ಕೊಪ್ಪಳ ತಾಲೂಕಿನ ಮುನಿರಾಬಾದ್ ಬಳಿ ಇರುವ ತುಂಗಭದ್ರಾ ಜಲಾಶಯದ ಏಳು ಗೇಟ್ಗಳು ಬೆಂಡ್ ಆಗಿವೆ ಎಂದು ಜಲಾಶಯದ ಸೇಫ್ಟಿ ರೀವಿವ್ ಕಮೀಟಿ ವರದಿ ನೀಡಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಹೇಳಿದರು.
ಕೊಪ್ಪಳದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ತುಂಗಭದ್ರಾ ಜಲಾಶಯದ ಗೇಟ್ ನಂಬರ್ 4, 11, 18, 20, 24, 27 ಹಾಗೂ 28ನೇ ಗೇಟ್ ಸೇರಿದಂತೆ 7 ಗೇಟ್ಗಳು ಬೆಂಡ್ ಆಗಿವೆ. ಇದರಲ್ಲಿ, 6 ಗೇಟ್ಗಳನ್ನು ಮೇಲೆ ಎತ್ತಲು ಹಾಗೂ ಇಳಿಸಲು ಆಗುತ್ತಿಲ್ಲ. ಗೇಟ್ ನಂಬರ್ 4 ಅನ್ನು ಕೇವಲ ಎರಡು ಅಡಿ ಮಾತ್ರ ಮೇಲಕ್ಕೆ ಎತ್ತಬಹುದು. ಗೇಟ್ ನಂಬರ್ 4 ಸೇರಿದಂತೆ ಒಟ್ಟು ಏಳು ಗೇಟ್ಗಳಿಗೆ ಹಾನಿಯಾಗಿವೆ ಎಂದು ತಿಳಿಸಿದರು.
ಒಂದು ಗೇಟ್ ಕೊಚ್ಚಿ ಹೋದಾಗಲೇ ಅಪಾರ ಪ್ರಮಾಣದ ನೀರು ಪೋಲಾಗಿತ್ತು. ಇದೀಗ ಏಳು ಗೇಟ್ಗಳು ಬೆಂಡ್ ಆಗಿದ್ದು, ಯಾವಾಗ ಏನಾಗುತ್ತದೆ ಎಂಬ ಆತಂಕ ಕಾಡುತ್ತಿದೆ. ಈ ಬಾರಿ ಮಲೆನಾಡು ಭಾಗದಲ್ಲಿ ಉತ್ತಮ ಮಳೆಯಾದ ಕಾರಣ ಹೆಚ್ಚಿನ ಪ್ರಮಾಣದ ನೀರು ಜಲಾಶಯಕ್ಕೆ ಬಂದಿದೆ. ನೀರಿನ ಒತ್ತಡದಿಂದ ಈ 7 ಗೇಟ್ಗಳಿಗೆ ಹಾನಿಯಾಗುವ ಸಾಧ್ಯತೆ ಇದೆ ಎಂದು ಸಚಿವ ಶಿವರಾಜ್ ತಂಗಡಗಿ ಹೇಳಿದ್ದಾರೆ.
