ಕೊಪ್ಪಳ ತಾಲೂಕಿನ ಮುದ್ದಾಬಳ್ಳಿ ಗ್ರಾಮದ ಸಮೀಪ ಸಕ್ಕರೆ ಕಾರ್ಖಾನೆ ಸ್ಥಾಪಿಸಲು ಯುಕೆಇಎಂ ಲಿ. ಕಂಪನಿಯು ಗೊಂಡಬಾಳ ಗ್ರಾಮ ಪಂಚಾಯತಿಗೆ ಎನ್‌ಒಸಿ ಪಡೆಯಲು ಅರ್ಜಿ ಸಲ್ಲಿಸಿದ್ದು, ಈ ಕುರಿತು ಗ್ರಾಮ ಪಂಚಾಯತಿ ತಕರಾರು ಅರ್ಜಿ ಸಲ್ಲಿಸಲು ಬಹಿರಂಗ ಸೂಚನೆ ಹೊರಡಿಸಿದೆ. ಈ ಹಿನ್ನೆಲೆ ಮುದ್ದಾಬಳ್ಳಿ ಹಾಗೂ ಸುತ್ತಲಿನ ಹಳ್ಳಿಗಳ ರೈತರು ಪ್ರತಿಭಟನೆ ನಡೆಸಿ, ತಕರಾರು ಅರ್ಜಿ ಸಲ್ಲಿಸಿದ್ದಾರೆ. ಕಾರ್ಖಾನೆ ಸ್ಥಾಪಿಸಲು ಮುಂದಾದರೆ ಕೋರ್ಟ್ ಮೊರೆ ಹೋಗುವುದಾಗಿ ಹಾಗೂ ಬೃಹತ್ ಪ್ರಮಾಣದಲ್ಲಿ ಪ್ರತಿಭಟನೆ ಮಾಡುವುದಾಗಿ ಎಚ್ಚರಿಸಿದ್ದಾರೆ.
ಈಗಾಗಲೇ ಕೈಗಾರಿಕಾ ಕಾರ್ಖಾನೆಗಳ ಸ್ಥಾಪನೆ ಹಾಗೂ ವಿಸ್ತರಣೆಯನ್ನು ವಿರೋಧಿಸಿ ಜಿಲ್ಲೆಯಾದ್ಯಂತ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದೆ. ಕೆಲವು ತಿಂಗಳ ಹಿಂದೆ ಬಲ್ಡೋಟಾ ಕಾರ್ಖಾನೆಯ ವಿಸ್ತರಣೆ ವಿರೋಧಿಸಿ ಸಾವಿರಾರು ಜನ ಸೇರಿ ಬೃಹತ್ ಪ್ರತಿಭಟನೆ ನಡೆಸಿದರು. ಇದರ ಬೆನ್ನಲ್ಲೇ ಮತ್ತೆ ಮುದ್ದಾಬಳ್ಳಿ ಗ್ರಾಮದಲ್ಲಿ ಕಾರ್ಖಾನೆಯ ವಿರುದ್ಧ ಕೂಗು ಕೇಳಿ ಬರುತ್ತಿದೆ.
ಈಗಾಗಲೇ ಕಾರ್ಖಾನೆಯ ಧೂಳು, ಹೊಗೆ ತಾಲೂಕಿನ ಸುಮಾರು 30 ಹಳ್ಳಿಯ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಇದರಿಂದ ಕೊಪ್ಪಳ ಪರಿಸರ ಪ್ರೇಮಿಗಳು ಹಾಗೂ ಜಿಲ್ಲಾ ಬಚಾವೋ ಆಂದೋಲನ ಹೋರಾಟಗಾರರು ಕೊಪ್ಪಳದ ಸುತ್ತಮುತ್ತಲೂ ಯಾವುದೇ ಹೊಸ ಕಾರ್ಖಾನೆಗಳು ಸ್ಥಾಪನೆಯಾಗುವುದು ಬೇಡ ಎಂದು ಬೃಹತ್ ಮಟ್ಟದ ಹೊರಾಟ ಮಾಡಿ ಸರಕಾರವನ್ನು ಎಚ್ಚರಿಸಿದ್ದೂ ಆಯಿತು.
ಇದೀಗ ಮುದ್ದಾಬಳ್ಳಿ ಗ್ರಾಮದಲ್ಲಿ ಸಕ್ಕರೆ ಕಾರ್ಖಾನೆ ಸ್ಥಾಪನೆಗೆ ಮುಂದಾಗಿದ್ದು, ಈಗಾಗಲೇ ಕಂಪನಿ ಕಾರ್ಖಾನೆ ಸ್ಥಾಪನೆಗೆ ಸರಕಾರದ ವಿವಿಧ ಇಲಾಖೆಗಳಿಂದ ಅನುಮತಿ ಪಡೆದು; ಕೊನೆಯದಾಗಿ ಗೊಂಡಬಾಳ ಪಂಚಾಯತಿಯಿಂದ ನಿರಪೇಕ್ಷಣ ಪಡೆಯಲು ಅರ್ಜಿ ಸಲ್ಲಿಸಿದೆ.
