ಕೊಪ್ಪಳದಲ್ಲಿ ಬುಲ್ಡೋಟಾ, ಎಮ್‌ಎಸ್‌ಪಿಎಲ್, ಬಿಎಸ್‌ಪಿಎಲ್ ಕೈಗಾರಿಕಾ ಕಾರ್ಖಾನೆ ಘಟಕ ವಿಸ್ತರಣೆ ತಡೆಯುವಂತೆ ಹಾಗೂ ಬಸಾಪೂರದ 44.35 ಎಕರೆ ಸಾರ್ವಜನಿಕ ಕೆರೆ ರಕ್ಷಿಸುವಂತೆ ಒತ್ತಾಯಿಸಿ ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಸಮಿತಿಯು ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವ ಎಚ್ ಡಿ ಕುಮಾರಸ್ವಾಮಿ ಅವರಿಗೆ ಮನವಿ ಮಾಡಿತು.
“ಜಿಲ್ಲೆಯು ತುಂಗಭದ್ರಾ ಯೋಜನೆಯನ್ನು ಅವಲಂಬಿಸಿದ ಫಲವತ್ತಾದ ಭೂಮಿ, ಉತ್ತಮ ಹವಾಗುಣ ಇರುವ ಕೃಷಿ ಪ್ರಧಾನ ಆರ್ಥಿಕತೆಯನ್ನು ಹೊಂದಿರುವ ಜಿಲ್ಲೆಯಾಗಿದೆ. ತುಂಗಭದ್ರಾ ನೀರು ಮತ್ತು ಅಗ್ಗದ ಭೂಮಿ ಕಬಳಿಸಿ, ಕೊಪ್ಪಳ ತಾಲೂಕು ಒಂದರಲ್ಲೇ 30 ಬೃಹತ್ ಸ್ಪಾಂಜ್ ಐರನ್, ಪೆಲೆಟ್ ಗೋಲಿ, ರಾಸಾಯನಿಕ ಗೊಬ್ಬರ, ಸಿಮೆಂಟ್, ಉಕ್ಕು ತಯಾರಿಕೆ ಮಾಡಲು ಇಲ್ಲಿನ ಪರಿಸರ ಸಹಿಸಿಕೊಳ್ಳಲಾರದಷ್ಟು, ಧಾರಣಾ ಸಾಮರ್ಥ್ಯ ಮೀರಿ ಕಾರ್ಖಾನೆಗಳನ್ನು ಸ್ಥಾಪಿಸಲಾಗಿದೆ. ಇದರಿಂದ ಸಾರ್ವಜನಿಕರು ಮಾರಣಾಂತಿಕ ಸಮಸ್ಯೆಗಳನ್ನು ಎದುರಿಸುವಂತಾಗಿದೆ. ಕೂಡಲೇ ಈ ಸಮಸ್ಯೆಗಳನ್ನು ಪರಿಹರಿಸಲು ಕ್ರಮ ಕೈಗೊಳ್ಳಬೇಕು” ಎಂದು ಸಮಿತಿಯ ಮುಖಂಡರು ಒತ್ತಾಯಿಸಿದರು.
ಕಳೆದ 14 ವರ್ಷಗಳಿಂದ ಕಾರ್ಯಾಚರಣೆ ನಡೆಸುತ್ತಿರುವ ಬುಲ್ಡೋಟಾ, ಎಮ್‌ಎಸ್‌ಪಿಎಲ್, ಬಿಎಸ್‌ಪಿಎಲ್ ಉತ್ಪತ್ತಿ ಮಾಡುತ್ತಿರುವ ಕಾರ್ಖಾನೆ ಹೊರ ಸೂಸುವ ಕಪ್ಪು ಧೂಳು, ಹೊಗೆಯಿಂದ ಭಾಗ್ಯನಗರದ ಸುಮಾರು 1.5 ಲಕ್ಷ ಜನರು ಈಗಾಗಲೇ ಬಾಧಿತರಾಗಿ ಅನಾರೋಗ್ಯ ಪೀಡಿತರಾಗುತ್ತಿದ್ದಾರೆ. ಕೇವಲ 4 ಮಂದಿ ವೈದ್ಯರಿದ್ದ ಕೊಪ್ಪಳದಲ್ಲಿ ನೂರಾರು ವೈದ್ಯರು ಈಗ ಆಸ್ಪತ್ರೆ ತೆರೆದು ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ.
