ದಲಿತ ಎಂಬ ಕಾರಣಕ್ಕೆ ಕ್ಷೌರ ಮಾಡಲು ನಿರಾಕರಿಸಿದ್ದಲ್ಲದೆ ಕತ್ತರಿಯಿಂದ ಇರಿದು ಕೊಲೆ ಮಾಡಿರುವ ದಾರುಣ ಘಟನೆ ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕು ಸಂಗನಾಳ ಗ್ರಾಮದಲ್ಲಿ ನಡೆದಿದೆ.
ಯಮನೂರಪ್ಪ ಈರಪ್ಪ ಬಂಡಿಹಾಳ ಮೃತ ದಲಿತ ಯುವಕ ಎಂದು ಗುರುತಿಸಲಾಗಿದೆ.
ಯಮನೂರಪ್ಪ ಕ್ಷೌರ ಮಾಡಿಸಿಕೊಳ್ಳಲು ಸೆಲೂನ್‌ಗೆ ಹೋಗಿದ್ದ ಈ ವೇಳೆ ಸೆಲೂನ್ ಮಾಲೀಕ ಮುದುಕಪ್ಪ ಅಂದಪ್ಪ ಹಡಪದ ಅವರು, ‘ನೀನು ದಲಿತ. ಹಾಗಾಗಿ, ನಾವು ಕ್ಷೌರ ಮಾಡುವುದಿಲ್ಲ’ ಎಂದು ಹೇಳಿದ್ದಾನೆ .
ಇದನ್ನು ದಲಿತ ಯುವಕ ಪ್ರಶ್ನಿಸಿದ್ದಕ್ಕೆ , ಮಾತಿಗೆ ಮಾತು ಬೆಳೆದು ಮುದುಕಪ್ಪ ಹಡಪದ ಕೈಯ್ಯಲ್ಲಿದ್ದ ಕತ್ತರಿಯಿಂದ ಯಮನೂರಪ್ಪ ಹೊಟ್ಟೆಗೆ ಚುಚ್ಚಿ ಕೊಲೆ ಮಾಡಿದ್ದಾನೆ ಎಂದು ಸ್ಥಳೀಯ ಯುವಕ ಧರ್ಮರಾಜ್ ಮಾಹಿತಿ ನೀಡಿದ್ದಾನೆ.
ಸಂಗನಾಳ ಗ್ರಾಮದ ಇಡೀ ದಲಿತ ಸಮುದಾಯದವರನ್ನು ಹೇರ್ ಕಟ್ಟಿಂಗ್ ಮಾಡಿಸಲು ಅವಕಾಶ ನೀಡುತ್ತಿಲ್ಲ. ಯಲಬುರ್ಗಾ ತಾಲೂಕಿಗೆ ಹೋಗಿ ಹೇರ್ ಕಟ್ ಮಾಡಿಸುತ್ತಾ ಬಂದಿದ್ದೇವೆ. ದಲಿತರೆಂಬ ಕಾರಣಕ್ಕೆ ಅಸ್ಪೃಶ್ಯತೆ ಆಚರಣೆ ನಡೆಯುತ್ತಿದೆ ಎಂದು ಗ್ರಾಮದ ದಲಿತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಹಲವಾರು ಸಮುದಾಯಗಳ ಜನರ ಕ್ಷೌರ ಮಾಡಲಾಗುತ್ತದೆ. ಆದರೆ ದಲಿತ ಸಮುದಾಯದವರಿಗೆ ಮಾತ್ರ ಮಾಡಲ್ಲ. ಯಾವ ಕಾರಣಕ್ಕೆ ಅಂತ ಪ್ರಶ್ನಿಸಿದರೆ, ಕೊಲೆ ಮಾಡುವ ಹಂತಕ್ಕೆ ಬಂದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಯಲಬುರ್ಗಾ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಜರುಗಿದ್ದು, ಮಾಹಿತಿ ತಿಳಿಯುತ್ತಿದ್ದಂತೆಯೇ ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದರು. ಕೂಡಲೇ ಆರೋಪಿ ಮುದುಕಪ್ಪ ಹಡಪದನನ್ನು ಬಂಧಿಸಿರುವುದಾಗಿ ವರದಿಯಾಗಿದೆ. ಈ ಘಟನೆಯ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ಈ ದಿನ. ಕಾಮ್ ತಂಡ ಗ್ರಾಮಕ್ಕೆ ತೆರಳಿದೆ.

