ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಸಮಿತಿಯು ಮಾ.10ರಂದು ನಗರದಲ್ಲಿ ‘ಮಾಲಿನ್ಯ ನಿಯಂತ್ರಣ ಮಾಡುವ ಪರಿಸರ ಇಲಾಖೆ ಏನು ಮಾಡುತ್ತದೆ’ ಎಂಬ ಜಾಗೃತಿ ಕಾರ್ಯಕ್ರಮದ ಅಂಗವಾಗಿ ಮಾನವ ಸರಪಳಿ ಆಂದೋಲನ ಆಯೋಜಿಸಿದೆ.
ಪರಿಸರ ಉಳಿಸುವವರು, ಪ್ರಜ್ಞಾವಂತರು ಸೇರಿ ಜಾಗೃತಿ ಮೂಡಿಸಲು ನಮ್ಮ ನಡೆ ಕಾರ್ಖಾನೆ ಬಾಧಿತರೆಡೆಗೆ, ನಮ್ಮ ನಡೆ ಹಳ್ಳಿ ಕಡೆ ಘೋಷಣೆಯೊಂದಿಗೆ ಯುವಕರ ಶಿಬಿರ ಆಯೋಜಿಸಿದೆ. ಕೊಪ್ಪಳ ನಗರಕ್ಕೆ ಹೊಂದಿಕೊಂಡ ಬಲ್ಡೋಟಾ ಬಿಎಸ್‌ಪಿಎಲ್ ಕಾರ್ಖಾನೆ ವಿಸ್ತರಣೆಗೆ ಕೊಟ್ಟ ಅನುಮತಿಯನ್ನು ಸರ್ಕಾರ ವಾಪಸ್ ಪಡೆಯಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಸರ್ಕಾರದ ಮುಂದಿಡಲಿದೆ.
ಗಿಣಿಗೇರಿ, ಅಲ್ಲಾನಗರ, ಕನಕಾಪುರ, ಬಸಾಪುರ, ಹಿರೇಬಗನಾಳ, ಚಿಕ್ಕಬಗನಾಳ, ಹಿರೇಕಾಸನಕಂಡಿ, ಲಾಚನಕೇರಿ, ಕುಣಿಕೇರಿ, ಕುಣಿಕೇರಿ ತಾಂಡಾ, ಹಾಲವರ್ತಿ, ಬೇವಿನಹಳ್ಳಿ, ಲಿಂಗದಳ್ಳಿ, ಹೊಸ ಕನಕಾಪುರ, ಕನಕಾಪುರ ತಾಂಡಾ, ಶಹಾಪುರ, ಕೆರೆಹಳ್ಳಿ, ಹಿಟ್ನಾಳ, ಹುಲಿಗಿ ಗ್ರಾಮಗಳ ಜನರು ಕಾರ್ಖಾನೆಗಳ ಧೂಳು, ಹೊಗೆ, ಘಾಟು ವಾಸನೆ ಸೇವಿಸಿ ಅನಾರೋಗ್ಯ ಪೀಡಿತರಾಗಿದ್ದು, ಕಳೆದ 10 ವರ್ಷಗಳಲ್ಲಿ ರೋಗ ಬಾಧನೆಯಾದವರ ಸಮೀಕ್ಷೆ ನಡೆಸಿ, ಎಐಐಎಂಎಸ್‌ನಿಂದ ಆರೋಗ್ಯ ತಪಾಸಣೆ ಕೈಕೊಳ್ಳಬೇಕು ಎಂದು ಸಮಿತಿಯು ಮನವಿ ಮಾಡಲಿದೆ
ಎಂಎಸ್‌ಪಿಎಲ್ ಕಂಪನಿಯವರು ಬಸಾಪುರ ಗ್ರಾಮ ಸ.ನಂ. 143ರ 44.35 ಎಕರೆ ಸಾರ್ವಜನಿಕ ಕೆರೆ ಕಬಳಿಸಿ, ರಸ್ತೆ ಬಂದ್ ಮಾಡಿ ಕಟ್ಟಿರುವ ಕಾಂಪೌಂಡ್ ತೆರವು ಮಾಡಿ, ಜನ ಜಾನುವಾರು ಓಡಾಡಲು ರಸ್ತೆ ಸುಗಮಗೊಳಿಸಬೇಕು.
