ಆನೆಗೊಂದಿ ಉತ್ಸವ ಆಚರಿಸದಿದ್ದರೆ ಸಚಿವ ಸ್ಥಾನ ಕಳೆದು ಕೊಳ್ಳಲಿದ್ದೀರಿ, ಇದು ಸತ್ಯ ಎಂದು ಕೊಪ್ಪಳ ಜಿಲ್ಲಾ ಸರ್ವಾಂಗೀಣ ಅಭಿವೃದ್ಧಿ ಹೋರಾಟ ಸಮಿತಿಯ ಜಿಲ್ಲಾಧ್ಯಕ್ಷ ಬಸವರಾಜ ಮ್ಯಾಗಳಮನಿ ಕನ್ನಡ ಮತ್ತು ಸಂಸ್ಕೃತಿ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿಯವರಿಗೆ ಎಚ್ಚರಿಕೆ ನೀಡಿದರು.
“ಇತಿಹಾಸ ಪ್ರಸಿದ್ಧ ಆನೆಗೊಂದಿಯ ಮಹತ್ವ ಅರಿತು ಮಾಜಿ ಸಚಿವರು ಆದ ದಿವಂಗತ ಎಂ ಪಿ ಪ್ರಕಾಶ ರವರು ಹೊರ ಜಿಲ್ಲೆಯವರಾಗಿದ್ದರೂ ಅವರ ಕಾಳಜಿಯಿಂದ ಆನೆಗೊಂದಿ ಉತ್ಸವ ಆಚರಣೆಯನ್ನು ಪ್ರಾರಂಭಿಸಿದ್ದರು. ಆದರೆ, ನಮ್ಮ ಜಿಲ್ಲೆಯವರೇ ಆದ ಸಚಿವ ಶಿವರಾಜ್ ತಂಗಡಗಿ ಅವರು ಉತ್ಸವ ಮಾಡಲು ನಿರ್ಲಕ್ಷ್ಯ ತೋರಿಸಿ ಉತ್ಸವವನ್ನೇ ಅಂತ್ಯ ಮಾಡಲು ಹೊರಟಿದ್ದಾರೆಂದು ಅನುಮಾನವಗುತ್ತದೆ” ಎಂದು ಸಂಶಯ ವ್ಯಕ್ತಪಡಿಸಿದರು.
“ಗಂಗಾವತಿ ಕ್ಷೇತ್ರದ ಶಾಸಕರೊಂದಿಗಿನ ವೈಯಕ್ತಿಕ ದ್ವೇಷ ಹಠಕ್ಕೆ ಬಿದ್ದು ಕಳೆದ ಬಾರಿ ಉತ್ಸವದ ಅನುದಾನ ಬಿಡುಗಡೆ ಮಾಡದೇ ಇರುವುದು ಹಾಗೂ ಆನೆಗೊಂದಿ ಉತ್ಸವದ ಬಗ್ಗೆ ನಿರ್ಲಕ್ಷ್ಯ ಧೋರಣೆ ತೋರುವುದು ಸಚಿವರಿಗೆ ಶೋಭೆ ತರುವುದಿಲ್ಲ. ನಿಮ್ಮ ರಾಜಕೀಯ ಜಗಳದಲ್ಲಿ ಉತ್ಸವ ನಿರ್ಲಕ್ಷ್ಯಕ್ಕೆ ಒಳಗಾಗುವುದು ಬೇಡ. ಕೂಡಲೇ ಅನುದಾನ ಬಿಡುಗಡೆ ಮಾಡುವುದರ ಜೊತೆಗೆ ಈ ತಿಂಗಳ ಅಂತ್ಯಕ್ಕೆ ಅಥವಾ ಏಪ್ರಿಲ್ ಮೊದಲ ವಾರದಲ್ಲಿ ಉತ್ಸವದ ದಿನವನ್ನು ಘೋಷಣೆ ಮಾಡಬೇಕು ಇಲ್ಲದಿದ್ದರೆ ಸಚಿವ ಸ್ಥಾನ ಬದಲಾವಣೆಯಾಗುವವರೆಗೂ ವಿವಿಧ ಸಂಘಟನೆಗಳೊಂದಿಗೆ ಹಾಗೂ ಈ ಭಾಗದ ಜನರೊಂದಿಗೆ ಹೋರಾಟ ಮಾಡಲಾಗುವುದು” ಎಂದು ಎಚ್ಚರಿಸಿದರು.
ಇದನ್ನೂ ಓದಿ: ಕೊಪ್ಪಳ | ಹೋರಾಟ ಯಶಸ್ವಿ: ಬಲ್ದೋಟ ಕಾರ್ಖಾನೆ ಕಾಮಗಾರಿಗೆ ಸ್ಥಗಿತ; ಸಿಎಂ ಸೂಚನೆ
ಈ ಸಂದರ್ಭದಲ್ಲಿ ಚಂದ್ರು ನಿಸರ್ಗ, ಜಡಿಯಪ್ಪ ಹಂಚಿನಾಳ, ದುರಗೇಶ್ ಹೊಸಳ್ಳಿ, ರಾಘವೇಂದ್ರ ಕಡೆಬಾಗಿಲು, ಮಂಜುನಾಥ ಗುಡಿಗೌಡ್ರ, ರಾಮಣ್ಣ ರುದ್ರಾಕ್ಷಿ, ಸಾಬೀರ್ ಹುಸೇನ್, ಬಸವರಾಜ್ ನಾಯಕ, ಮುತ್ತಣ್ಣ, ಸೋಮನಾಥ ಬಂಡಿ ಬಸಪ್ಪಕ್ಯಾಂಪ್, ಮಂಜುನಾಥ, ಚಾಂದಭಾಷಾ, ಕನಕಪ್ಪ ಹಾಗೂ ಇತರರು ಇದ್ದರು.
