ನಗರಕ್ಕೆ ಹೊಂದಿಕೊಂಡಂತೆ ನಿರ್ಮಾಣ ಮಾಡಲಾಗುತ್ತಿರುವ ಬಿಎಸ್‌ಪಿಎಲ್ ಕಾರ್ಖಾನೆ ನಿರ್ಮಾಣ ವಿರೋಧಿಸಿ ಎಮ್‌ಎಸ್‌ಪಿಎಲ್, ಬಿಎಸ್‌ಪಿಎಲ್ ವಿರೋಧಿ ಹೋರಾಟ ಸಮಿತಿಯು ಫೆ.24ರಂದು ಕೊಪ್ಪಳ ಜಿಲ್ಲಾ ಬಂದ್‌ಗೆ ಕರೆ ನೀಡಿದೆ.
ನಿನ್ನೆ ಸಂಜೆ ನಗರದ ಸಾಹಿತ್ಯ ಭವನದಲ್ಲಿ ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಸಮಿತಿ ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು.
ಕೊಪ್ಪಳ ತಾಲೂಕಿನಲ್ಲಿ ಈಗಾಗಲೇ 202ಕ್ಕೂ ಹೆಚ್ಚು ಸಣ್ಣ, ಮಧ್ಯಮ ಹಾಗೂ ಬೃಹತ್ ಕಾರ್ಖಾನೆಗಳು ಚಾಲ್ತಿಯಲ್ಲಿವೆ. ಅವುಗಳಲ್ಲಿ 20 ಐರನ್ ಕಾರ್ಖಾನೆಗಳಿದ್ದು, ಸುತ್ತಲಿನ ಹತ್ತಾರು ಹಳ್ಳಿಗಳಲ್ಲಿ ಪರಿಸರ ನಾಶವಾಗಿದೆ. ಪರಿಸ್ಥಿತಿ ಹೀಗಿರುವಾಗ ಇದೀಗ ಕೊಪ್ಪಳ ನಗರಕ್ಕೆ ಹೊಂದಿಕೊಂಡೇ ಹೊಸ ಕಾರ್ಖಾನೆ ನಿರ್ಮಾಣ ಆಗುತ್ತಿರುವುದು ಜನರಲ್ಲಿ ಮತ್ತಷ್ಟು ಆತಂಕ ಮೂಡಿಸಿದೆ.
ಬಂಡಾಯ ಸಾಹಿತಿ ಅಲ್ಲಮಪ್ರಭು ಬೆಟ್ಟದೂರ ಮಾತನಾಡಿ, “ಬುಲ್ಡೋಟಾ ಉಕ್ಕು ಕಾರ್ಖಾನೆ, ವಿದ್ಯುತ್ ಅಣುಸ್ಥಾವರ ಜಿಲ್ಲೆಗೆ ಬೇಡವೇ ಬೇಡ. ಗಿಣಿಗೇರಿ, ಅಲ್ಲನಗರ, ಹಾಲವರ್ತಿ, ಸಣ್ಣಕಲ್ಲ ಹಾಗೂ ಮುಂತಾದ ಗ್ರಾಮಗಳ ಜನರು ರೋಗಗಳಿಂದ ನರಳುತ್ತಿದ್ದಾರೆ. ಕೆಮ್ಮು, ದಮ್ಮು, ಕ್ಯಾನ್ಸರ್‌ನಂತ ಮಾರಕ ರೋಗಗಳಿಂದ ಬಳಲುತ್ತಿದ್ದಾರೆ. ರೋಗ ಹರಡುವ ಕೈಗಾರಿಕೆಗಳು ಕೊಪ್ಪಳ ಜಿಲ್ಲೆಗೆ ಬೇಡ. ಕೈಗಾರಿಕಾ ವಿಸ್ತರಣಾ ನೀತಿಯನ್ನು ಒಕ್ಕೊರಲಿನಿಂದ ವಿರೋಧಿಸೋಣ” ಎಂದರು.
