ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಗುಂಟಮಡು ಗ್ರಾಮದಲ್ಲಿ ಕುಡಿಯುವ ನೀರಿಗೆ ಆಹಾಕಾರ ಉಂಟಾಗಿದ್ದು, ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಈ ಬಗ್ಗೆ ತಿಳಿಸಿದ್ದರೂ ನಿರ್ಲಕ್ಷ್ಯವಹಿಸಿದ್ದಾರೆ ಎಂದು ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ.
ಗ್ರಾಮಕ್ಕೆ ಕುಡಿಯುವ ನೀರು ಒದಗಿಸುತ್ತಿದ್ದ ಕೊಳವೆ ಬಾವಿ ಕೆಟ್ಟು ತಿಂಗಳಾಯಿತು. ಇದರಿಂದ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಈ ಕುರಿತು ಅಧಿಕಾರಿಗಳಿಗೆ ತಿಳಿಸಲಾಗಿದೆ. ಆದರೆ, ಇಂದು ಮಾಡಿಸುತ್ತೇವೆ, ನಾಳೆ ಮಾಡಿಸುತ್ತೇವೆ ಎಂದು ಹೇಳಿಕೊಂಡು ನಮ್ಮ ಸಮಸ್ಯೆಯನ್ನು ಪರಿಹರಿಸಿಲ್ಲ ಎಂದು ದೂರುತ್ತಿದ್ದಾರೆ.
ರೈತರ ಹೊಲದಲ್ಲಿರುವ ಕೊಳವೆ ಬಾವಿಗಳಿಂದ ನೀರು ಸಂಗ್ರಹಿಸುತ್ತಿದ್ದೇವೆ. ಬೇಸಿಗೆಯಲ್ಲಿ ಬೆಳೆಗಳು ಒಣಗುವುದರಿಂದ ರೈತರೂ ನೀರು ಕೊಡಲು ನಿರಾಕರಿಸುತ್ತಿದ್ದಾರೆ. ಹಾಗಾಗಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸದಿದ್ದರೆ ಗ್ರಾಮ ಪಂಚಾಯ್ತಿ ಮುಂದೆ ಪ್ರತಿಭಟನೆಗಿಳಿಯುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಗ್ರಾಮದಲ್ಲಿ ಒಂದು ಶುದ್ಧ ಕುಡಿಯುವ ನೀರಿನ ಘಟಕ ಇದ್ದು. ಅದು ಕೆಟ್ಟು ಎಷ್ಟೋ ವರ್ಷಗಳಾಗಿರುವುದರಿಂದ ಅದರ ಗಾಜು ಮತ್ತು ನಲ್ಲಿ ಸೇರಿದಂತೆ ಅನೇಕ ವಸ್ತುಗಳು ಹಾಳಾಗಿದೆ. ಗುಂಟುಮಡು ತಾಲೂಕಿನ ಕೊನೆಯ ಗ್ರಾಮವಾಗಿರುವುದರಿಂದ ಇಲ್ಲಿ ಸಾರಿಗೆ ಸೌಲಭ್ಯವೂ ಸರಿಯಾಗಿಲ್ಲ. ನಮ್ಮ ಗ್ರಾಮ ಎಲ್ಲ ಸೌಲಭ್ಯಗಳಿಂದ ವಂಚಿತವಾಗಿದೆ, ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ ಕುಡಿಯುವ ನೀರಿನ ಸಮಸ್ಯೆಯನ್ನು ಆದಷ್ಟು ಬೇಗ ಪರಿಹರಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸುತ್ತಿದ್ದಾರೆ.