ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಸಂಗನಹಾಲ ಗ್ರಾಮದಲ್ಲಿ ಕ್ಷೌರ ಮಾಡಿಸಿಕೊಳ್ಳಲು ತೆರಳಿದ್ದ ಕ್ಷೌರಿಕನಿಂದ ಜಾತಿನಿಂದನೆಗೊಳಗಾಗಿ ಕೊಲೆಗೀಡಾಗಿದ್ದ ದಲಿತ ಯುವಕನ ಮನೆಗೆ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ಎಸ್ ತಂಗಡಗಿ ಹಾಗೂ ಯಲಬುರ್ಗಾ ಶಾಸಕ ಬಸವರಾಜ ರಾಯರೆಡ್ಡಿ ನೇತೃತ್ವದ ನಿಯೋಗವು ಸೋಮವಾರ ಭೇಟಿ ನೀಡಿ, ಸಾಂತ್ವನ ಹೇಳಿದರು.
ಇದೇ ವೇಳೆ ಮೃತ ಯುವಕ ಯಮನೂರಪ್ಪ ಈರಪ್ಪ ಬಂಡಿಹಾಳ ಕುಟುಂಬಕ್ಕೆ ಪರಿಹಾರ ಧನದ ಮಂಜೂರಾತಿಯ ಆದೇಶದ ಪ್ರತಿಯನ್ನು ನೀಡಿದರು. ಮೊದಲ ಕಂತಿನ ಪರಿಹಾರ ಮೃತ ವ್ಯಕ್ತಿಯ ತಾಯಿ ಯಲ್ಲಮ್ಮ ಅವರಿಗೆ ಒಟ್ಟು ರೂ. 8.25 ಲಕ್ಷಗಳ ಪರಿಹಾರ ಧನದ ಪೈಕಿ ಮೊದಲ ಕಂತಿನ ರೂ. 4.125 ಲಕ್ಷ ರೂ.ಗಳ ಪರಿಹಾರದ ಆದೇಶ ಪ್ರತಿಯನ್ನುವಿತರಿಸಲಾಯಿತು.
ಅನುಕಂಪದ ಮೇಲೆ ಸರಕಾರಿ ಉದ್ಯೋಗ. ಮೃತ ವ್ಯಕ್ತಿಯ ಕುಟುಂಬಕ್ಕೆ ಉಳಿದ ಕಂತಿನ ಪರಿಹಾರ ಧನವನ್ನು ಕೊಪ್ಪಳ ಜಿಲ್ಲಾಧಿಕಾರಿಗಳ ಅನುಮೋದನೆಯೊಂದಿಗೆ ಸಂಬಂಧಿಸಿದವರ ಬ್ಯಾಂಕ್ ಖಾತೆಗೆ ಆರ್‌ಟಿಜಿಎಸ್ ಮೂಲಕ ಜಮೆ ಮಾಡಲಾಗುವುದು ಎಂದು ಸಚಿವರು ಭರವಸೆ ನೀಡಿದರು.

ಕುಟುಂಬದ ಸದಸ್ಯರಿಗೆ ಚಾಲ್ತಿಯಿರುವ ಸರ್ಕಾರದ ನಿಯಮಾವಳಿಗಳ ಪ್ರಕಾರ ಅನುಕಂಪ ಆಧಾರದ ಸರಕಾರಿ ನೌಕರಿಯನ್ನು ಸಮಾಜ ಕಲ್ಯಾಣ ಇಲಾಖೆ ಕಲಬುರ್ಗಿ ಪ್ರಾದೇಶಿಕ ಆಯುಕ್ತರ ಅನುಮೋದನೆಯೊಂದಿಗೆ ನೀಡಲಾಗುವುದು. ದೋಷಾರೋಪಣೆ ಪಟ್ಟಿ ಸಲ್ಲಿಕೆಯಾದ ನಂತರ ಉಳಿದ ಪರಿಹಾರ ಧನವನ್ನು ಮುಂಜೂರು ಮಾಡಲು ಕ್ರಮ ವಹಿಸಲಾಗುವುದು ಎಂದು ಸಚಿವ ಸಚಿವ ಶಿವರಾಜ ಎಸ್ ತಂಗಡಗಿ ತಿಳಿಸಿದರು.
ಸಚಿವರ ಬಳಿ ತನ್ನ ನೋವನ್ನು ಹೇಳಿಕೊಂಡ ಯಮನೂರಪ್ಪನ ತಾಯಿ ಯಲ್ಲಮ್ಮ, “ಮನೆಯಲ್ಲಿ ದುಡಿಯುವ ವ್ಯಕ್ತಿಯೇ ಸಾವಿಗೀಡಾಗಿದ್ದಾನೆ. ಮನೆ ನಡೆಸುವುದು ಕಷ್ಟವಾಗಿದೆ” ಎಂದು ಕಣ್ಣೀರು ಹಾಕಿದರು.
