ಕೊಪ್ಪಳ ಜಿಲ್ಲೆಯ ಗ್ರಾಮವೊಂದರಲ್ಲಿ ವೈರಲ್ ಫೀವರ್ ಹೆಚ್ಚಾಗಿದ್ದು, ಹಲವಾರು ಜನರು ಜ್ವರಕ್ಕೆ ತುತ್ತಾಗಿದ್ದಾರೆ. ಗ್ರಾಮದ ದೇವಸ್ಥಾನವನ್ನು ಆಸ್ಪತ್ರೆಯ ವಾರ್ಡ್‌ಆಗಿ ಮಾರ್ಪಡಿಸಲಾಗಿದೆ. ಜ್ವರಕ್ಕೆ ತುತ್ತಾದ ಗ್ರಾಮಸ್ಥರಿಗೆ ದಾವಸ್ಥಾನದ ಆವರಣದಲ್ಲೇ ಚಿಕಿತ್ಸೆ ನೀಡಲಾಗುತ್ತಿದೆ.
ಜಿಲ್ಲೆಯ ಕುಷ್ಟಗಿ ತಾಲೂಕಿನ ನೆರೆಬೆಂಕಿ ಗ್ರಾಮದಲ್ಲಿ ಒಂದು ತಿಂಗಳ ಹಿಂದೆಯೇ ಜ್ವರ ಪ್ರಕರಣಗಳು ವರದಿಯಾಗಲು ಆರಂಭಿಸಿದ್ದವು. ಆದರೆ, ಆರೋಗ್ಯ ಇಲಾಖೆ ಗಂಭೀರವಾಗಿ ಪರಿಗಣಿಸಲಿಲ್ಲ ವೆಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಕಳೆದ ಎರಡು ದಿನಗಳಿಂದ ಪ್ರಕರಣಗಳ ಸಂಖ್ಯೆ 100ರ ಗಡಿ ದಾಟಿದೆ. ಈಗ, ಅಧಿಕಾರಿಗಳು ಗ್ರಾಮದ ಭೀಮಾಂಬಿಕಾ ದೇವಸ್ಥಾನದಲ್ಲಿಯೇ ತಾತ್ಕಾಲಿಕ ಆರೋಗ್ಯ ಶಿಬಿರ ತೆರೆದು ಚಿಕಿತ್ಸೆ ನೀಡುತ್ತಿದ್ದಾರೆ.
ದೇವಾಲಯವು ಈಗ ರೋಗಿಗಳು ಸತತವಾಗಿ ಮಲಗಿರುವ ವಾರ್ಡ್ ರೀತಿ ಕಾಣಿಸುತ್ತಿದೆ. ರೋಗಿಗಳಿಗೆ ಐವಿ ದ್ರವ ನೀಡಲಾಗುತ್ತಿದೆ. ಇದು ವೈರಲ್ ಜ್ವರದ ವಿರುದ್ಧ ಹೋರಾಡುತ್ತದೆ. ರೋಗಿಗಳ ಕುಟುಂಬಗಳು ಅಂತರ ಕಾಯ್ದುಕೊಳ್ಳುವಂತೆ ಸೂಚಿಸಲಾಗಿದೆ ಎಂದು ಆರೋಗ್ಯ ಸಿಬ್ಬಂದಿಗಳು ಹೇಳಿದ್ದಾರೆ.
ನೆರೆಬೆಂಚಿ ಗ್ರಾಮದಲ್ಲಿ ಒಟ್ಟು 1,200 ಜನಸಂಖ್ಯೆ ಇದ್ದು, ಸೂಕ್ತ ವೈದ್ಯಕೀಯ ಸೌಲಭ್ಯವಿಲ್ಲ. ಸ್ವಚ್ಚತೆಯೂ ಸರಿಯಾಗಿಲ್ಲ. ಸುತ್ತಮುತ್ತಲಿನ ನೀರು ನಿಂತಲ್ಲೇ ನಿಲ್ಲುವುದರಿಂದ ಸೊಳ್ಳೆಗಳ ಕಾಟ ಹೆಚ್ಚಿದೆ ಎಂದು ಗ್ರಾಮಸ್ಥರು ದೂರುತ್ತಾರೆ.
ಆರೋಗ್ಯ ಅಧಿಕಾರಿಗಳು ಕೊಪ್ಪಳಕ್ಕೆ ಕೆಲವು ರಕ್ತದ ಮಾದರಿಗಳನ್ನು ಕಳುಹಿಸಿದ್ದಾರೆ. ಗುರುವಾರ ಒಂದು ಚಿಕೂನ್‌ಗುನ್ಯಾ ಪ್ರಕರಣ ವರದಿಯಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ರೋಗಿಗಳನ್ನು ತಾಲೂಕು ಅಥವಾ ಜಿಲ್ಲಾಸ್ಪತ್ರೆಗೆ ಸ್ಥಳಾಂತರಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ. ಆರೋಗ್ಯಾಧಿಕಾರಿಗಳು ಗ್ರಾಮಸ್ಥರಿಗೆ ಆತ್ಮವಿಶ್ವಾಸ ತುಂಬುತ್ತಿದ್ದರೂ, ಯೋಗದಿಂದ ಜೀವ ಕಳೆದುಕೊಳ್ಳಬಹುದೆಂಬ ಆತಂಕ ಗ್ರಾಮಸ್ಥರಲ್ಲಿ ಹೆಚ್ಚಾಗಿದೆ. ಇಡೀ ಗ್ರಾಮವೇ ಕ್ವಾರಂಟೈನ್‌ನಲ್ಲಿದ್ದು, ಗ್ರಾಮಸ್ಥರು ಪರಸ್ಪರ ಅಂತರ ಕಾಯ್ದುಕೊಳ್ಳುತ್ತಿದ್ದಾರೆ.
ಗುರುವಾರ ಕುಷ್ಟಗಿ ತಹಶೀಲ್ದಾರ್ ರವಿ ಅಂಗಡಿ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮಸ್ಥರ ಆರೋಗ್ಯ ವಿಚಾರಿಸಿದ್ದಾರೆ. ರೋಗಿಗಳನ್ನು ತಾಲೂಕು ಆಸ್ಪತ್ರೆಗೆ ಸ್ಥಳಾಂತರಿಸುವಂತೆ ಆರೋಗ್ಯ ಸಿಬ್ಬಂದಿಗೆ ತಿಳಿಸಿದ್ದಾರೆ.
ಕೊಪ್ಪಳ ಡಿಎಚ್‌ಒ ಲಿಂಗರಾಜ್ ಟಿ ಮಾತನಾಡಿ, “ನಾವು ರಕ್ತದ ಮಾದರಿಗಳನ್ನು ಸಂಗ್ರಹಿಸಿದ್ದೇವೆ. ತಾಲೂಕು ಆರೋಗ್ಯ ಅಧಿಕಾರಿಗಳು ಗ್ರಾಮದಲ್ಲಿದ್ದಾರೆ. ಶೀಘ್ರದಲ್ಲೇ ರೋಗಿಗಳನ್ನು ಆಸ್ಪತ್ರೆಗೆ ಸ್ಥಳಾಂತರಿಸಲು ನಾವು ಕ್ರಮ ಕೈಗೊಳ್ಳುತ್ತೇವೆ” ಎಂದು ಹೇಳಿದ್ದಾರೆ.