ಅಂಬೇಡ್ಕರ್ ಒಂದು ಸಮಾಜದ ಸೂರ್ಯ ಅಲ್ಲ, ಪ್ರತಿ ಸಮಾಜದ ಬೆಳಕು. ಅವರ ಜ್ಞಾನ ಸಂಪತ್ತು ಗಳಿಸಿಕೊಂಡರೆ ನಮ್ಮ ಆರ್ಥಿಕ, ರಾಜಕೀಯ, ಸಾಮಾಜಿಕ, ರಾಜಕೀಯ ಸಂಪತ್ತು ಸಿಗುತ್ತವೆ. ಅಂಬೇಡ್ಕರ್ ಅವರು ಜಗತ್ತೇ ಭಯಪಡುವಂತೆ ಓದಿದರು ಎಂದು ಉಪನ್ಯಾಸಕ ಆರ್ ಪಿ ರಾಜೂರು ಹೇಳಿದರು.
ಕೊಪ್ಪಳ ಜಿಲ್ಲೆಯ ಕುಕುನೂರು ತಾಲೂಕು ಮನ್ನಾಪೂರ ಗ್ರಾಮದಲ್ಲಿ ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಮೂರ್ತಿ ಪ್ರತಿಷ್ಠಾಪನೆ ಹಾಗೂ ಕರ್ನಾಟಕ ಮಾದಿಗ ರಕ್ಷಣಾ ವೇದಿಕೆ ಗ್ರಾಮ ಘಟಕ ಉದ್ಘಾಟನೆ ಮಾಡಿ ಮಾತನಾಡಿದರು.
“ಅಂಬೇಡ್ಕರ್ ಮೂರ್ತಿ ಪೂಜೆ ಮಾಡುವುದನ್ನು ವಿರೋಧಿಸಿದವರು. ಮೂರ್ತಿ ಸ್ಥಾಪನೆಯಲ್ಲಿ ಹೆಚ್ಚು ಆಸಕ್ತಿ ವಹಿಸಿದಷ್ಟು ಅವರ ಚಿಂತನೆಗೆ ಹೆಗೆ ಮಹತ್ವ ಕೊಟ್ಟಿಲ್ಲ. ಇಂದಿನ ಮಕ್ಕಳೂ ಅವರಂತೆ ಓದಬೇಕು. ಆದರೆ, ಇಂದಿನ ಯುವ ಪಿಳಿಗೆಯ ಆಲೋಚನೆಗಳು ಭಿನ್ನ ಇರುವುದನ್ನ ನೋಡಿದರೆ ಆತಂಕವಾಗುತ್ತದೆ. ಮೂಢನಂಬಿಕೆ ತೊಲಗಿಸಿ ವೈಚಾರಿಕತೆ ತೊಡಗಿಸಿಕೊಳ್ಳಬೇಕು. ಅಂಬೇಡ್ಕರ್ ಅವರ ಬದುಕಿನ ಕೃತಿಗಳನ್ನ ಓದಿ ಅವರು ಅರ್ಥವಾಗುತ್ತದೆ” ಎಂದು ಹೇಳಿದರು.