ಇದೇ ವೇಳೆ ಉಪಸ್ಥಿತರಿದ್ದ ದಲಿತ ಮುಖಂಡ, ಒಳಮೀಸಲಾತಿ ಹೋರಾಟಗಾರ ಕರಿಯಪ್ಪ ಗುಡಿಮನಿ ಮಾತನಾಡಿ, “ಇದು ಒಬ್ಬ ವ್ಯಕ್ತಿಯ ಸಾವಲ್ಲ. ಕೆಳ ಜಾತಿಯ ಜನರ ಸಾವು. ಜಿಲ್ಲೆಯಲ್ಲಿ ಜಾತಿ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿವೆ. ಇಂತಹ ದೌರ್ಜನ್ಯ ಪ್ರಕರಣಗಳಿಗೆ ಕಡಿವಾಣ ಹಾಕಬೇಕು. ಅಸ್ಪೃಶ್ಯತೆ ನಾಶವಾಗಬೇಕು. ಜಾತಿ ಧರ್ಮ ಭೇದ-ಭಾವ ಮಾಡದೇ ಎಲ್ಲರೂ ಒಂದಾಗಿ ಬಾಳುವ ಹಾಗೆ ವ್ಯವಸ್ಥೆ ಮಾಡಬೇಕು. ತಪ್ಪಿತಸ್ಥರಿಗೆ ಉಗ್ರ ಶಿಕ್ಷೆ ನೀಡುವ ಮೂಲಕ ಈ ಘಟನೆ ಇನ್ನಿತರರಿಗೆ ಎಚ್ಚರಿಕೆಯ ಗಂಟೆಯಾಗಬೇಕು. ಜಿಲ್ಲೆಯಲ್ಲಿನ ಎಲ್ಲ ಕಡೆಗಿನ ಯಾವುದೇ ಅಂಗಡಿ, ಸ್ಥಳಗಳಲ್ಲಿ ಅಸ್ಪೃಶ್ಯತೆ ಆಚರಣೆ ಮಾಡದಂತೆ ಜಿಲ್ಲಾಧಿಕಾರಿಗಳಿಂದ ಕಟ್ಟುನಿಟ್ಟಿನ ಆದೇಶ ಕೂಡಲೇ ರವಾನೆಯಾಗಬೇಕು. ಜಿಲ್ಲೆಯಲ್ಲಿ ಸೌಹಾರ್ದತೆ ಇದೆ. ಕೆಲವು ಕೆಟ್ಟ ಮನಸ್ಸುಗಳಿಂದ ಈ ರೀತಿ ಅವಘಡಗಳು ಸಂಭವಿಸುತ್ತಿವೆ. ಇದನ್ನು ಸರಿಪಡಿಸಬೇಕು” ಎಂದು ಮನವಿ ಮಾಡಿದರು.
ಇದನ್ನು ಓದಿದ್ದೀರಾ? ಬೆಂಗಳೂರು | ಸುದ್ದಿಗೋಷ್ಠಿ ನಡೆಸುತ್ತಿರುವಾಗಲೇ ಹೃದಯಾಘಾತ: ಸಾಮಾಜಿಕ ಕಾರ್ಯಕರ್ತ ನಿಧನ
ಸಚಿವ ಶಿವರಾಜ ತಂಗಡಗಿ ಮಾತನಾಡಿ, “ಜಾತಿ ದೌರ್ಜನ್ಯ ಅಕ್ಷಮ್ಯ ಇಂತಹ ಪ್ರಕರಣಗಳು ಮಾನವ ಕುಲಕ್ಕೆ ಕಳಂಕವನ್ನುಂಟು ಮಾಡುತ್ತವೆ. ಇಂತಹ ಘಟನೆಗಳು ಸಂಭವಿಸಿದಾಗ ಈ ಹಿಂದೆ ಮುಲಾಜಿಲ್ಲದೇ ಕ್ರಮ ಜರುಗಿಸಿದ್ದೇವೆ. ತಪ್ಪಿತಸ್ಥರನ್ನು ರಕ್ಷಣೆ ಮಾಡುವ ಪ್ರಶ್ನೆಯೇ ಇಲ್ಲ. ತಪ್ಪು ಕಂಡುಬಂದರೆ ಅದನ್ನು ಸಹಿಸುವುದಿಲ್ಲ. ಜಿಲ್ಲೆಯಲ್ಲಿ ಮತ್ತೆ ಇಂತಹ ಪ್ರಕರಣಗಳು ನಡೆಯದಂತೆ ನೋಡಿಕೊಳ್ಳಲಾಗುವುದು” ಎಂದು ಹೇಳಿದರು.
ಕೊಪ್ಪಳ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ರೆಡ್ಡಿ ಶ್ರೀನಿವಾಸ್, ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ರಾಮ್ ಎಲ್ ಅರಸಿದ್ಧಿ, ತಹಶೀಲ್ದಾರರಾದ ಬಸವರಾಜ ಟಿ., ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ರಾಜು ತಳವಾರ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
Manjunath