ಕೊಪ್ಪಳ ಜಿಲ್ಲೆಯ ವಿಶ್ವವಿದ್ಯಾಲಯ ಮುಚ್ಚಲು ಮುಂದಾದರೆ ಸ್ಥಳೀಯ ಜನಪ್ರತಿನಿಧಿಗಳ ವಿರುದ್ಧ ಹೋರಾಟ ಮಾಡಬೇಕಾಗುತ್ತದೆ ಎಂದು ವಿವಿಧ ಪ್ರಗತಿಪರ ಸಂಘಟನೆಗಳ ಮುಖಂಡರು ಎಚ್ಚರಿಕೆ ನೀಡಿದರು.
“ಹಿಂದಿನ ಬಹುತೇಕ ಎಲ್ಲಾ ಸರ್ಕಾರಗಳು ಕಲ್ಯಾಣ ಕರ್ನಾಟಕ ಹೆಸರಿನಲ್ಲಿ ಕಲಬುರಗಿ ಜಿಲ್ಲೆಗೆ ಮಾತ್ರ ಹೆಚ್ಚು ಆದ್ಯತೆ ನೀಡುತ್ತಾ ಬಂದಿವೆ. ಕೊಪ್ಪಳ ಜಿಲ್ಲೆಯಲ್ಲಿ ವಿಶ್ವವಿದ್ಯಾಲಯಕ್ಕೆ ಸೂಕ್ತ ಜಾಗ ನೀಡಲು ವಿಫಲರಾಗಿರುವ ಸ್ಥಳೀಯ ಚುನಾಯಿತ ಪ್ರತಿನಿಧಿಗಳೇ ಇದಕ್ಕೆ ಸಂಪೂರ್ಣ ಹೊಣೆಗಾರರು. ಕೊಪ್ಪಳದ ಜನತೆ ಉನ್ನತ ಶಿಕ್ಷಣಕ್ಕೆ ದೂರದ ಊರುಗಳಿಗೆ ಹೋಗಬೇಕಾದ ಅನಿವಾರ್ಯತೆಯನ್ನು ಜನಪ್ರತಿನಿಧಿಗಳೇ ಸೃಷ್ಟಿಸುತ್ತಿದ್ದಾರೆ. ವಿವಿ ನಿರ್ಮಾಣಕ್ಕೆ ಬೇಕಾದ ಜಾಗ, ವ್ಯವಸ್ಥಿತ ಕಟ್ಟಡ ಮತ್ತು ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಕನಿಷ್ಟ ಪ್ರಯತ್ನ ಕೂಡ ಮಾಡದೇ ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ. ಕುರುಡು ಜಾಣತನದಿಂದ ಕೈ ತೊಳೆದುಕೊಳ್ಳುತ್ತಿದ್ದಾರೆ” ಎಂದು ಪ್ರಗತಿಪರ ಸಂಘಟನೆಗಳು ಆರೋಪಿಸಿದವು.
“ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವಿಶ್ವ ವಿದ್ಯಾಲಯಗಳ ಪರಿಶೀಲನೆ ನಡೆಸಿ ಬಾಗಲಕೋಟೆಯ ಮಹಾರಾಣಿ ಕ್ಲಸ್ಟರ್, ಹಾವೇರಿ, ಮಂಡ್ಯ ನೃಪಪತುಂಗ ವಿಶ್ವವಿದ್ಯಾಲಯ, ಚಾಮರಾಜನಗರ, ಹಾಸನ ಸೇರಿದಂತೆ ಕೊಪ್ಪಳ ವಿಶ್ವ ವಿದ್ಯಾಲಯವು ಮುಚ್ಚುವ ಪಟ್ಟಿಯಲ್ಲಿದೆ ಎಂದು ವರದಿಯಾಗಿದ್ದು, ಸ್ಥಳೀಯ ಚುನಾಯಿತ ಪ್ರತಿನಿಧಿಗಳು ತಕ್ಷಣ ಕೊಪ್ಪಳ ವಿಶ್ವವಿದ್ಯಾಲಯ ಮುಂದುವರಿಸಲು ಅದಕ್ಕೆ ಬೇಕಾಗುವ ಜಾಗ, ಕಟ್ಟಡ, ಮೂಲಭೂತ ಸೌಲಭ್ಯ ಒದಗಿಸಲು ಪ್ರಯತ್ನಿಸಬೇಕು. ಒಂದು ವೇಳೆ ನಿರ್ಲಕ್ಷ್ಯ ಮಾಡಿದ್ದೆ ಆದರೆ ಉಗ್ರ ಹೋರಾಟ ಮಾಡಲಾಗುತ್ತದೆ” ಎಂದು ಆಗ್ರಹಿಸಲಾಯಿತು.
ಈ ಸುದ್ದಿ ಓದಿದ್ದೀರಾ?: ಕೊಪ್ಪಳ | ವಕ್ಫ್ ತಿದ್ದುಪಡಿ ಮಸೂದೆ ವಿರೋಧಿಸಿ ಎಸ್‌ಡಿಪಿಐ ಪ್ರತಿಭಟನೆ
ಈ ವೇಳೆ ಜನಪರ ಸಂಘಟನೆಗಳ ಒಕ್ಕೂಟದ ಜಿಲ್ಲಾ ಸಂಚಾಲಕ ಎಸ್ ಎ ಗಫಾರ್, ಭ್ರಾತೃತ್ವ ಸಮಿತಿಯ ಜಿಲ್ಲಾ ಸಹ ಸಂಚಾಲಕ ಚನ್ನಬಸಪ್ಪ ಅಪ್ಪಣ್ಣವರ್, ದಲಿತ ಯುವ ವೇದಿಕೆ ಜಿಲ್ಲಾ ಸಂಚಾಲಕ ಸುಂಕಪ್ಪ ಮೀಸಿ, ಮಖಬೂಲ್ ರಾಯಚೂರು ಮುಂತಾದವರು ಇದ್ದರು.
