ರಾಜ್ಯದಲ್ಲಿ ಕ್ರಮೇಣವಾಗಿ ವಿದ್ಯಾರ್ಥಿವೇತನ ಕಡಿತಗೊಳುತ್ತಿರುವುದರಿಂದ ಅಧಿಕ ಪ್ರಮಾಣದ ವಿದ್ಯಾರ್ಥಿಗಳು ಉನ್ನತ ಶಿಕ್ಷಣದಿಂದ ದೂರ ಉಳಿಯುವ ಅನಿವಾರ್ಯತೆಗೆ ತಳ್ಳಲ್ಪಟ್ಟಿದ್ದಾರೆ. ಈ ಕೂಡಲೇ ಸರ್ಕಾರ ಎಲ್ಲಾ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಿ ಉನ್ನತ ಶಿಕ್ಷಣ್ಕೆ ಒತ್ತು ನೀಡಬೇಕು ಎಂದು ಆಗ್ರಹಿಸಿ, ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ ಅವರಿಗೆ ಎಐಡಿಎಸ್ಒ ಮನವಿ ಸಲ್ಲಿಸಿತು.
ಈ ವೇಳೆ ಎಐಡಿಎಸ್ಒ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಕಲ್ಯಾಣ್ ವಿ ಮಾತನಾಡಿ, “ಕಳೆದ ಮೂರು ವರ್ಷಗಳಿಂದ ರಾಜ್ಯದ ವಿದ್ಯಾರ್ಥಿಗಳಿಗೆ ಸರಿಯಾಗಿ ವಿದ್ಯಾರ್ಥಿವೇತನ ಲಭ್ಯವಾಗುತ್ತಿಲ್ಲ. ಹಿಂದುಳಿದ ಮತ್ತು ಅಲ್ಪಸಂಖ್ಯಾತ ಇಲಾಖೆ ಅಡಿಯಲ್ಲಿ ಬರುವ ಪದವಿ, ಸ್ನಾತಕೋತ್ತರ, ಇಂಜಿನಿಯರಿಂಗ್ ಮತ್ತು ಮೆಡಿಕಲ್ ವಿದ್ಯಾರ್ಥಿಗಳಿಗೂ ಕೂಡ ವಿದ್ಯಾರ್ಥಿವೇತನ ಲಭ್ಯವಾಗುತ್ತಿಲ್ಲ. ರಾಜ್ಯದ ಹಲವೆಡೆ ಕೆಲವು ಎಸ್‌ಸಿ/ಎಸ್‌ಟಿ ವಿದ್ಯಾರ್ಥಿಗಳು ಸಹ ವಿದ್ಯಾರ್ಥಿವೇತನದಿಂದ ವಂಚಿತರಾಗಿದ್ದಾರೆ. ಒಂದೆಡೆ, ದಿನದಿಂದ ದಿನಕ್ಕೆ ಶಿಕ್ಷಣದ- ಅದರಲ್ಲೂ, ಉನ್ನತ ಶಿಕ್ಷಣದ ವೆಚ್ಚ ಅತ್ಯಂತ ಅಧಿಕವಾಗುತ್ತಿದೆ. ಇನ್ನೊಂದೆಡೆ, ಕ್ರಮೇಣವಾಗಿ ವಿದ್ಯಾರ್ಥಿವೇತನ ಕಡಿತಗೊಳುತ್ತಿದೆ. ಬಡ ಮಕ್ಕಳ ಶಿಕ್ಷಣದ ಕನಸುಗಳು ಇದರಿಂದ ಛಿದ್ರಗೊಳ್ಳುತ್ತಿವೆ. ರಾಜ್ಯ ಸರ್ಕಾರವು ಈ ಕುರಿತು ಸೂಕ್ತ ಪರಿಹಾರ ಒದಗಿಸಬೇಕು” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ?: ಕೊಪ್ಪಳ | ಗಿಣಿಗೇರಾ ಪಿಎಚ್‌ಸಿಯನ್ನು ಸಮುದಾಯ ಆರೋಗ್ಯ ಕೇಂದ್ರವಾಗಿ ಉನ್ನತೀಕರಿಸುವಂತೆ ಆಗ್ರಹಿಸಿ ಪ್ರತಿಭಟನೆ
ಇತ್ತೀಚೆಗಷ್ಟೆ ರಾಜ್ಯ ಸರ್ಕಾರ ‘ಹಬ್ ಅಂಡ್ ಸ್ಪೋಕ್’ ಅಡಿಯಲ್ಲಿ ಕಡಿಮೆ ಹಾಜರಾತಿ ಇರುವ ಸರ್ಕಾರಿ ಶಾಲೆಗಳನ್ನು ಇತರ ಶಾಲೆಗಳೊಂದಿಗೆ ಸಂಯೋಜಿಸುವ ನಿರ್ಧಾರವನ್ನು ಪ್ರಕಟಿಸಿದೆ. ಈ ನಿಟ್ಟಿನಲ್ಲಿ ಶಿಕ್ಷಣ ಸುಧಾರಣಾ ಸಮಿತಿಯನ್ನು ಸಹ ರಚಿಸಲಾಗಿದೆ. ಪತ್ರಿಕೆಗಳಲ್ಲಿ ವರದಿಯಾಗಿರುವಂತೆ ರಾಜ್ಯದಲ್ಲಿ 4 ಸಾವಿರಕ್ಕೂ ಅಧಿಕ ಶಾಲೆಗಳು 10 ಮಕ್ಕಳಿಗಿಂತ ಕಡಿಮೆ ದಾಖಲಾತಿಯನ್ನು ಹೊಂದಿವೆ. ಶಾಲೆಗಳ ಭವಿಷ್ಯದ ಕುರಿತು ಪಾಲಕರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳಲ್ಲಿ ಆತಂಕ ತಲೆದೋರಿದೆ. ಸರ್ಕಾರವು ರಾಜ್ಯದ ಬಡ ಮಕ್ಕಳ ಶಿಕ್ಷಣದ ಆಶಾಕಿರಣವಾಗಿರುವ ಸರ್ಕಾರಿ ಶಾಲೆಗಳನ್ನು ಬಲಪಡಿಸಬೇಕು. ಆದ್ಯತೆಯ ಮೇರೆಗೆ ಶಿಕ್ಷಣಕ್ಕೆ ಬಜೆಟ್‌ನಲ್ಲಿ ಅನುದಾನ ನಿಗದಿಪಡಿಸಬೇಕು ಮತ್ತು ಎಲ್ಲ ವಿಭಾಗದ ಎಲ್ಲ ಸಮುದಾಯದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ಖಾತ್ರಿ ಪಡಿಸಬೇಕು ಹಾಗೂ ಸರ್ಕಾರಿ ಶಾಲೆಗಳನ್ನು ಸಂಯೋಜನೆಗೊಳಿಸುವ ಬದಲು ಹಾಜರಾತಿ ಕಡಿಮೆಯಿರುವ ಶಾಲೆಗಳನ್ನು ಅವಶ್ಯಕ ಸೌಲಭ್ಯ ನೀಡಿ ರಕ್ಷಿಸಬೇಕು” ಎಂದು ಮನವಿ ಮಾಡಿದರು.