ಮಾರಕ ಖಾಯಿಲೆಗೆ ತುತ್ತಾಗಿ ಸಾವನಪ್ಪಿದ ವ್ಯಕ್ತಿಯ ಕುಟುಂಬಸ್ಥ ರಮೇಶಗೌಡ ಮಾತನಾಡಿ, “ನಮ್ಮ ನೆಲ, ಜಲ, ರಕ್ಷಿಸಿಕೊಳ್ಳುವ ಹೊಣೆ ನಮ್ಮದು. ಮಕ್ಕಳ ಉದ್ಯೋಗದ ಆಸೆಗೆ ಬಲಿಯಾಗಿ ನಮ್ಮ ಭೂಮಿಯನ್ನು ಕೈಗಾರಿಕಾ ಕಂಪನಿಗಳಿಗೆ ಕೊಟ್ಟು ಈಗಾಗಲೇ ತಪ್ಪು ಮಾಡಿದ್ದೇವೆ. ನಿತ್ಯವೂ ಒಂದಲ್ಲ ಒಂದು ರೀತಿಯ ಮಾರಕ ಖಾಯಿಲೆಗೆ ನಮ್ಮ ಮಕ್ಕಳು ತುತ್ತಾಗುತ್ತಿವೆ. ನಿತ್ಯ ತಾಯಂದಿರ, ಕುಟುಂಬದ ಗೋಳು ಕೇಳುವವರಿಲ್ಲ. ಇದು ಮುಂದಿನ ಪೀಳಿಗೆಗೆ ಮಾರಕ. ಇಂತಹ ಕೈಗಾರಿಕೆ ಕಾರ್ಖಾನೆಗಳನ್ನ ಧಿಕ್ಕರಿಸೋಣ” ಎಂದು ಕರೆಕೊಟ್ಟರು.
ಸಾಮಾಜಿಕ ಹೋರಾಟಗಾರ ಡಿ.ಎಚ್.ಪೂಜಾರ ಮಾತನಾಡಿ, “ನಾವು ನಮ್ಮ ಮಕ್ಕಳಿಗೆ ಶಿಕ್ಷಣ, ಮೂಲ ಸೌಕರ್ಯ ಒದಗಿಸಿಕೊಡಿ ಎಂದರೆ ಸರ್ಕಾರ ಉದ್ಯೋಗ ಸೃಷ್ಟಿಯ ನೆಪದಲ್ಲಿ ಮಾರಕ ಖಾಯಿಲೆ ತರುವ ಕೈಗಾರಿಕಾ ಕಂಪನಿಗಳನ್ನು ತಂದು ಜಿಲ್ಲೆಯನ್ನು ರೋಗಗ್ರಸ್ತ ಪ್ರದೇಶವನ್ನಾಗಿ ಮಾಡುತ್ತಿದೆ. ‘ಕಾರ್ಖಾನೆ ಮುಚ್ಚಬೇಡಿ ಇದರಿಂದ ಕಲ್ಯಾಣ ಕರ್ನಾಟಕದ ಅಭಿವೃದ್ಧಿ ಕುಂಠಿತವಾಗುತ್ತದೆ ಅಂತ ಹೋರಾಟ ಮಾಡುವ ಬದಲು, ಸ್ಥಾಪಿಸಬೇಡಿ ಕಾರ್ಖಾನೆಗಳು ಕಲ್ಯಾಣ ಕರ್ನಾಟಕದಲ್ಲಿ ಮಾರಕ ರೋಗ ಹರಡುತ್ತಿವೆ ಅಂತ ಹೋರಾಟ ಮಾಡುವ ಪರಿಸ್ಥಿತಿ ಬಂದಿದೆ. ಹಾಗಾಗಿ ಕಲ್ಯಾಣ ಕರ್ನಾಟಕದ ಯಾವ ಭಾಗದಲ್ಲೂ ನಮಗೆ ಕೈಗಾರಿಕಾ ಕಂಪನಿಗಳು ಬೇಡ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ?: ಕೊಪ್ಪಳ | ಮಗು ಮನುಕುಲದ ಆಸ್ತಿಯಾಗಬೇಕು: ಮೇಘಾಲಯ ರಾಜ್ಯಪಾಲ ಚಂದ್ರಶೇಖರ
ಇನ್ನು ಕೊಪ್ಪಳ ಬಂದ್‌ಗೆ ಹಲವು ಧಾರ್ಮಿಕ ಗುರುಗಳು, ಮುಖಂಡರು, ಪ್ರಗತಿಪರರು, ಪರಿಸರವಾದಿಗಳು, ಆಕಾಶವಾಣಿ ಮಾಜಿ ಅಧಿಕಾರಿಗಳು, ವಿಜ್ಞಾನಿಗಳು ಬೆಂಬಲ ಸೂಚಿಸಿದ್ದಾರೆ. ಸುಮಾರು 50 ಸಾವಿರಕ್ಕೂ ಹೆಚ್ಚು ಮಂದಿ ಸೇರುವ ನಿರೀಕ್ಷೆ ಇದೆ ಎಂದು ಸಭೆಯ ಮುಖಂಡರು ತಿಳಿಸಿದರು.