ಕಳೆದ ವರ್ಷ ಆಗಸ್ಟ್ 10 ರಂದು ತುಂಗಭದ್ರಾ ಜಲಾಶಯದ ಗೇಟ್ ನಂಬರ್ 19 ಕೊಚ್ಚಿ ಹೋಗಿತ್ತು. ಒಂದು ವರ್ಷವಾದರೂ ಹೊಸ ಗೇಟ್ ಅಳವಡಿಸಿಲ್ಲ. ಈ ನಡುವೆ ಇದೀಗ ಏಳು ಗೇಟ್ಗಳು ಡ್ಯಾಮೇಜ್ ಆಗಿರುವುದು ಆತಂಕಕ್ಕೆ ಕಾರಣವಾಗಿದೆ. ಗೇಟ್ ಕಿತ್ತು ಹೋದ ಸಮಯದಲ್ಲಿ ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು ಜಲಾಶಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹೊಸ ಗೇಟ್ ಅಳವಡಿಸುವ ಕೆಲಸ ಆರಂಭಿಸುತ್ತೇವೆ ಎಂದು ಭರವಸೆ ನೀಡಿದ್ದರು. ಆದರೆ, ಒಂದು ವರ್ಷವಾದರೂ ಹೊಸ ಗೇಟ್ ಅಳವಡಿಸಿಲ್ಲ. ಇದರ ನಡುವೆ ಸಚಿವ ಶಿವರಾಜ್ ತಂಗಡಗಿ ಅವರು ಬಹಿರಂಗಪಡಿಸಿದ ಮಾಹಿತಿ ನಾಲ್ಕು ಜಿಲ್ಲೆಯ ರೈತರನ್ನ ಚಿಂತೆಗೀಡು ಮಾಡಿದೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಮೊಟ್ಟೆಗೆ ವಿರೋಧ; ಬಡ ಮಕ್ಕಳ ಆಹಾರದ ಸ್ವಾತಂತ್ರ್ಯಕ್ಕೆ ಕೊಕ್ಕೆ
2024ರ ಆಗಸ್ಟ್ 10 ರಂದು ತುಂಗಭದ್ರಾ ಜಲಾಶಯದ 19 ನೇ ಕ್ರಸ್ಟ್ ಗೇಟ್ ಕಿತ್ತು ಹೋಗಿತ್ತು. ಇದರಿಂದಾಗಿ ಅಪಾರ ಪ್ರಮಾಣದ ನೀರು ಪೋಲಾಗಿತ್ತು. ಈ ವೇಳೆ ಡ್ಯಾಂನ ಎಲ್ಲ ಕ್ರಸ್ಟ್ ಗೇಟ್ಗಳನ್ನು ಬದಲಾವಣೆ ಮಾಡಬೇಕೆಂದು ವರದಿಯನ್ನು ತಜ್ಞರು ನೀಡಿದ್ದರು. ಆದರೆ, ಸರ್ಕಾರ ಮಾತ್ರ ಎಲ್ಲ ಗೇಟ್ ಬದಲಾವಣೆ ಇರಲಿ ಕನಿಷ್ಠ 19ನೇ ಕ್ರಸ್ಟ್ ಗೇಟ್ಗೆ ಹೊಸ ಗೇಟ್ ಅಳವಡಿಸುವ ಕೆಲಸ ಸಹ ಮಾಡಿಲ್ಲ. ಇದೀಗ 7 ಗೇಟ್ಗಳು ಅಪಾಯದ ಅಂಚಿನಲ್ಲಿ ಇವೆ ಎಂಬ ವಿಚಾರ ತಿಳಿದು ರೈತರು ಆತಂಕಕ್ಕೆ ಒಳಗಾಗಿದ್ದಾರೆ. ಸದ್ಯ ತುಂಗಭದ್ರಾ ಜಲಾಶಯದಲ್ಲಿ 80 ಟಎಂಸಿ ನೀರು ಸಂಗ್ರಹವಾಗಿದೆ. ಮೂರು ಗೇಟ್ಗಳಿಂದ 13 ಸಾವಿರ ಕ್ಯೂಸೆಕ್ ನೀರು ಹೊರ ಬಿಡಲಾಗುತ್ತಿದೆ.
1 ಲಕ್ಷ 50 ಸಾವಿರ ಕ್ಯೂಸೆಕ್ಸ್ ಒಳಹರಿವು ಬಂದರೆ ಜಲಾಶಯದ ಎಲ್ಲ 33 ಗೇಟ್ಗಳನ್ನು ತೆರೆಯಬೇಕಾಗುತ್ತದೆ. ತುಂಗಭದ್ರಾ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿದ್ದು, ಹೆಚ್ಚಿನ ಒಳಹರಿವು ಬಂದರೆ ಎಲ್ಲ ಗೇಟ್ಗಳನ್ನು ತೆರೆಯಲು ಸಾಧ್ಯವಾಗದೆ ಡ್ಯಾಂಗೆ ಅಪಾಯವಾಗುವ ಸಾಧ್ಯತೆಗಳಿವೆ.