ಕೇಂದ್ರ ಸರ್ಕಾರದ ವಕ್ಫ್ ಮಸೂದೆ ವಿರೋಧಿಸಿ ಕೊಪ್ಪಳ ನಗರದ ಅಶೋಕ ವೃತ್ತದಲ್ಲಿ ಹಾಗೂ ಗಂಗಾವತಿಯ ಶ್ರೀಕೃಷ್ಣದೇವರಾಯ ವೃತ್ತದಲ್ಲಿ ಮಸೂದೆಯ ಪ್ರತಿ ಹರಿದು ಹಾಕುವುದರ ಮೂಲಕ ಸೋಶಿಯಲ್ ಡೆಮೊಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಪ್ರತಿಭಟನೆ ನಡೆಸಿತು. ಗಂಗಾವತಿಯಲ್ಲಿ ಪ್ರತಿಭಟನಾಕಾರರನ್ನು ಕೆಲವು ನಿಮಿಷ ಬಂಧಿಸಿ ಬಳಿಕ ಬಿಡುಗಡೆ ಮಾಡಲಾಯಿತು.
ಎಸ್‌ಡಿಪಿಐ ಜಿಲ್ಲಾ ಕಾರ್ಯದರ್ಶಿ ಚಾಂದ್ ಸಲೀಂ ಮಾತನಾಡಿ, “ಸರ್ಕಾರ ಪ್ರಸ್ತಾಪಿಸಿರುವ ವಕ್ಫ್ ತಿದ್ದುಪಡಿ ಮಸೂದೆಯನ್ನು ಎಸ್‌ಡಿಪಿಐ ತೀವ್ರವಾಗಿ ಖಂಡಿಸುತ್ತದೆ. ಮಸೂದೆ ಮೂಲಕ ಅಸಂವಿಧಾನಿಕ ಹಾಗೂ ಮುಸ್ಲಿಂ ಸಮುದಾಯದ ಹಕ್ಕುಗಳ ಮೇಲೆ ನೇರ ದಾಳಿ ಮಾಡಲಾಗಿದೆ. ಈ ಮಸೂದೆ, ಶತಮಾನಗಳ ಕಾಲ ಸಮುದಾಯದ ಕಲ್ಯಾಣಕ್ಕಾಗಿ ರಕ್ಷಿಸಲಾಗಿದ್ದ ವಕ್ಫ್ ಆಸ್ತಿಗಳ ಸ್ವಾಯತ್ತತೆಗೆ ಧಕ್ಕೆ ತರುತ್ತದೆ. ಭಾರತದ ಅಲ್ಪಸಂಖ್ಯಾತರ ಸಮುದಾಯವನ್ನ ಬಲಹೀಗೊಳಿಸುವ ಮಸೂದೆಯಾಗಿದೆ. ಮುಸ್ಲಿಂ ಸಮುದಾಯದ ಸಾಮಜಿಕ ನ್ಯಾಯದ ವಿರುದ್ಧ ನೇರ ದಾಳಿ ಮಾಡಲಾಗುತ್ತಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಸಲೀಮ್ ಮನಿಯಾರ್ ಮಾತನಾಡಿ, “ನಾವು ಎಲ್ಲಾ ಪ್ರಜಾಸತ್ತಾತ್ಮಕ ಹಾಗೂ ಧರ್ಮನಿರಪೇಕ್ಷ ಶಕ್ತಿಗಳನ್ನು ಈ ಮಸೂದೆಯ ವಿರುದ್ಧ ರಾಷ್ಟ್ರ ವ್ಯಾಪಿ ಪ್ರತಿಭಟನೆಯಲ್ಲಿ ಭಾಗವಹಿಸಲು ಆಹ್ವಾನಿಸುತ್ತೇವೆ. ಎಸ್‌ಡಿಪಿಐ ತನ್ನ ಸಂವಿಧಾನಿಕ ಹಕ್ಕುಗಳನ್ನು ರಕ್ಷಿಸುವ ಬದ್ಧತೆಯನ್ನು ಪುನಃ ದೃಢಪಡಿಸುತ್ತದೆ ಹಾಗೂ ಮುಸ್ಲಿಂ ಸಮುದಾಯದ ಧಾರ್ಮಿಕ ಮತ್ತು ಸಾಂಸ್ಕೃತಿಕ ಪರಂಪರೆಯ ಮೇಲಿನ ಯಾವುದೇ ಹಸ್ತಕ್ಷೇಪವನ್ನು ಅನುಮತಿಸುವುದಿಲ್ಲ” ಎಂದರು.
ಈ ಸುದ್ದಿ ಓದಿದ್ದೀರಾ?: ಕೊಪ್ಪಳ | ಶಾಲೆಗಳಲ್ಲಿ ಬೋಧನಾ ಗುಣಮಟ್ಟ ಸುಧಾರಣೆಗೆ ಪರಿಣಾಮಕಾರಿ ಕ್ರಮ ಕೈಗೊಳ್ಳಲು ಮನವಿ
ಪ್ರತಿಭಟನೆಯಲ್ಲಿ ಎಸ್‌ಡಿಪಿಐ ಮುಖಂಡರು, ಮುಸ್ಲಿಂ ಸಮುದಾಯದ ಮುಖಂಡರು, ಸಾರ್ವಜನಿಕರು ಇದ್ದರು.
