ಇನ್ನೂರು ವರ್ಷಗಳ ಹಿಂದೆ ದೇಶದಲ್ಲಿ ಯಾವುದೇ ಮೂಲಭೂತ ಹಕ್ಕುಗಳು ಶೋಷಿತರಿಗೆ, ದಮನಿತರಿಗೆ ಇರಲಿಲ್ಲ. ಅಂತಹವರಲ್ಲಿ ಅರಿವು ಮೂಡಿಸಲು ಜ್ಯೋತಿಬಾ ಫುಲೆ ಅವರು ಸತ್ಯಶೋಧಕ ಸಮಾಜವನ್ನು ಕಟ್ಟಿದರು ಎಂದು ನೃತ್ಯ ಮತ್ತು ಸಂಗೀತ ಅಕಾಡೆಮಿ ರಾಜ್ಯ ಸದಸ್ಯ ರಮೇಶ್ ಗಬ್ಬೂರ ಹೇಳಿದರು.
ಗಂಗಾವತಿ ತಾಲೂಕಿನ ಶ್ರೀರಾಮನಗರ ಪಟ್ಟಣದಲ್ಲಿ ದಲಿತ ಸಾಹಿತ್ಯ ಪರಿಷತ್ ರಾಜ್ಯ ಘಟಕ ವತಿಯಿಂದ ಹಮ್ಮಿಕೊಂಡಿದ್ದ ಸಾವಿತ್ರಿಬಾಯಿ ಫುಲೆ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ತಳ ಸಮುದಾಯದ ಮಕ್ಕಳು ಅಕ್ಷರ ಕಲಿತರೆ, ಮಹಿಳೆಯರು ಶಾಲೆಗೆ ಹೋದ್ರೆ ಶಾಸ್ತ್ರ, ಧರ್ಮ ವಿರೋಧಿಗಳೆಂದು ಕರೆಯುತ್ತಿದ್ದ ಕಾಲದಲ್ಲಿ ಜ್ಯೋತಿಬಾ ಫುಲೆ ಸತ್ಯಶೋಧಕ ಸಮಾಜ ಕಟ್ಟಿದರು. ಸಾವಿತ್ರಿಬಾಯಿ, ಜ್ಯೋತಿಬಾ ಫುಲೆ ಬಾಲ್ಯ ವಿವಾಹವಾಗಿದ್ದರೂ ಮುಂದೆ ಅವರು ಬಾಲ್ಯ ವಿವಾಹದ ವಿರುದ್ಧ ಶಿಕ್ಷಣ ಕ್ರಾಂತಿಯನ್ನೇ ಮಾಡಿದರು. ದಲಿತರಿಗಾಗಿಯೇ ತಮ್ಮ ಮನೆಯ ಹಿತ್ತಲಲ್ಲಿ ಬಾವಿ ಕೊರೆಸಿ ಅಲ್ಲಿ ಶೋಷಿತರು ನೀರು ಸೇದಲು ಅವಕಾಶ ಮಾಡಿಕೊಟ್ಟರು. ಸಾವಿತ್ರಿ ಶಾಲೆಗೆ ಹೊಗದಂತೆ ತಡೆಯಲು ಮೇಲ್ವರ್ಗದವರು ಜ್ಯೋತಿಬಾ ಅವರ ತಂದೆಗೆ ಪ್ರಚೋದನೆ ಮಾಡಿದರೂ ಜ್ಯೋತಿಬಾ ಹೆಂಡತಿಗೆ ಓದು-ಬರಹ ಕಲಿಸಿ ಶಿಕ್ಷಣ ತರಬೇತಿಗೆ ಕಳಿಸಿ ಮಹಿಳೆಯರ, ದಮನಿತರ ಎದೆಯಲ್ಲಿ ಅಕ್ಷರ ಬೀಜ ನೆಟ್ಟರು” ಎಂದರು.
ಪಪಂ ಮಾಜಿ ಅಧ್ಯಕ್ಷ ಮಹಮದ್ ರಫೀ ಮಾತನಾಡಿ, “ಮಕ್ಕಳಲ್ಲಿ ಸಾವಿತ್ರಿಬಾಯಿ ಫುಲೆ ಅವರ ಬದುಕು ಪ್ರೇರೆಣೆಯಾಗಬೇಕು. ನದವರನ್ನ ಮಡಿಲಲ್ಲಿ ಹಾಕಿಕೊಂಡು ಶಾಂತ್ವನ ಹೇಳಿ ಬದುಕುವ ಧೈರ್ಯ ತುಂಬಿದವರು ಸಾವಿತ್ರಿಬಾಯಿ ಅವರು. ಉತ್ತಮ ನಾಗರಿಕರಾಗಲು ಶಿಕ್ಷಣ ಬಹಳ ಮುಖ್ಯ”ಎಂದರು.
