ಕೊಪ್ಪಳ ಜಿಲ್ಲೆ ತಾವರಗೇರಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಬಾಲ್ಯ ವಿವಾಹಕ್ಕೆ ಸಂಬಂಧಿಸಿದಂತೆ ವಿವಾಹ ಮಾಡಿಕೊಂಡ ದೇವರಾಜ ಹೊಸಕೇರಿ ಸೇರಿದಂತೆ ಆತನ ಹಾಗೂ ಬಾಲಕಿಯ ಪೋಷಕರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಅಂಗನವಾಡಿ ಮೇಲ್ವಿಚಾರಕಿ ನೀಡಿದ ದೂರಿನ ಅನ್ವಯ ಆರೋಪಿಗಳ ವಿರುದ್ಧ ತಾವರಗೇರಾ ಪೊಲೀಸ್ ಠಾಣೆಯಲ್ಲಿ ಬಾಲ್ಯ ವಿವಾಹ ನಿಷೇಧ ಕಾಯ್ದೆ ಅನ್ವಯ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಫೆ. 25ರಂದು ಜಿಲ್ಲಾ ಮಕ್ಕಳ ಸಹಾಯವಾಣಿಯಿಂದ ಮಾಹಿತಿ ಬಂದಿತ್ತು. ಹಾಗಾಗಿ ಬುಧವಾರ ದೂರು ದಾಖಲಿಸಿಕೊಳ್ಳಲಾಗಿದೆ ಎಂದು ಎಫ್‌ಐಆರ್‌ದಲ್ಲಿ ವಿವರಿಸಲಾಗಿದೆ.
ಈ ಕುರಿತು ವಿಧಾನಪರಿಷತ್ ಸದಸ್ಯೆ ಹೇಮಲತಾ ನಾಯಕ ‘ಪ್ರಜಾವಾಣಿ’ ಪತ್ರಿಕೆಯಲ್ಲಿ ಪ್ರಕಟವಾದ ವರದಿಯೊಂದಿಗೆ ಫೇಸ್‌ಬುಕ್‌ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಬಾಲ್ಯ ವಿವಾಹ ನಡೆಯುತ್ತಿರುವ ಬಗ್ಗೆ ಮಾಹಿತಿ ಇದ್ದರೂ ಅದನ್ನು ತಡೆಯುವಲ್ಲಿ ವಿಫಲರಾಗಿರುವ ಸಂಬಂಧಿಸಿದ ಅಧಿಕಾರಿಗಳಿಗೆ ನಾಚಿಕೆಯಾಗಬೇಕು, ಕರ್ತವ್ಯಲೋಪ ಎಸಗಿರುವವರ ವಿರುದ್ಧ ಜಿಲ್ಲಾಧಿಕಾರಿ ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಕೊಪ್ಪಳ | ಮಹಾನ್ ಕ್ರಾಂತಿಕಾರಿ ಚಂದ್ರಶೇಖರ್ ಆಜಾದ್‌ರ 94ನೇ ಹುತಾತ್ಮ ದಿನಾಚರಣೆ
ಈ ಪ್ರಕರಣ ಕುರಿತು ಮಾಹಿತಿ ನೀಡಿದ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶೇಖರಗೌಡ ಜಿ ರಾಮತ್ನಾಳ, “ಬಾಲ್ಯ ವಿವಾಹ ತಡೆಗಟ್ಟುವಲ್ಲಿ ತಹಶೀಲ್ದಾರ್, ತಾಲ್ಲೂಕು ಪಂಚಾಯಿತಿ ಇಒ, ಪಿಡಿಒ, ಶಿಶು ಅಭಿವೃದ್ಧಿ ಯೋಜನಾಧಿಕಾರಿ, ಮುಖ್ಯಶಿಕ್ಷಕರು ಸೇರಿದಂತೆ ಇತರೆ ಇಲಾಖೆಗಳ ಅಧಿಕಾರಿಗಳನ್ನು ಒಳಗೊಂಡ ತಾಲೂಕು ಮಟ್ಟದ ವ್ಯಾಟ್ಸ್ ಆ್ಯಪ್ ಗ್ರೂಪ್ ರಚಿಸಲಾಗಿದೆ. ಅದರಲ್ಲಿ ಮಾಹಿತಿ ಹಂಚಿಕೆಯಾಗಿರುತ್ತದೆ. ಬಾಲ್ಯವಿವಾಹಕ್ಕೂ ಮೊದಲೇ ಆ ಗುಂಪಿಗೆ ತಿಳಿಸಿರುವ ಮಾಹಿತಿ ಇದ್ದು, ಅದನ್ನು ಪರಿಶೀಲಿಸಲಾಗುವುದು. ಕರ್ತವ್ಯಲೋಪ ಎಸಗಿರುವುದು ಕಂಡುಬಂದರೆ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಶಿಫಾರಸು ಮಾಡಲಾಗುವುದು” ಎಂದು ತಿಳಿಸಿದರು.
