ಮೈಕ್ರೋ ಫೈನಾನ್ಸ್ ಸಂಸ್ಥೆಗಳು ತಮಗೆ ಇರುವ ಕಾನೂನು ನಿಯಮಗಳ ವ್ಯಾಪಿಯಲ್ಲಿಯೇ ಕಾರ್ಯನಿರ್ವಹಿಸಬೇಕು. ಅದನ್ನು ಬಿಟ್ಟು ಜನರಿಗೆ ಕಿರುಕುಳ ನೀಡುವ ಯಾವುದೇ ಪ್ರಕರಣಗಳು ಕಂಡು ಬಂದಲ್ಲಿ ಅಂತಹ ಫೈನಾನ್ಸ್ ಸಂಸ್ಥೆಗಳ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಕೊಪ್ಪಳ ಜಿಲ್ಲಾಧಿಕಾರಿ ನಲಿನ್ ಅತುಲ್ ಹೇಳಿದರು.
ನಿನ್ನೆ ಜಿಲ್ಲಾಡಳಿತದ ಕಚೇರಿಯಲ್ಲಿ ಜಿಲ್ಲೆಯ ಮೈಕ್ರೋ ಪೈನಾನ್ಸ್ ಸಂಸ್ಥೆಗಳ ಪ್ರತಿನಿಧಿಗಳಿಗೆ ಹಮ್ಮಿಕೊಳ್ಳಲಾಗಿದ್ದ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, “ಜನರಿಗೆ ಸಾಲ ನೀಡುವಾಗ ತಮ್ಮ ನಿಯಮಗಳ ಕುರಿತು ಸ್ಪಷ್ಟವಾಗಿ ಅರ್ಥವಾಗುವ ರೀತಿಯಲ್ಲಿ ತಿಳಿಸಬೇಕು ಮತ್ತು ಅವರ ಸಾಮರ್ಥ್ಯಕ್ಕೆ ತಕ್ಕಂತೆ ಸಾಲ ನೀಡಬೇಕು. ಸಾಲ ಪಡೆಯುವವರಿಗೆ ಸರಿಯಾಗಿ ಮಾಹಿತಿ ನೀಡದೇ ಸಾಲ ನೀಡುವುದರ ಜೊತೆಗೆ ಮರುಪಾವತಿ ಹೆಸರಿನಲ್ಲಿ ಅವರಿಗೆ ಕಿರುಕುಳ ನೀಡಿದರೆ ಕಾನೂನಿನ ಉಲ್ಲಂಘನೆಯಾಗುತ್ತದೆ. ಸಾಲ ಕೊಟ್ಟಾಗ, ಜನರಿಂದ ಕಾನೂನು ರೀತಿಯಲ್ಲಿ ಅವರಿಂದ ಹಣವನ್ನು ಮರಳಿ ಪಡೆಯಬೇಕು” ಎಂದು ತಿಳಿಸಿದರು.

“ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಕಿರುಕುಳ ಪ್ರಕರಣಗಳ ಹಿನ್ನೆಲೆ ಕರ್ನಾಟಕ ಕಿರು ಸಾಲ ಮತ್ತು ಸಣ್ಣ ಸಾಲ (ಬಲವಂತದ ಕ್ರಮಗಳ ಪ್ರತಿಬಂಧಕ) ಆಧ್ಯಾದೇಶವನ್ನು ರಾಜ್ಯ ಸರ್ಕಾರ ದಿನಾಂಕ ಫೆ.12ರಂದು ಜಾರಿಗೆ ತಂದಿದೆ. ಇದರ ಹೊರತಾಗಿ ಈಗಾಗಲೇ ಫೈನಾನ್ಸ್ ಸಂಸ್ಥೆಗಳ ಕುರಿತು ಆರ್ಬಿಐನ ಸ್ಪಷ್ಟವಾದ ಗೈಡ್ಲೈನ್ಸ್ ಇದೆ. ಆದರೆ ಅದನ್ನು ಯಾವ ಸಂಸ್ಥೆಯೂ ಸರಿಯಾಗಿ ಪಾಲನೆ ಮಾಡುತ್ತಿಲ್ಲ. ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಮೈಕ್ರೋ ಫೈನಾನ್ಸ್ ಸಂಸ್ಥೆಗಳು ದುಬಾರಿ ಬಡ್ಡಿ ದರಗಳ ಅನುಚಿತ ತೊಂದರೆಗಳಿಂದ ಮತ್ತು ಬಲವಂತದ ವಸೂಲಾತಿ ವಿಧಾನಗಳಿಂದ ಆರ್ಥಿಕವಾಗಿ ದುರ್ಬಲ ಗುಂಪುಗಳು ಮತ್ತು ವ್ಯಕ್ತಿಗಳು, ವಿಶೇಷವಾಗಿ ರೈತರು, ಮಹಿಳೆಯರು ಮತ್ತು ಮಹಿಳಾ ಸ್ವಸಹಾಯ ಗುಂಪುಗಳನ್ನು ರಕ್ಷಿಸಲು ಮತ್ತು ಮುಕ್ತಗೊಳಿಸಲು ಹಾಗೂ ಅದಕ್ಕೆ ಸಂಬಂಧಪಟ್ಟ ಅಥವಾ ಅದಕ್ಕೆ ಪ್ರಾಸಂಗಿಕವಾದ ವಿಷಯಗಳಿಗೆ ಸಂಬಂಧಿಸಿದ ಅಧ್ಯಾದೇಶವಾಗಿದೆ. ಕಡ್ಡಾಯವಾಗಿ ಎಲ್ಲಾ ಸಂಸ್ಥೆಗಳೂ ಪಾಲಿಸಬೇಕು” ಎಂದು ಹೇಳಿದರು.
“ಸೆಕ್ಷನ್ 3 ರಡಿ ತಿಳಿಸಿದಂತೆ ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಈ ಅಧ್ಯಾದೇಶದ ಪ್ರಾರಂಭದ ದಿನಾಂಕದಿಂದ ಮೂವತ್ತು ದಿನಗಳೊಳಗಾಗಿ, ಜಿಲ್ಲೆಯ ನೋಂದಣಿ ಪ್ರಾಧಿಕಾರಿಯ ಮುಂದೆ ನೋಂದಣಿಗಾಗಿ ಅರ್ಜಿಯನ್ನು ಸಲ್ಲಿಸಬೇಕು. ಈ ಅಧ್ಯಾದೇಶದ ಪ್ರಾರಂಭದ ತರುವಾಯ, ನೋಂದಣಿ ಪ್ರಾಧಿಕಾರಿಯಿಂದ ಈ ಅಧ್ಯಾದೇಶದಡಿ ನೋಂದಣಿ ಪಡೆಯದೆ ಯಾವುದೇ ಸಾಲಗಳನ್ನು ಮಂಜೂರು ಮಾಡುವಂತಿಲ್ಲ ಅಥವಾ ಯಾವುದೇ ಸಾಲವನ್ನು ವಸೂಲು ಮಾಡುವಂತಿಲ್ಲ. ನೋಂದಣಿ ಪ್ರಾಧಿಕಾರಿಯು ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಕಾರ್ಯಾಚರಣೆಗಾಗಿ ನಿರ್ದಿಷ್ಟಪಡಿಸಬಹುದಾದಂತ ವಿಧಾನದಲ್ಲಿ ಒಂದು ವರ್ಷದ ಅವಧಿಗಾಗಿ ನೋಂದಣಿಯನ್ನು ಮಾಡಿಕೊಳ್ಳಬಹುದಾಗಿದೆ” ಎಂದರು.

