ಶಾಲೆಯ ಶುಲ್ಕವನ್ನು ಪಾವತಿ ಮಾಡಿಲ್ಲ ಎಂದು ವಿದ್ಯಾರ್ಥಿಗಳನ್ನು ಶಾಲೆಯ ಕೋಣೆಯಲ್ಲಿ ಕೂಡಿ ಹಾಕಿಟ್ಟ ಘಟನೆ ಕೊಪ್ಪಳದಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ.
ಕೊಪ್ಪಳ ನಗರದ ನಿವೇದಿತಾ ಶಾಲೆಯಲ್ಲಿ ಶಾಲೆಯ ಶುಲ್ಕ ಕಟ್ಟಿಲ್ಲ ಎಂದು ಮನೆಗೆ ಬಿಡದೆ ಸುಮಾರು 20 ಮಕ್ಕಳನ್ನು ಶಾಲೆಯ ಕೋಣೆಯಲ್ಲಿ ಕೂಡಿ ಹಾಕಲಾಗಿದೆ ಎಂದು ಪಾಲಕರು ಆರೋಪಿಸಿದ್ದಾರೆ.
ಶಾಲೆ ಬಿಟ್ಟರೂ ಮಕ್ಕಳನ್ನು ಬಿಡದೆ ಕೋಣೆಯಲ್ಲಿ ಬಂಧಿಸಿ ಪಾಲಕರು ಬರುವವರೆಗೂ ಬಿಡಬಾರದು ಎಂಬ ಉದ್ದೇಶದಿಂದ ಕೂಡಿ ಹಾಕಿದ್ದರು ಎನ್ನಲಾಗಿದೆ. ಪಾಲಕರು ಶಾಲೆ ಬಿಟ್ಟು ಸುಮಾರು ಹೊತ್ತು ಕಳೆದರೂ ಮನೆಗೆ ವಾಪಸಾಗಿಲ್ಲ ಎಂದು ಪೋಷಕರು ಶಾಲೆಗೆ ಬಂದಾಗ, ಮಕ್ಕಳನ್ನು ಕೋಣೆಯಲ್ಲಿ ಕೂಡಿಹಾಕಿದ್ದು ದೃಶ್ಯಗಳ ಕಂಡು ಬಂದಿದೆ. ಈ ವೇಳೆ ಶಾಲಾಡಳಿತ ಮಂಡಳಿಯ ನಡೆಗೆ ಪೋಷಕರು ವಿರೋಧ ವ್ಯಕ್ತಪಡಿಸಿದ್ದಾರೆ.
ಪಾಲಕರು ಶಾಲಾ ಮುಖ್ಯಸ್ಥರ ಜೊತೆ ಮಾತುಕತೆಗೆ ಮುಂದಾದಾಗ ಶಾಲೆಯ ಶುಲ್ಕ ಕಟ್ಟಿಲ್ಲ , ನಿಮಗೆ ಶುಲ್ಕ ಕಟ್ಟಬೇಕು ಎಂದು ಮಾಹಿತಿ ತಿಳಿಸಿದ್ದೇವೆ. ಆದರೂ ನೀವು ನಿರ್ಲಕ್ಷ್ಯ ಮಾಡಿದ ಕಾರಣಕ್ಕೆ ಕೂಡಿ ಹಾಕಲಾಗಿದೆ ಎಂದು ಶಾಲೆಯ ಮುಖ್ಯಸ್ಥರು ಮಾತನಾಡಿದ್ದು, ವಿಡಿಯೋ ವೈರಲ್ ಆಗಿದೆ.
“ಫೀಸ್ ಕಟ್ಟಿಲ್ಲ ಎಂಬ ಕಾರಣಕ್ಕೆ ಮಕ್ಕಳನ್ನು ಕೂಡಿ ಹಾಕಿರುವುದು ಸರಿಯಲ್ಲ. ಏನೇ ಇದ್ದರೂ ನಮ್ಮನ್ನು ಶಾಲೆಗೆ ಕರೆಸಿ, ತಿಳಿಸಬೇಕಿತ್ತು. ಈ ರೀತಿಯ ನಡೆ ಸರಿಯಲ್ಲ. ಇದು ತಪ್ಪು” ಎಂದು ಪೋಷಕರು ವಿರೋಧ ವ್ಯಕ್ತಪಡಿಸಿದಾಗ, ಮಕ್ಕಳನ್ನು ಬಿಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಶಾಲಾ ಮುಖ್ಯಸ್ಥರ ಹಾಗೂ ವಿದ್ಯಾರ್ಥಿಗಳ ಪಾಲಕರ ಮಧ್ಯೆ ವಾದ-ವಿವಾದ ತಾರಕ್ಕೇರಿದಾಗ ಮಕ್ಕಳನ್ನು ಮನೆಗೆ ಬಿಡುಗಡೆಗೊಳಿಸಿದರು ಎಂದು ವಿದ್ಯಾರ್ಥಿಯ ಪೋಷಕರೊಬ್ಬರು ಮಾಹಿತಿ ನೀಡಿದ್ದಾರೆ.
