ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಕುದರಿಮೋತಿ ಸರಕಾರಿ ಪ್ರೌಢಶಾಲೆಯಲ್ಲಿ ಇತ್ತೀಚೆಗೆ ಸ್ಪರ್ಶ ಕುಷ್ಠರೋಗ ಅಭಿಯಾನ ಮೂಲಕ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲಾಯಿತು.
ಕೊಪ್ಪಳ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಿವಾನಂದ ವಿ.ಪಿ ಅವರು ಮಾತನಾಡಿ, “ಒಟ್ಟಾಗಿ ನಾವು ಕುಷ್ಠರೋಗದ ಬಗ್ಗೆ ಜಾಗೃತಿ ಮೂಡಿಸೋಣ. ತಪ್ಪು ಕಲ್ಪನೆಗಳನ್ನು ಹೋಗಲಾಡಿಸೋಣ ಮತ್ತು ಕುಷ್ಠರೋಗದಿಂದ ಬಾಧಿತರಾದ ಎಲ್ಲರನ್ನೂ ಹಿಂದುಳಿಯದಂತೆ ನೋಡಿಕೊಳ್ಳೋಣ” ಎಂಬ ಈ ವರ್ಷದ ಘೋಷವಾಕ್ಯದೊಂದಿಗೆ ಜಿಲ್ಲೆಯ ಎಲ್ಲಾ ಆರೋಗ್ಯ ಸಂಸ್ಥೆಯ ವ್ಯಾಪ್ತಿಯ ಗ್ರಾಮಗಳಲ್ಲಿ ಮತ್ತು ನಗರ ಪ್ರದೇಶದ ಕೊಳಚೆ ಪ್ರದೇಶಗಳಲ್ಲಿ ಜನವರಿ 30 ರಿಂದ ಫೆ.13ರ ವರೆಗೆ ಜಾಗೃತಿ ಬಗ್ಗೆ ಅರಿವು ಮೂಡಿಸಲಾಗುತ್ತದೆ” ಎಂದು ತಿಳಿಸಿದರು.
ಅಭಿಯಾನದ ಉದ್ದೇಶ ಪ್ರತಿಯೊಬ್ಬರಿಗೂ ಕುಷ್ಠರೋಗದ ಬಗ್ಗೆ ಅರಿವು ಮೂಡಿಸಿ, ಶೀಘ್ರಪತ್ತೆ ಕುರಿತು ತ್ವರಿತ ಚಿಕಿತ್ಸೆ ಪಡೆದುಕೊಳ್ಳುವುದು ಹಾಗೂ ಸಾಮಾಜಿಕ ಕಳಂಕದಿಂದ ಹೊರಬರುವುದು. ಇದು ಮೈಕೊಬ್ಯಾಕ್ಟೇರಿಯಾ ಲೆಪ್ರೈ ಎಂಬ ಸೂಕ್ಷ್ಮಾಣುವಿನಿಂದ ಹರಡುತ್ತದೆ. ರೋಗಿಯು ಕೆಮ್ಮಿದಾಗ ಮತ್ತು ಸಿನಿದಾಗ ಗಾಳಿಯಲ್ಲಿ ಸೇರಿಕೊಂಡು ಒಬ್ಬರಿಂದ ಇನ್ನೊಬ್ಬರಿಗೆ ಹರಡುತ್ತದೆ ಎಂದು ತಿಳಿಸಿದರು.

