ಎಂಎಸ್‌ಪಿಎಲ್ ವಿಸ್ತರಣೆ ವಿರೋಧಿಸಿ ಜಿಲ್ಲಾ ಕೇಂದ್ರ ನಗರ ಹಾಗೂ ಕಾರ್ಖಾನೆಗಳಿರುವ ಗ್ರಾಮೀಣ ಪ್ರದೇಶದಲ್ಲಿ ಜಾಗೃತಿ ಆಂದೋಲನ ನಡೆಸಲು ಕೊಪ್ಪಳ ಜಿಲ್ಲಾ ಬಚಾವೋ ಆಂದೋಲ ಸಮಿತಿಯು ನಿರ್ಧರಿಸಿದೆ.
ನಗರದ ಪ್ರವಾಸಿ ಮಂದಿರದಲ್ಲಿ ಮೂರನೇ ಪೂರ್ವಭಾವಿ ಸಭೆಯಲ್ಲಿ ಚರ್ಚಿಸಿ “ಎಂಎಸ್‌ಪಿಎಲ್ ಬಲ್ಡೋಟಾ ಇತರೆ 50ಕ್ಕೂ ಹೆಚ್ಚು ಕಾರ್ಖಾನೆಗಳ ಬೂದಿ, ಧೂಳು ಪರಿಸರ ಮಾಲಿನ್ಯದಿಂದ ನಗರ ಹಾಗೂ ಸುತ್ತಲಿನ ಗ್ರಾಮಗಳ ಜನರು ಹಲವು ರೋಗಕ್ಕೆ ತುತ್ತಾಗಿ ತೊಂದರೆ ಅನುಭವಿಸುತ್ತಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿಯಾಗಿದೆ. ಆದಾಗ್ಯೂ ಎಂಎಸ್‌ಪಿಎಲ್ ಕಾರ್ಖಾನೆಗಳ ವಿಸ್ತರಣೆಗೆ ಮುಂದಾಗಿರುವುದು ಸರಿಯಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದವು.
ಎರಡು ದಿನಗಳಿಂದ ಬೆಂಗಳೂರಿನಲ್ಲಿ ನಡೆದಿರುವ ಬಂಡವಾಳ ಹೂಡಿಕೆ ಸಮಾವೇಶದಲ್ಲಿ ಎಂಎಸ್‌ಪಿಎಲ್ ಬಲ್ಡೋಟಾ ಕಂಪನಿಯು 54 ಸಾವಿರ ಕೋಟಿ ವೆಚ್ಚದಲ್ಲಿ ಕಾರ್ಖಾನೆ ವಿಸ್ತರಿಸಲು ಘೋಷಿಸಿದೆ. ಕಾರ್ಖಾನೆ ವಿಸ್ತರಣೆಯಾದರೆ ಶೇ:5 ರಷ್ಟು ತ್ಯಾಜ್ಯ ಧೂಳು ಹೆಚ್ಚಾಗುತ್ತದೆ. ಫೆಬ್ರುವರಿ 17 ರಿಂದ 21 ರವರೆಗೆ ಕೊಪ್ಪಳ ಜಿಲ್ಲಾ ಕೇಂದ್ರದ ನಗರ ಮತ್ತು ತಾಲೂಕಿನ ಕಾರ್ಖಾನೆಗಳ ಗ್ರಾಮೀಣ ಭಾಗಗಳಲ್ಲಿ ಜಾಗೃತಿ ಆಂದೋಲ ನಡೆಸಲು ಮತ್ತು ಕೊಪ್ಪಳ ನಗರದಲ್ಲಿ ಫೆಬ್ರವರಿ 22ರಂದು ಬೃಹತ್ ವಿಚಾರ ಸಂಕೀರ್ಣ ಕಾರ್ಯಕ್ರಮದಲ್ಲಿ ಪರಿಸರ ವಿಜ್ಞಾನಿ ನಾಗೇಶ್ ಹೆಗ್ಡೆ ಅವರನ್ನು ಆಹ್ವಾನಿಸಲು ತೀರ್ಮಾನಿಸಲಾಯಿತು.
ಅಪಾಯಕಾರಿಯಾದ ಮಾನವ ವಿನಾಶದ ಅಣು ವಿದ್ಯುತ್ ಸ್ಥಾವರ ಸ್ಥಾಪನೆಗೆ ನಡೆದಿರುವ ಸಿದ್ದತೆ ಕುರಿತು ಚರ್ಚಿಸಲಾಯಿತು. ರಾಜ್ಯ ಬಿಜೆಪಿ, ಕಾಂಗ್ರೆಸ್, ಜೆಡಎಸ್ ಸಂಸದರು ಪಾರ್ಲಿಮೆಂಟಿನಲ್ಲಿ ಈ ಬಗ್ಗೆ ಧ್ವನಿ ಎತ್ತಲು ಒತ್ತಾಯಿಸಲು ನಿರ್ಧರಿಸಲಾಯಿತು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ದಿಟ್ಟ ನಿರ್ಧಾರ ತೆಗೆದುಕೊಳ್ಳದಿದ್ದರೆ, ಕೊಪ್ಪಳ ಜಿಲ್ಲೆಯ ಪ್ರಗತಿಪರರ, ಪರಿಸರವಾದಿಗಳ ಮತ್ತು ಪ್ರಜ್ಞಾವಂತರ ಭಾರಿ ಪ್ರತಿರೋಧ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಲಾಯಿತು.
ಈ ಸುದ್ದಿ ಓದಿದ್ದೀರಾ?: ಕೊಪ್ಪಳ | ವಿವಿ ಮುಚ್ಚಲು ಮುಂದಾದರೆ ಜನಪ್ರತಿನಿಧಿಗಳ ವಿರುದ್ಧ ಹೋರಾಟದ ಎಚ್ಚರಿಕೆ
ಸಭೆಯಲ್ಲಿ ಹಿರಿಯ ಬಂಡಾಯ ಸಾಹಿತಿ ಅಲ್ಲಮ ಪ್ರಭು ಬೆಟ್ಟದೂರ, ಮಹಾಂತೇಶ ಕೊತ್ತಬಾಳ, ಡಿ ಹೆಚ್ ಪೂಜಾರ, ಹನುಮಂತಪ್ಪ ಹೊಳೆಯಾಚೆ, ಬಸವರಾಜ ಶೀಲವಂತರ, ಟಿ ರತ್ನಾಕರ ಕುಕನೂರ, ಖಾಸೀಮ್ ಸರ್ದಾರ, ಶರಣು ಗಡ್ಡಿ, ಜ್ಯೋತಿ ಗೊಂಡಬಾಳ, ಕೆ ಬಿ ಗೋನಾಳ, ಕಾಶಪ್ಪ ಚಲವಾದಿ, ರಾಘು ಚಾಕರಿ, ರಾಮಣ್ಣ ಚೌಡಕಿ, ಮುದುಕಪ್ಪ ಹೊಸಮನಿ ನರೆಗಲ್, ಮೂಕಪ್ಪ ಬಸಾಪುರ, ಶಿವಪ್ಪ ಹಡಪದ್ ಇತರರು ಇದ್ದರು.