ತಾಲೂಕು ಕ.ಸಾ.ಪ.ಅಧ್ಯಕ್ಷ ರುದ್ರೇಶ್ ಮಡಿವಾಳ್ ಅವರು ಮಾತನಾಡಿ, “ಅಕ್ಷರ ಬರೆದರೆ ಕೈ ಕತ್ತರಿಸುವುದು, ಕೇಳಿದರೆ ಕಿವಿಯಲ್ಲಿ ಕಾದ ಸೀಸ ಹಾಕುವಂತಹ ಅಮಾನವೀಯ ಪದ್ಧತಿಗಳು ರೂಢಿಯಲ್ಲಿದ್ದ ಭಯಾನಕ ಕಾಲವೊಂದಿತ್ತು. ಈಗಲೂ ಕೂಡ ಮಹಿಳೆಯರ ಮೇಲೆ ಶೋಷಣೆ ನಡೆಯುತ್ತಿವೆ. ಮಹಿಳೆಯರಲ್ಲಿ ಪ್ರತಿಭೆ ಇದ್ದರೂ ಕೂಡ ಅವರಿಗೆ ಬೇರೆ ಬೇರೆ ಕ್ಷೇತ್ರದಲ್ಲಿ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ ಎಂಬುದು ದುರಂತ. ಮಹಿಳೆಯರು ಏನಾದರೂ ಸಾಧನೆ ಮಾಡಿದ್ದಾರೆ ಎಂದರೆ ಅದು ಸಾವಿತ್ರಿಬಾಯಿ ಫುಲೆ ಬಿತ್ತಿದ ಅಕ್ಷರದ ಪ್ರತಿಫಲ” ಎಂದು ನುಡಿದರು.
ತಾಲೂಕು ದಸಾಪ ಅದ್ಯಕ್ಷ ಛತ್ರಪ್ಪ ತಂಬೂರಿ ಮಾತನಾಡಿ, “ಶಿಕ್ಷಣ ಎಂಬುದು ಹುಲಿ ಹಾಲಿನಂತೆ ಅದನ್ನ ಕುಡಿದವರು ಘರ್ಜಿಸಲೇಬೇಕು’ ಎಂದು ಅಂಬೇಡ್ಕರ್ ಹೇಳಿದ್ದರು. ಸಾವಿತ್ರಿಬಾಯಿ ನೂರಾರು ವರ್ಷಗಳ ಹಿಂದೆಯೇ ಶಾಲೆ ತೆರೆದು ದಮನಿತರು, ಶೋಷಿತರೆಲ್ಲ ಘರ್ಜಿಸುವಂತೆ ಮಾಡಿದ್ದಾರೆ” ಎಂದರು.
ಈ ಸುದ್ದಿ ಓದಿದ್ದೀರಾ?: ಕೊಪ್ಪಳ | ವಿದ್ಯಾರ್ಥಿವೇತನ ನೀಡಿ ಉನ್ನತ ಶಿಕ್ಷಣಕ್ಕೆ ಒತ್ತು ನೀಡಿ; ಎಐಡಿಎಸ್ಒ ಆಗ್ರಹ
ಕಾರ್ಯಕ್ರಮದಲ್ಲಿ ಮೈಲಾರಪ್ಪ ಬೂದಿಹಾಳ, ಸಿರಾಜ್ ಅಹಯ, ಸುಂಕಪ್ಪ ಹನುಮಂತಪ್ಪ ಆನೆಗುಂದಿ, ಪ್ರಾಂಶುಪಾಲ ತಿಮ್ಮಣ್ಣ, ಚೈತ್ರ ಗಬ್ಬೂರ, ಚಿದಾನಂದ ಬರಗೂರು, ದೇವೆಂದ್ರಪ್ಪ ಸಿ ಎಚ್, ಶ್ರೀನಿವಾಸ್ ಯು, ಬಸವರಾಜ್ ಭೋವಿ, ವಿದ್ಯಾರ್ಥಿಗಳು ಹಾಗೂ ಮುಂತಾದವರು ಇದ್ದರು.
