಿಗಳು ಮಾಧ್ಯಮ ಹೇಳಿಕೆ ನೀಡಿದರು.
ಈ ಸುದ್ದಿ ಓದಿದ್ದೀರಾ?: ಕೊಪ್ಪಳ | ಸಂವಿಧಾನ ಬದಲಿಸಬೇಕೆನ್ನುವ ಮನುವಾದಿಗಳ ವಿರುದ್ಧ ಹೋರಾಟ ಅಗತ್ಯ: ಭಾರದ್ವಾಜ್
“ಕಾರ್ಮಿಕರಿಗೆ ಸುರಕ್ಷಿತ ಸೌಕರ್ಯವಿಲ್ಲದೆ ದುಡಿಸಿಕೊಳ್ಳುತ್ತಿದ್ದಾರೆ. ಪಾಳು ಬಿದ್ದ ಕಾರ್ಖಾನೆ ಸ್ವಚ್ಛಗೊಳಿಸಲು ಕಳಿಸಿ, ಬಡವರ ಜೀವಕ್ಕೆ ಸಂಚಕಾರ ತಂದೊಡ್ಡಿದ್ದಾರೆ. ಇದರ ಹೊಣೆ ಯಾರು ಹೊರುವವರು? ಬಡವರ ಜೀವಕ್ಕೆ ರಕ್ಷಣೆ ಇಲ್ಲವೇ” ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.