ಪ್ರಕಾಶ ಹಳ್ಳಿ ಮಾತನಾಡಿ, “ಅಂಬೇಡ್ಕರ್ ಜಿವನ ಕಾಲದಲ್ಲಿ ಅವರದೇ ಅದ ಸಮುದಾಯದ ಪೀಳಿಗೆಗೆ ಆರ್ಥಿಕ, ಶೈಕ್ಷಣಿಕ, ಸಾಮಾಜಿಕ, ರಾಜಕೀಯವಾಗಿ ಸಮಾನತೆಯನ್ನು ಪಡೆಯಲು ದೂರದೃಷ್ಟಿ ಇಟ್ಟುಕೊಂಡಿದ್ದರು. ಬಾಬಾ ಸಾಹೇಬ್‌ರನ್ನು ಒಂದೇ ಜಾತಿಗೆ ಸೀಮಿತಗೊಳಿಸುವ ಕೆಲಸ ದುರಾದೃಷ್ಟಕರ. ವಿವಿಯಲ್ಲಿ ಜಾತಿ ತಾರತಮ್ಯ ಹೆಚ್ಚಾಗಿದೆ. ಆಯಾ ಜಾತಿಗಳ ಆಧ್ಯಾಪಕರು, ಉಪನ್ಯಾಸಕರು ತಮ್ಮ ಜಾತಿಯ ವಿದ್ಯಾರ್ಥಿಗಳಿಗೆ ಹೆಚ್ಚು ಪ್ರಾಮುಖ್ಯತೆ ಕೊಡುತ್ತಾರೆ. ಇದು ಕೆಟ್ಟ ವ್ಯವಸ್ಥೆ. ಸಂವಿಧಾನ ಎಲ್ಲ ರೀತಿಯ ಸಮಾನತೆ ಕೊಟ್ಟಿದ್ದರೂ ಸಂವಿಧಾನ ಬದಲಾವಣೆಯ ಮಾತು ಹೆಚ್ಚು ಕೇಳಿಬರುತ್ತಿದೆ” ಎಂದು ವಿಷಾದ ವ್ಯಕ್ತಪಡಿಸಿದರು.

ಕುಕುನೂರು ಅನ್ನದಾನೇಶ್ವರ ಶಾಖಾಮಠದ ಮಹದೇವ ಮಹಾಸ್ವಾಮಿಗಳು ಮಾತನಾಡಿ, “ದಲಿತರು ಅಂಬೇಡ್ಕರ್ ಬಿಟ್ಟುಕೊಡಬೇಕು. ಲಿಂಗಾಯತರು ಬಸವಣ್ಣನ್ನು ಬಿಟ್ಟುಕೊಡಬೇಕು, ಕುರುಬರು ಕನಕದಾಸರನ್ನು ಬಿಟ್ಟುಕೊಡಬೇಕು. ಹೀಗೆ ಆಯಾ ಜಾತಿಯ ದಾರ್ಶನಿಕರನ್ನ ತಮ್ಮ ಜಾತಿಗೆ ಸೀಮಿತಗೊಳಿಸದೇ ಅವರನ್ನ ಅವರ ಚಿಂತನೆಗಳನ್ನ ಜಗತ್ತಿನಲ್ಲಿ ಪಸರಿಸಬೇಕು. ಆ ಸಮಾಜದಲ್ಲಿ ಮಿಸಲಿಡಲು ಹೋಗಬಾರದು. ಅಂಬೇಡ್ಕರ್ ಬಿದ್ದವರನ್ನ ಎಬ್ಬಿಸಿದವರು. ಅಂಬೇಡ್ಕರ್ ಅನುಯಾಯಿಗಳು ಎಂದುಕೊಂಡವರು ಇಂದು ಅವರ ಮಕ್ಕಳು ರಸ್ತೆಯಲ್ಲಿ ಸಾರಾಯಿ ಬಾಟ್ಲಿ ಹಿಡ್ಕೊಂಡ ಕುಳಿತಿರುತ್ತಾರೆ ಇದು ದುರಂತ. ಒಳ್ಳೆಯ ಶಿಕ್ಷಣ ಪಡೆದು ಬಾಬಾ ಸಾಹೇಬ್‌ರಂತೆ ಸಾಧನೆ ಮಾಡುತ್ತಿಲ್ಲ. ದುಶ್ಚಟಗಳಿಗೆ ಅಂಟಿಕೊಳ್ಳುತ್ತಿದ್ದಾರೆ” ಎಂದು ಬೇಸರ ವ್ಯಕ್ತಪಡಿಸಿದರು.
