ಕೊಳಚೆ ಪ್ರದೇಶಗಳಲ್ಲಿ ಕ್ಯಾನ್ಸರ್ ಕಾಯಿಲೆಯ ಕುರಿತು ಅರಿವು ಮೂಡಿಸಬೇಕು ಎಂದು ಕೊಪ್ಪಳ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಲಿಂಗರಾಜು ಸಲಹೆ ನೀಡಿದರು.
ಕೊಪ್ಪಳದಲ್ಲಿ ವಿಶ್ವ ಕ್ಯಾನ್ಸರ್ ದಿನಾಚರಣೆ ಪ್ರಯುಕ್ತ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ, ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಸರ್ವೇಕ್ಷಣಾಧಿಕಾರಿಗಳ ಘಟಕ ಮತ್ತು ಕೊಪ್ಪಳ ಎನ್.ಸಿ.ಡಿ ವಿಭಾಗದ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಗ್ರಾಮಗಳ ಮತ್ತು ನಗರ ಪ್ರದೇಶದ ಕೊಳಚೆ ಪ್ರದೇಶಗಳಲ್ಲಿ ಕ್ಯಾನ್ಸರ್ ಯಿಲೆಯ ಕುರಿತು ಅರಿವು ಮೂಡಿಸಿ, ಅಗತ್ಯ ಮುಂಜಾಗೃತೆ ವಹಿಸುವಂತೆ ವೈದ್ಯಾಧಿಕಾರಿಗಳಿಗೆ ಮತ್ತು ಮಹಿಳಾ ಶುಶ್ರೂಷಕರಿಗೆ ಸೂಚನೆ ನೀಡಿದರು.
“ಕ್ಯಾನ್ಸರ್ ಖಾಯಿಲೆ ಹರಡುವ ರೀತಿ, ಲಕ್ಷಣಗಳು ಅದರ ಮುಂಜಾಗ್ರತಿ ಕ್ರಮಗಳ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸುವುದಾಗಿದೆ. ಮುಖ್ಯವಾಗಿ ಈ ರೋಗವು ಅಸಾಂಕ್ರಾಮಿಕ ರೋಗಗಳಲ್ಲಿ ಒಂದಾಗಿದೆ. ಸಾಮಾನ್ಯವಾಗಿ ಪುರುಷರಲ್ಲಿ ಬಾಯಿ ಕ್ಯಾನ್ಸರ್, ಶ್ವಾಶಕೋಶ ಕ್ಯಾನ್ಸರ್, ಅನ್ನನಾಳ ಕ್ಯಾನ್ಸರ್ ಹಾಗೂ ಮಹಿಳೆಯರಲ್ಲಿ ಗರ್ಭಕಂಠದ ಕ್ಯಾನ್ಸರ್, ಸ್ತನ ಕ್ಯಾನ್ಸರ್, ಬಾಯಿ ಕ್ಯಾನ್ಸರ್ ಬರುವ ಸಾಧ್ಯತೆ ಇರುತ್ತದೆ. ವಾಸಿಯಾಗದ ಗಾಯಾ, ಅಸಹಜ ರಕ್ತಸ್ರಾವ, ಬಹಳದಿನಗಳ ಕೆಮ್ಮು, ಬಹಳದಿನಗಳ ಧ್ವನಿ, ನೋವಿಲ್ಲದ ಗಡ್ಡೆ ಅಥವಾ ಊತ ಇವು ಕ್ಯಾನ್ಸರ್ ರೋಗದ ಲಕ್ಷಣಗಳಾಗಿದ್ದು, ಇವುಗಳ ಬಗ್ಗೆ ನಿರ್ಲಕ್ಷ್ಯ ಮಾಡದೇ ಸಮೀಪದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ, ವೈದ್ಯರ ಹತ್ತಿರ ಪರೀಕ್ಷಿಸಿಕೊಂಡು ಚಿಕಿತ್ಸೆ ಪಡೆದುಕೊಳ್ಳುವಂತೆ ಸಾರ್ವಜನಿಕರಿಗೆ ಅರಿವು ಮೂಡಿಸಬೇಕು.
“ಅಲ್ಲದೇ, ಕ್ಯಾನ್ಸರ್ ಲಕ್ಷಣಗಳು ಕಂಡುಬರುವವರು ಮುಂಜಾಗೃತೆ ಕ್ರಮವಾಗಿ ಆರೋಗ್ಯಕರ ಜೀವನ ಶೈಲಿ ನಡೆಸಬೇಕು. ಬಣ್ಣಗಳಿಂದ ಕೂಡಿದ ಆಹಾರ ಪದಾರ್ಥಗಳಾದ ಬೇಕರಿ ಪದಾರ್ಥ, ಗೋಬಿ, ಮುಂತಾದವುಗಳನ್ನು ಹೆಚ್ಚಾಗಿ ಬಳಕೆ ಮಾಡಬಾರದು. ಇದರ ಬದಲಿಗೆ ಸಿರಿದಾನ್ಯಗಳಿಂದ ತಯಾರಿಸಿದ ಆಹಾರ ಸೇವನೆ, ಹಾಲು, ಹಾಲಿನ ಉತ್ಪನಗಳ ಹೆಚ್ಚು ಬಳಕೆ ಮಾಡಬೇಕು. ಕ್ಯಾನ್ಸರ್ ಪ್ರತಿರೋಧಕ ಶಕ್ತಿಯಿರುವ ಆಹಾರ ಪದಾರ್ಥಗಳ ಬಳಕೆ, ಆಹಾರದಲ್ಲಿ ಹೆಚ್ಚಿನ ರೀತಿಯ ತರಕಾರಿ, ಹಣ್ಣು ಹಂಪಲುಗಳ ಬಳಕೆ ಮಾಡುವ ಬಗ್ಗೆ ಎಲ್ಲಾ ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿಗಳು ತಮ್ಮ ಕಾರ್ಯಕ್ಷೇತ್ರದ ವ್ಯಾಪ್ತಿಯ ಜನರಿಗೆ ಸೂಕ್ಷ್ಮವಾಗಿ ಅರ್ಥೈಸಬೇಕು” ಎಂದರು.
ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ನಂದಕುಮಾರ ಪ್ರಾಸ್ತಾವಿಕವಾಗಿ ಮಾತನಾಡಿ, “ಜೀವನ ಶೈಲಿಯಿಂದ ಬರುವ ಅಸಾಂಕ್ರಾಮಿಕ ರೋಗಗಳಲ್ಲಿ ಕ್ಯಾನ್ಸರ್ ಕಾಯಿಲೆ ಒಂದಾಗಿದ್ದು, ‘ವಿಶಿಷ್ಟತೆಯಿಂದ ಏಕತೆ’ ಎಂಬ ಈ ವರ್ಷ ಘೋಷವಾಖ್ಯದೊಂದಿಗೆ ಕ್ಯಾನ್ಸರ್ ಖಾಯಿಲೆ ಕುರಿತು ಜಾಗೃತಿ ಕಾರ್ಯಕ್ರಮವನ್ನು ಆಚರಿಸಲಾಗುತ್ತಿದೆ. ಆರೋಗ್ಯ ಇಲಾಖೆಯಲ್ಲಿ ಮುಂಬರುವ ಮಾರ್ಚ್ ತಿಂಗಳಿಂದ 30 ವರ್ಷ ಮೇಲ್ಪಟ್ಟ ಎಲ್ಲರಿಗೂ ಗೃಹ ಆರೋಗ್ಯ ಯೋಜನೆಯಡಿಯಲ್ಲಿ ಉಚಿತವಾಗಿ ಬಾಯಿ ಕ್ಯಾನ್ಸರ್, ಗರ್ಭಕಂಠದ ಕ್ಯಾನ್ಸರ್ ಹಾಗೂ ಮಾನಸಿಕ ರೋಗಿಗಳಿಗೆ ಪ್ರಾಥಮಿಕ ತಪಾಸಣೆ ಮಾಡಿ, ಚಿಕಿತ್ಸೆ ನೀಡಲಾಗುವುದು. ಜೊತೆಗೆ ಮಧುಮೇಹ ಮತ್ತು ಅಧಿಕ ರಕ್ತದೊತ್ತಡವನ್ನು ಸಹ ಪರೀಕ್ಷಿಸಿ, ಚಿಕಿತ್ಸೆ ನೀಡಿ ಅನುಸರಣೆ ಮಾಡಲಾಗುತ್ತದೆ. ಒಟ್ಟಾರೆಯಾಗಿ ಉತ್ತಮವಾದ ಆರೋಗ್ಯಕರ ಜೀವನ ಶೈಲಿಯಿಂದ ಅಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಬಹುದಾಗಿದೆ” ಎಂದು ತಿಳಿಸಿದರು.
ಇದನ್ನು ಓದಿದ್ದೀರಾ? ಫೆ. 9ರಂದು ದುಬೈನಲ್ಲಿ ‘ಬ್ಯಾರಿ ಮೇಳ-2025’: ಐತಿಹಾಸಿಕ ಮೇಳಕ್ಕೆ ಸಿದ್ಧಗೊಳ್ಳುತ್ತಿದೆ ಇತಿಸಲಾತ್ ಮೈದಾನ
ಕಾರ್ಯಕ್ರಮದಲ್ಲಿ ಜಿಲ್ಲಾ ಕುಟುಂಬ ಕಲ್ಯಾಣಾಧಿಕಾ ಡಾ.ರವೀಂದ್ರನಾಥ್ ಎಂ.ಹೆಚ್, ಜಿಲ್ಲಾ ರೋಗವಾಹ ಆಶ್ರಿತ ರೋಗಗಳ ನಿಯಂತ್ರಣ ಅಧಿಕಾರಿ ಡಾ.ವೆಂಟಕೇಶ, ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿ ಡಾ.ಪ್ರಕಾಶ ಹೆಚ್., ಕೊಪ್ಪಳ ವೈದ್ಯಕೀಯ ಮಹಾವಿದ್ಯಾಲಯದ (ಕೀಮ್ಸ್) ಸಹಾಯಕ ಪ್ರಾಧ್ಯಾಪಕರಾದ ಡಾ.ಸುರೇಖಾ, ಗದಗ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಂಶುಪಾಲರು, ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರಾದ ಡಾ.ರಾಜು, ಪಬ್ಲಿಕ್ ಪ್ರಾಸಿಕ್ಯೂಟರಾದ ಗೌರಮ್ಮ ದೇಸಾಯಿ ಸೇರಿದಂತೆ ಮಹಿಳಾ ತಜ್ಞ ವೈದ್ಯರು, ಆರೋಗ್ಯ ಶಿಕ್ಷಣಾಧಿಕಾರಿಗಳು, ಎನ್.ಸಿ.ಡಿ ಕಾರ್ಯಕ್ರಮದ ಜಿಲ್ಲಾ ಸಲಹೆಗಾರರು, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಗಳು ಹಾಗೂ ಶುಶ್ರೂಷಾಧಿಕಾರಿಗಳು ಇತರೆ ಸಿಬ್ಬಂದಿಗಳು ಉಪಸ್ಥಿತರಿದ್ದರು.