- ಬೇಸಿಗೆ ಮುಗಿಯುವವರೆಗೂ ಕಾಫಿ, ಟೀ ಹಾಗು ಮಧ್ಯಪಾನ ನಿಷೇಧಿಸಿ
- ಗಾಳಿಯಾಡುವಂತಿರುವ ಪಾದರಕ್ಷೆಗಳನ್ನು ಧರಿಸುವುದು ಒಳಿತು
ಈಗಾಗಲೇ ರಾಜ್ಯದಾದ್ಯಂತ ಬಿಸಿಲಿನ ಬೇಗೆ ಹೆಚ್ಚಾಗಿದೆ. ಜನರು ಆರೋಗ್ಯದ ಬಗ್ಗೆ ಮುಂಜಾಗ್ರತೆ ವಹಿಸಬೇಕೆಂದು ಕೊಪ್ಪಳ ಜಿಲ್ಲೆಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಅಲಕನಂದಾ ಕೆ ಮಳಗಿ ಸಲಹೆ ನೀಡಿದ್ದಾರೆ.
ಸಾರ್ವಜನಿಕರು ಮನೆಯಿಂದ ಹೊರಗೆ ಹೋಗುವಾಗ ಜೊತೆಯಲ್ಲಿ ಶುದ್ಧ ಕುಡಿಯುವ ನೀರು ಹಾಗೂ ಛತ್ರಿ ತೆಗೆದುಕೊಂಡು ಹೋಗಬೇಕು. ಬಿಸಿಲಿನಲ್ಲಿ ವ್ಯವಸಾಯ ಮಾಡುವವರು, ರಸ್ತೆ ಕಾಮಗಾರಿ ಸೇರಿದಂತೆ ಬಿಸಿಲಿನಲ್ಲಿ ಹೆಚ್ಚು ಕಾರ್ಯನಿರ್ವಹಿಸುವವರು ಆದಷ್ಟು ಬೆಳಗ್ಗೆ 11 ಗಂಟೆಯ ಒಳಗೆ ಕೆಲಸ ಮುಗಿಸುವುದನ್ನು ರೂಢಿಮಾಡಿಕೊಳ್ಳಬೇಕು. ಅದಾಗದಿದ್ದರೆ, ಸಂಜೆ 4 ಗಂಟೆ ನಂತರ ಉಳಿದ ಕೆಲಸ ಮುಂದುವರಿಸಬೇಕೆಂದು ಕಿವಿಮಾತು ಹೇಳಿದ್ದಾರೆ.
ಸಡಿಲವಾದ ತೆಳು ಬಣ್ಣದ ಹತ್ತಿ ಬಟ್ಟೆಯನ್ನು ಧರಿಸಬೇಕು. 20 ನಿಮಿಷಕ್ಕೊಮ್ಮ ದಾಹವಿಲ್ಲದಿದ್ದರೂ ನೀರು ಕುಡಿಯವುದು ಒಳ್ಳೆಯದು. ಆಗಾಗ್ಗೆ ಓಆರ್‍ಎಸ್ ನೀರನ್ನು ಕುಡಿಯಬೇಕು ಮತ್ತು ಹಣ್ಣಿನ ರಸ ಅಥವಾ ಪಾನಕಗಳನ್ನು ಕುಡಿಯಬೇಕು. ಬೆಚ್ಚಗಿನ, ಮಸಾಲೆ ರಹಿತ ಆಹಾರ ಸೇವಿಸಬೇಕು. ಗಾಳಿಯಾಡುವಂತಿರುವ ಪಾದರಕ್ಷೆಗಳನ್ನು ಧರಿಸಬೇಕು ಎಂದು ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ?: ಚುನಾವಣೆ 2023 | ವಿಟಿಯು ಮೊದಲ ಸೆಮಿಸ್ಟರ್ ಪರೀಕ್ಷೆ ಮುಂದೂಡಿಕೆ
ಬಿಸಿಲಿನಲ್ಲಿ ಯಾವುದೇ ವ್ಯಕ್ತಿ ತೊದಲು ಮಾತು ಅಥವಾ ಅರ್ಥ ರಹಿತವಾಗಿ ಬಡಬಡಿಸಿದಲ್ಲಿ ಕೂಡಲೇ ಅವರನ್ನು ನೆರಳಿನ ಸ್ಥಳಕ್ಕೆ ಸ್ಥಳಾಂತರಿಬೇಕು. ಅವರನ್ನು ನೆಲದ ಮೇಲೆ ಮಲಗಿಸಿ ಕಾಲುಗಳನ್ನು ಮೇಲಕ್ಕೆ ಎತ್ತಿ ವಿಶ್ರಾಂತಿ ಪಡೆಯುವಂತೆ ಮಾಡಬೇಕು. ಅದಾದ ನಂತರ ಆಸ್ಪತ್ರೆಗೆ ದಾಖಲಿಸಬೇಕು. ಚರ್ಮ ಕೆಂಪಾದರೆ, ಬೆವರು ಕಡಿಮೆ ಆದರೆ, ದೇಹದ ಉಷ್ಣತೆ ಜಾಸ್ತಿಯಾದರೆ, ದೀರ್ಘವಾದ ತೀವ್ರ ಉಸಿರಾಟ ಇದ್ದಲ್ಲಿ ತುರ್ತಾಗಿ ಸಮೀಪದ ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕು ಎಂದು ಸಲಹೆ ನೀಡಿದ್ದಾರೆ.
ಯಾವುದು ಆರೋಗ್ಯಕ್ಕೆ ಹಾನಿ
ಅತಿ ಬಿಗಿಯಾದ ಸಿಂಥೆಟಿಕ್ ಬಟ್ಟೆಗಳನ್ನು ಧರಿಸಬಾರದು. ಬೇಸಿಗೆ ಮುಗಿಯುವವರೆಗೂ ಮದ್ಯಪಾನ ಮಾಡಬಾರದು. ಬೆವರನ್ನು ಒರೆಸಲು ಒರಟಾದ ಒಟ್ಟೆಯನ್ನು ಉಪಯೋಗಿಸಬಾರದು. ಕಾಫೀ ಅಥವಾ ಟೀ ಸಕ್ಕರೆ ಅಂಶವುಳ್ಳ ಪಾನಿಯಗಳನ್ನು ಅತಿಯಾಗಿ ಸೇವಿಸಬಾರದೆಂದು ಅವರು ತಿಳಿಸಿದ್ದಾರೆ.