ಪಿಎಸ್ಐ ಪ್ರವೀಣ ಬೀಳಗಿ ಮಾತನಾಡಿ, “ಇವತ್ತು ಮೂರ್ತಿ ಯಾಕೆ ಬೇಕು ಎಂಬ ವಿಚಾರ ಬರುತ್ತದೆ. ಪಠ್ಯಕ್ರಮದಲ್ಲಿ ಓದಿದರೆ ಅದರ ಬಗ್ಗೆ ಆ ವ್ಯಕ್ತಿ ಬಗ್ಗೆ ತಿಳಿಯಲ್ಲ. ಆ ಮೂರ್ತಿ ಪ್ರತಿಷ್ಠಾಪನೆಯಾಗಬೇಕು ಅದನ್ನು ತೋರಿಸಿ ಅವರ ಕೊಡುಗೆ ಬಗ್ಗೆ ತಿಳಿಸಿ ಹೇಳುವಂತದ್ದಾಗಬೇಕು. ಮೂರ್ತಿ ಕೇವಲ ಪೂಜೆಗೆ ಮೀಸಲಾಗದೆ, ಅವರ ಆದರ್ಶಗಳನ್ನು ಜಿವನದಲ್ಲಿ ಅಳವಡಿಸಿಕೊಳ್ಳಬೇಕು. ಆ ನಿಟ್ಟಿನಲ್ಲಿ ನಮ್ಮ ಮಕ್ಕಳು ಅಂಬೇಡ್ಕರ್ ಅವರ ದಾರಿಯಲ್ಲಿ ಸಾಗುವಂತೆ ಪ್ರೇರೇಪಿಸಬೇಕು. ಮಾನವ ಅಂದ ಮೇಲೆ ಮಾನವೀಯತೆ ಇರಬೇಕು. ನಾವು ಯಾವುದೇ ಜಾತಿಗೆ, ದೇವರಿಗೆ, ಧರ್ಮಕ್ಕೆ ಮೀಸಲಾಗಬಾರದು, ಅದನ್ನು ಮೀರಿ ಮಾನವೀಯತೆ ಬೆಳೆಸಿಕೊಳ್ಳಬೇಕು” ಎಂದರು.
ಈ ಸುದ್ದಿ ಓದಿದ್ದೀರಾ? ಇಂಡಿ ತಾಲೂಕಿಗೆ ನಾಲ್ಕು ವಿದ್ಯುತ್ ಉಪಕೇಂದ್ರ ಮಂಜೂರು: ಎಸ್ ಎ ಬಿರಾದಾರ
ಮಾಂತೇಶ ಬೂದಗುಂಪ ಮಾತನಾಡಿ, “ಜಾತಿ ತಾರತಮ್ಯ ಈ ದೇಶದಿಂದ ಸಂಪೂರ್ಣ ತೊಲಗಿಲ್ಲ. ಸ್ವತಂತ್ರ ಉದ್ಯೋಗ ಸೃಷ್ಟಿಸಿಕೊಳ್ಳಬೇಕು. ಸಮಾಜದಲ್ಲಿ ಆರ್ಥಿಕವಾಗಿ ಸಭಲರಾಗಬೇಕು. ಸ್ವತಂತ್ರ ಆರ್ಥಿಕ ಮೂಲಗಳನ್ನು ನಾವು ಕಟ್ಟಿಕೊಳ್ಳಬೇಕು. ಹಣ ಇಲ್ಲದವರನ್ನೂ ಅಗೌರವದಿಂದ ಕಾಣುವ ವ್ಯವಸ್ಥೆ ಇದೆ. ಅಂಬೇಡ್ಕರ್ ವಿಚಾರಗಳನ್ನು, ಆದರ್ಶಗಳನ್ನು ನಮ್ಮ ಮಕ್ಕಳಲ್ಲಿ ಬಿತ್ತುವಂತ ಕೆಲಸವಾಗಬೇಕು” ಎಂದು ಹೇಳಿದರು.
ಆರ್‌ಪಿ ರಾಜೂರ್, ಪಿಎಸ್ಐ ಪ್ರವೀಣ ಬೀಳಗಿ, ಪ್ರಕಾಶ ಹಳ್ಳಿಗುಡಿ, ಕಳಕಪ್ಪ ಹಳ್ಳಿ, ಬಸನಗೌಡ ಪಾಟೀಲ್, ಶಿವಕುಮಾರ್ ಹರಿಜನ, ಹೇಮನಗೌಡ ಬೆನ್ನಳ್ಳಿ, ಶಿವಶರಣ ಗದಿಗೆಪ್ಪ, ಮಹೇಶ ಹಿರೇಮನಿ ಸೇರಿದಂತೆ ಇತರರು ಇದ್ದರು.