ರೋಗದ ಲಕ್ಷಣಗಳು ಚರ್ಮದ ಮೇಲೆ ಯಾವುದೇ ತಿಳಿ, ಬಿಳಿ ಮತ್ತು ತಾಮ್ರ ಬಣ್ಣದ ಸ್ಪರ್ಶಜ್ಞಾನವಿಲ್ಲದ ಮಚ್ಚೆ, ದಪ್ಪನಾದ ಎಣ್ಣೆ ಪಸರಿಸಿದಂತಹ ಹೊಳೆಯುವ ಚರ್ಮ, ದೇಹದ ಮೇಲಿನ ಗಂಟುಗಳು, ಕಣ್ಣಿನ ರೆಪ್ಪೆಗಳನ್ನು ಮುಚ್ಚುವಲ್ಲಿ ತೊಂದರೆ, ಕೈ ಅಥವಾ ಕಾಲುಗಳಲ್ಲಿ ಬಹುದಿನದ ಗಾಯ, ಕೈ ಅಥವಾ ಕಾಲುಗಳಲ್ಲಿ ಬೆರಳು ಮಡಿಚಿಕೊಂಡಿರುವುದು, ನಡೆಯುವಾಗ ಕಾಲು ಎಳೆಯುವುದು, ಕೈ ಅಥವಾ ಕಾಲುಗಳಲ್ಲಿ ಜುಮ್ಮೆನಿಸುವಿಕೆ ಅಥವಾ ಮರಗಟ್ಟುವಿಕೆ, ಅಂಗೈ ಅಥವಾ ಪಾದಗಳಲ್ಲಿ ಶೀತ, ಬಿಸಿ, ಸಂವೇದನೆ ನಷ್ಟವಾಗಿರುವುದು, ಕೈಗಳಲ್ಲಿ ವಸ್ತುಗಳನ್ನು ಹಿಡಿಯುವುದು ಹಾಗೂ ಪಾದರಕ್ಷೆಗಳನ್ನು ತೊಡುವಲ್ಲಿ ಬಲಹೀನತೆ ಕಂಡುಬರುವುದು. ಇಂತಹ ಲಕ್ಷಣಗಳು ಯಾರಿಗಾದರು ಕಂಡುಬಂದರೆ ತಕ್ಷಣ ತಮ್ಮ ಸಮೀಪದ ಸರ್ಕಾರಿ ಆಸ್ಪತ್ರೆ ಆಥವಾ ಆರೋಗ್ಯ ಸಿಬ್ಬಂದಿ, ಆಶಾ ಕಾರ್ಯಕರ್ತೆಯರನ್ನ ಸಂರ್ಪಕ್ಷಿಸಬೇಕು ರೋಗ ಖಚಿತಪಟ್ಟರೆ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತದೆ” ಎಂದು ತಿಳಿಸಿದರು.
ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಕುಸುಮಾ ಅವರು ಮಾತನಾಡಿ, ಕ್ಷಯರೋಗ ಮುಕ್ತ 100 ದಿನಗಳ ಅಭಿಯಾನ ಕಾರ್ಯಕ್ರಮದ ಕುರಿತು ತಿಳಿಸಿದರು.
ಆರ್.ಕೆ.ಎಸ್.ಕೆ ಆಪ್ತಸಮಾಲೋಚಕ ಲಕ್ಷ್ಮಣ್ ಅವರು, ಹದಿಹರೆಯದವರ ಆರೋಗ್ಯ ರಕ್ಷಣೆ ಮತ್ತು ಇತರೆ ಸಾಂಕ್ರಾಮಿಕ, ಅಸಾಂಕ್ರಾಮಿಕ ರೋಗಗಳ ಬಗ್ಗೆ ವಿವರವಾದ ಮಾಹಿತಿ ನೀಡಿದರು. ಆರೋಗ್ಯ ನಿರೀಕ್ಷಣಾಧಿಕಾರಿ ರಾಜಶೇಖರ ಇವರು ಕುಷ್ಠರೋಗ ನಿರ್ಮೂಲನೆ ಕುರಿತು ಪ್ರತಿಜ್ಞಾವಿಧಿ ಬೋಧಿಸಿದರು.
ಇದನ್ನು ಓದಿದ್ದೀರಾ? ಅನಾರೋಗ್ಯದಿಂದ ಬಳಲುತ್ತಿರುವ ನಟಿ, ಬಿಜೆಪಿ ನಾಯಕಿ ಖುಷ್ಬೂ; ಬದಲಾದ ಮುಖಚರ್ಯೆ
ಈ ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯೋಪಾದ್ಯಾಯರಾದ ಶ್ರೀಶೈಲ್‌ಗೌಡ ಪಾಟೀಲ್, ಶಾಲೆಯ ಸಹಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಶಾಲಾ ಸಿಬ್ಬಂದಿಗಳು ಇದ್ಧರು.