ಈ ಕುರಿತು ಗೊಂಡಬಾಳ ಗ್ರಾಮ ಪಂಚಾಯತಿಯು ಬಹಿರಂಗ ನೋಟಿಸ್ ಹೊರಡಿಸಿದ್ದು, ಸಾರ್ವಜನಿಕರು ಗ್ರಾಮಸ್ಥರು ತಕರಾರು ಅರ್ಜಿಗಳಿದ್ದಲ್ಲಿ ಕಾಲಮಿತಿಯಲ್ಲಿ ಗ್ರಾಮ ಪಂಚಾಯತಿಗೆ ಸಲ್ಲಿಸುವಂತೆ ತಿಳಿಸಿದೆ. ಈ ಹಿನ್ನೆಲೆ ಮುದ್ದಾಬಳ್ಳಿ, ಹೊಸ ಗೊಂಡಬಾಳ, ಹಳೆ ಗೊಂಡಬಾಳ ಸೇರಿದಂತೆ ಸುತ್ತಲಿನ ಹತ್ತಾರು ಹಳ್ಳಿಗಳ ಜನರಲ್ಲಿ ಭಾರೀ ಆತಂಕ ಸೃಷ್ಟಿಯಾಗಿದೆ.
ಇದನ್ನೂ ಓದಿ: ಕೊಪ್ಪಳ | ವಿಶ್ವಕ್ಕೆ ಭಾರತ ಕೊಟ್ಟ ಅಮೂಲ್ಯ ಸಂಪತ್ತು ʼಯೋಗʼ: ಕುಲಕರ್ಣಿ
ಯಾವುದೇ ಕಾರಣಕ್ಕೂ ಮುದ್ದಾಬಳ್ಳಿ ಗೊಂಡಬಾಳ ಸೀಮಾ ವ್ಯಾಪ್ತಿಯಲ್ಲಿ ಸಕ್ಕರೆ ಕಾರ್ಖಾನೆ ಸ್ಥಾಪನೆ ಮಾಡುವುದು ಬೇಡ
ಎನ್ನುವ ಕೂಗು ಈ ಹಿಂದೆಯೂ ಪ್ರಬಲವಾಗಿ ವ್ಯಕ್ತವಾಗಿತ್ತು. ಈ ಹಿಂದೆ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ನಡೆದ ಅಹವಾಲು ಸಭೆಯಲ್ಲೂ ಸಹಿತ ನೂರಾರು ರೈತರು ನಮಗೆ ಸಕ್ಕರೆ ಕಾರ್ಖಾನೆ ಬೇಡ ಎನ್ನುವಂತ ತಕರಾರು ಮನವಿಯನ್ನು ಲಿಖಿತ ರೂಪದಲ್ಲಿ ಸಲ್ಲಿಸಿದ್ದರು.
ಇವೆಲ್ಲ ಬೆಳವಣಿಗೆಗಳ ಮಧ್ಯೆಯು ಕಾಣದ ರಾಜಕೀಯ ಆಟದಿಂದ ಮುದ್ದಾಬಳ್ಳಿ ಯುಕೆಇಎಂ ಕಂಪನಿಯು ಸಕ್ಕರೆ ಕಾರ್ಖಾನೆ ಸ್ಥಾಪಿಸಲು ಹವಣಿಸುತ್ತಿದೆ. ಕಾರ್ಖಾನೆಯ ಸ್ಥಾಪನೆಗೆ ಎಲ್ಲ ತಯಾರಿಯನ್ನು ಮಾಡಿಕೊಂಡಿದೆ. ಆದರೆ ಜನರು ಇದಕ್ಕೆ ಪ್ರಬಲವಾಗಿ ವಿರೋಧ ವ್ಯಕ್ತಪಡಿಸಿದ್ದಾರೆ. ಮಂಗಳವಾರ ರೈತರು ದಿಢೀರ್ ಪ್ರತಿಭಟನೆ ನಡೆಸಿ ಗ್ರಾಪಂಗೆ ತಕರಾರು ಅರ್ಜಿ ಸಲ್ಲಿಸುತ್ತಿದ್ದಾರೆ. ಸಕ್ಕರೆ ಕಾರ್ಖಾನೆ ಸ್ಥಾಪನೆ ವಿರೋಧಿಸಿ ಕೋರ್ಟ್ ಮೋರೆ ಹೋಗುವುದಾಗಿ ಎಚ್ಚರಿಕೆ ನೀಡಿದ್ದಾರೆ.