ಕಲುಷಿತ ನೀರು ಸೇವಿಸಿ ಜನರು ಸಾವು-ನೋವು ಅನುಭವಿಸಿದ ಪ್ರಕರಣಗಳು ರಾಯಚೂರಿನಲ್ಲಿ ವರದಿಯಾಗುತ್ತಿದ್ದವು. ಇದೀಗ, ಕೊಪ್ಪಳ ಜಿಲ್ಲೆಯಲ್ಲಿಯೂ ಕಲುಷಿತ ನೀರಿನಿಂದ ಸಮಸ್ಯೆಗಳು ಎದುರಾಗುತ್ತಿದ್ದು, ಮಂಗಳವಾರ ಜಿಲ್ಲೆಯ ವೃದ್ಧೆಯೊಬ್ಬರ ಸಾವನ್ನಪ್ಪಿದ್ದಾರೆ.
ಜಿಲ್ಲೆಯ ಕನಕಗಿರಿ ತಾಲೂಕಿನ ಬಸರಿಹಾಳ ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿದ್ದ ಮೃದ್ಧೆಯೊಬ್ಬರು ಸಾವನ್ನಪ್ಪಿದ್ದಾರೆ. 10ಕ್ಕು ಹೆಚ್ಚು ಮಂದಿ ಅಸ್ವಸ್ಥರಾಗಿದ್ದರು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೃತ ಮಹಿಳೆಯನ್ನು ಹೊನ್ನಮ್ಮ (65) ಎಂದು ಗುರುತಿಸಲಾಗಿದೆ. ಕುಲುಷಿತ ನೀರು ಕುಡಿದ ಗ್ರಾಮಸ್ಥರಲ್ಲಿ ಹಲವರಿಗೆ ಮೂರು ದಿನಗಳ ಹಿಂದೆಯೇ ವಾಂದಿ-ಭೇದಿ ಕಾಣಿಸಿಕೊಂಡಿತ್ತು. ಅವರೆಲ್ಲರನ್ನು ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ ವೃದ್ಧ ಮಹಿಳೆ ಸಾವನ್ನಪ್ಪಿದ್ದಾರೆ.
ಗ್ರಾಮ ಪಂಚಾಯತ್ ಕಲುಷಿತ ನೀರು ಪೂರೈಕೆ ಮಾಡುತ್ತಿದೆ. ಪಂಚಾಯತಿ ಅಧಿಕಾರಿಗಳ ನಿರ್ಲಕ್ಷವೇ ಗ್ರಾಮದಲ್ಲಿ ಈ ಪರಿಸ್ಥಿತಿ ನಿರ್ಮಾಣವಾಗಲು ಕಾರಣವೆಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ವೃದ್ಧ ಸಾವನ್ನಪ್ಪಿದ್ದು, ಹಲವರು ಆಸ್ಪತ್ರೆ ಸೇರಿದಿದ್ದಾರೆ. ಆದರೂ, ಯಾವುದೇ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿಲ್ಲ. ಪರಿಶೀಲನೆ ನಡೆಸಿಲ್ಲ ಎಂದು ಕಿಡಿಕಾರಿದ್ದಾರೆ.
ಸದ್ಯ ತಾಲೂಕು ಆಡಳಿತ ಎಚ್ಚೆತ್ತುಕೊಂಡಿದ್ದು, ಸರ್ಕಾರಿ ಆಸ್ಪತ್ರೆಗಲ್ಲಿ ಅಸ್ವಸ್ಥಗೊಂಡವರ ಚಿಕಿತ್ಸೆಗೆ ವ್ಯವಸ್ಥೆ ಮಾಡುತ್ತಿದೆ ಎಂದು ತಿಳಿದುಬಂದಿದೆ.