“ಕೈಗಾರಿಕೆಗಳು ಕೇಂದ್ರೀಕರಣಗೊಂಡಿರುವ ಗಿಣಿಗೇರಿ, ಹಿರೇಬಗನಾಳ, ಚಿಕ್ಕಬಗನಾಳ, ಲಾಚನಕೇರಿ, ಕುಣಿಕೇರಿ, ಕುಣಿಕೇರಿ ತಾಂಡಾ, ಅಲ್ಲಾನಗರ, ಹಿರೇಕಾಸನಕಂಡಿ, ಹೊಸ ಕನಕಾಪುರ, ಕನಕಾಪುರ ತಾಂಡಾ, ಹಾಲವರ್ತಿ, ಕಿಡದಾಳ, ಬೆಳವಿನಾಳ, ಹೊಸ ಕನಕಾಪುರ, ಬೇವಿನಹಳ್ಳಿ, ಶಹಾಪುರ, ಕೆರೆಹಳ್ಳಿ, ಲಿಂಗದಳ್ಳಿ, ಹಳೆ ಕನಕಾಪುರ, ಬಸಾಪೂರ, ಹಿಟ್ನಾಳ ಮತ್ತು ಹುಲಿಗಿ ಗ್ರಾಮಗಳ ಹತ್ತಾರು ಸಾವಿರ ಕುಟುಂಬಗಳು, ಕಾರ್ಖಾನೆಗಳು ಹೊರ ಸೂಸುವ ಧೂಳು, ಹೊಗೆ ಉಸಿರಾಡಿ ಅನಾರೋಗ್ಯದ ಪರಿಣಾಮಗಳನ್ನು ತೀವ್ರವಾಗಿ ಎದುರಿಸುತ್ತಿವೆ.
ಮಾನವ ವಿನಾಶಕಾರಿಯಾದ ವಿದ್ಯುತ್ ಅಣುಸ್ಥಾವರವನ್ನು ಜಿಲ್ಲೆಯಲ್ಲಿ ಸ್ಥಾಪಿಸಲು ಭೂಮಿಯ ಹುಡುಕಾಟ ನಡೆಸಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈ ಯೋಜನೆಯನ್ನು ಸಂಪೂರ್ಣವಾಗಿ ಕೈಬಿಡಬೇಕು. ಈ ಭೂಮಿಯಲ್ಲಿ ಸಾಕಷ್ಟು ಹಣ್ಣು-ಹಂಪಲು, ತರಕಾರಿ, ಹೂ ಬೆಳೆದು ಬದುಕುತ್ತಿದ್ದ ರೈತರ ಬದುಕು ಈ ಕಾರ್ಖಾನೆಗಳಿಂದ ತುಂಗಭದ್ರಾ ನೀರು ಮಾಲಿನ್ಯ, ಫಲವತ್ತಾಗಿದ್ದ ಭೂಮಿ ಮಾಲಿನ್ಯ, ಹೊಗೆಯಿಂದ ಗಾಳಿ ಮಾಲಿನ್ಯವಾಗಿ ಲಕ್ಷಗಟ್ಟಲೆ ಜನರು ರೋಗ ರುಜಿನಗಳಿಗೆ ತುತ್ತಾಗಿ, ಅನಾರೋಗ್ಯದಿಂದ ಸಾಯುತ್ತಿರುವದನ್ನು ತಪ್ಪಿಸಲು ಮುಂದಾಗಬೇಕು ಎಂದು ಸಮಿತಿ ಆಗ್ರಹಿಸಿತು.
ಈ ಸುದ್ದಿ ಓದಿದ್ದೀರಾ?: ಕೊಪ್ಪಳ | ಬಿಎಸ್‌ಪಿಎಲ್ ಕಾರ್ಖಾನೆ ಆರಂಭಕ್ಕೆ ತೀವ್ರ ವಿರೋಧ; ಕೇಂದ್ರಕ್ಕೆ ಪ್ರಸ್ತಾವನೆ ಬಂದಿಲ್ಲವೆಂದ ಎಚ್‌ಡಿಕೆ
ಈ ವೇಳೆ ಅಲ್ಲಮಪ್ರಭು ಬೆಟ್ಟದೂರು, ಕೆ.ಬಿ.ಗೋನಾಳ, ಬಸವರಾಜ ಶೀಲವಂತರ, ಶರಣು ಗಡ್ಡಿ, ಎಸ್.ಎ.ಗಫಾರ್, ಮುದಕಪ್ಪ ಹೊಸಮನಿ, ಶಿವಪ್ಪ ಹಡಪದ, ಮಕಬೂಲ್ ರಾಯಚೂರು, ದುರಗಪ್ಪ ಕನಕ, ಮೂಕಪ್ಪ ಮೇಸ್ತ್ರಿ ಬಸಾಪೂರ, ಮಂಗಳೇಶ ರಾಠೋಡ ಗಿಣಿಗೇರಿ, ಹನುಮಂತ ಕಟಗಿ ಗಿಣಿಗೇರಿ ಹಾಗೂ ಇತರರಿದ್ದರು.