ತಾಲೂಕಿನ 20 ಗ್ರಾಮಗಳ ಜನರ ಜೀವಹಾನಿ, ಆರೋಗ್ಯ ಹಾನಿ, ಕೃಷಿ ಬೆಳೆ ಹಾನಿ, ಜಾನುವಾರುಗಳ ಸಾವು, ಭೂಮಿ ಫಲವತ್ತತೆ ಹಾನಿ, ಅಂತರ್ಜಲ ವಿಷಗೊಳಿಸಿ ಪರಿಸರ ಕಾಯ್ದೆಗಳನ್ನು ಉಲ್ಲಂಘಿಸಿದ ಕಾರ್ಖಾನೆಗಳನ್ನು ಸೀಜ್ ಮಾಡಬೇಕು. ಆಹ್ಲಾದಕರ ಶುದ್ಧಗಾಳಿ, ವಾತಾವರಣ ಮಾಲಿನ್ಯವಾಗಿ, ಧೂಳು ಬಿದ್ದ ಮೇವು ತಿಂದು ಜಾನುವಾರು ಸಾಯಲು ಈ ಕಾರ್ಖಾನೆಗಳು ಕಾರಣವಾಗಿದ್ದು, ಇದರ ಮೇಲೆ ಉನ್ನತ ಮಟ್ಟದ ತಾಂತ್ರಿಕ ಸಂಸ್ಥೆ ಐಐಎಸ್‌ಸಿ ಸಂಸ್ಥೆಯಿಂದ ಸ್ವತಂತ್ರ ಅಧ್ಯಯನ ಮಾಡಿಸಬೇಕು. ಜಿಲ್ಲಾಡಳಿತ ಮತ್ತು ಕರ್ನಾಟಕ ಸರ್ಕಾರ ಈ ಕೆಲಸವನ್ನು ಅತೀ ಜರೂರಾಗಿ ಮಾಡಬೇಕಿದೆ ಎಂದು ಆಗ್ರಹಿಸಲಿದೆ.
ಈ ಭಾಗದ ಕೆಲ ಯುವಕರು ಕಾರ್ಖಾನೆ ಕೆಲಸಕ್ಕೆ ಸೇರಿ, ಅಸ್ತಮಾ, ಟಿಬಿ ರೋಗಕ್ಕೆ ತುತ್ತಾಗಿ ಕೆಲಸ ತೊರೆಯುತ್ತಿದ್ದರೆ, ಮತ್ತೊಂದೆಡೆ ಬೇರೆ ಊರುಗಳಿಂದ ಹೆಣ್ಣು ಸಿಗದೆ ಜೀವನ ದುಸ್ತರವಾಗಿದೆ. ಕಳೆದ ಹತ್ತು ವರ್ಷಗಳಲ್ಲಿ ಇಲ್ಲಿನ ರೋಗದ ಪ್ರಮಾಣ ಏರು ಗತಿಯಲ್ಲಿ ಸಾಗಿದೆ. ಮಾಲಿನ್ಯಕ್ಕೆ ಕಾರಣವಾದ ಎಲ್ಲಾ ಬಗೆಯ ಕಾರ್ಖಾನೆಗಳನ್ನು ಸರ್ಕಾರ ಮುಚ್ಚುವ ತೀರ್ಮಾನ ಮಾಡಬೇಕು. ಇನ್ನು ಹೊರ ರಾಜ್ಯಗಳಾದ ಬಿಹಾರ, ಜಾರ್ಖಂಡ, ಒರಿಸ್ಸಾದ ಕಾರ್ಮಿಕರು ಕಾರ್ಖಾನೆಯ ಅಪಾಯಕಾರಿ ಕೆಲಸದಲ್ಲಿ ತೊಡಗಿ ಸಾಯುತ್ತಿದ್ದು, ವಲಸೆ ಕಾರ್ಮಿಕರ ಸಮೀಕ್ಷೆ ನಡೆಸಬೇಕು ಮತ್ತು ಸಾವಿನ ಪ್ರಕರಣಗಳ ಮೇಲೆ ತನಿಖೆ ನಡೆಸಬೇಕು ಎಂದು ಮನವಿ ಮಾಡಲಿದೆ.
ಇದನ್ನೂ ಓದಿ: ಕೊಪ್ಪಳ ತಾಲೂಕು ಸಾಹಿತ್ಯ ಸಮ್ಮೇಳನ ಅಧ್ಯಕ್ಷೆಯಾಗಿ ಮಾಲಾ ಡಿ ಬಡಿಗೇರ ಆಯ್ಕೆ
ಸಮಿತಿಯ ಪ್ರಧಾನ ಸಂಚಾಲಕ ಅಲ್ಲಮಪ್ರಭು ಬೆಟ್ಟದೂರು, ಸಹ ಸಂಚಾಲಕ ಕೆ.ಬಿ.ಗೋನಾಳ, ನಜೀರಸಾಬ ಮೂಲಿಮನಿ, ಜ್ಯೋತಿ ಗೊಂಡಬಾಳ, ಶರಣು ಗಡ್ಡಿ, ಮಹಾತೇಶ ಕೊತಬಾಳ, ಬಸವರಾಜ್ ಶೀಲವಂತರ, ಮಂಜುನಾಥ ಗೊಂಡಬಾಳ, ಕಾಶಪ್ಪ ಛಲವಾದಿ, ಮುದುಕಪ್ಪ ಹೊಸಮನಿ ಹಾಗೂ ಇತರರಿದ್ದರು.