“ನೋಂದಣಿ ಪ್ರಾಧಿಕಾರಿಯು ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಅಥವಾ ಸಾಲ ನೀಡಿಕೆ ಏಜೆನ್ಸಿಗಳು ಅಥವಾ ಸಂಸ್ಥೆಗಳ ಅಥವಾ ಲೇವಾದೇವಿದಾರರ ನೋಂದಣಿಯನ್ನು ರದ್ದುಗೊಳಿಸಬಹುದು ಅಥವಾ ರದ್ದುಪಡಿಸಲು ಶಿಫಾರಸ್ಸು ಮಾಡಬಹುದು. ನೋಟಿಸ್ ನೀಡದ ಹೊರತು ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಅಥವಾ ಸಾಲ ನೀಡಿಕೆ ಏಜೆನ್ಸಿಗಳು ಅಥವಾ ಸಂಸ್ಥೆಗಳು ಅಥವಾ ಲೇವಾ ದೇವಿದಾರರಿಗೆ ಅಂಥ ನೋಟೀಸಿನ ವಿರುದ್ಧ ಅಹವಾಲನ್ನು ಹೇಳಿಕೊಳ್ಳುವ ಸೂಕ್ತ ಅವಕಾಶವನ್ನು ನೀಡಿದ ಹೊರತು ನೋಂದಣಿ ರದ್ದತಿಯ ಆದೇಶವನ್ನು ಹೊರಡಿಸತಕ್ಕದ್ದಲ್ಲ” ಎಂದು ಹೇಳಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ರಾಮ್ ಎಲ್. ಅರಸಿದ್ದಿ ಅವರು ಮಾತನಾಡಿ “ಸಾಲಗಾರರ ಮನೆಗೆ ಹೋಗಿ ಅವರ ಕುಟುಂಬದ ಸದಸ್ಯರಿಗೆ ಮತ್ತು ಮನೆಯಲ್ಲಿರುವ ಹೆಣ್ಣು ಮಕ್ಕಳಿಗೆ ತೊಂದರೆ ಕೊಡುವುದನ್ನು ಫೈನಾನ್ಸ್ ಸಂಸ್ಥೆ ಮಾಡಬಾರದು. ಅವರಿಂದ ಕಾನೂನು ರೀತಿಯಲ್ಲಿಯೇ ಹಣ ವಸೂಲಿ ಮಾಡಬೇಕು. ಜನರಿಗೆ ತೊಂದರೆ ಕೊಟ್ಟಾಗ ಒಂದು ಡೆತ್ ಏನಾದರೂ ಆದರೆ ಅದು ದೊಡ್ಡ ಅಪರಾಧವಾಗುತ್ತದೆ. ಅದಕ್ಕಾಗಿಯೆ ಜನರಿಗೆ ತೊಂದರೆ ಆಗಬಾರದು ಎನ್ನುವ ಕಾರಣಕ್ಕಾಗಿ ಕರ್ನಾಟಕ ಕಿರುಸಾಲ ಮತ್ತು ಸಣ್ಣ ಸಾಲ ಬಲವಂತದ ಕ್ರಮಗಳ ಪ್ರತಿಬಂಧಕ ಕಾಯ್ದೆ ಜಾರಿಗೆ ಬಂದಿದೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ?: ಕೊಪ್ಪಳ | ಗೃಹಲಕ್ಷ್ಮೀ ಫಲಾನುಭವಿಗಳಿಗೆ ಶೀಘ್ರದಲ್ಲೇ ಬಾಕಿ ಹಣ: ರೆಡ್ಡಿ ಶ್ರೀನಿವಾಸ್
ಕಾರ್ಯಾಗಾರದಲ್ಲಿ ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಹೇಮಂತ ಕುಮಾರ್, ಲೀಡ್ಬ್ಯಾಂಕ್ ಮ್ಯಾನೇಜರ್ ವಿರೇಂದ್ರ ಕುಮಾರ, ಜಿಲ್ಲೆಯ ಎಲ್ಲಾ ತಾಲೂಕಿನ ತಹಶೀಲ್ದಾರರು, ಲೇವಾದೇವಿ ಹಾಗೂ ಗಿರವಿದಾರರು. ಫೈನಾನ್ಸ್, ಫೈನಾನ್ಸ್ ಕಾರ್ಪೊರೇಷನ್ ಮತ್ತು ಸಹಕಾರ ಇಲಾಖೆ ಅಧಿಕಾರಿಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು.
