ಪ್ರತಿಯೊಬ್ಬ ಮಹಿಳೆ ಮುಟ್ಟಿನ ದಿನಗಳಲ್ಲಿ ವೈಯಕ್ತಿಕ ಶುಚಿತ್ವಕ್ಕೆ ಆದ್ಯತೆ ನೀಡಿ ಸ್ಯಾನಿಟೆರಿ ಪ್ಯಾಡ್ ಬಳಕೆಗೆ ಒತ್ತು ನೀಡಬೇಕೆಂದು ಜಿಲ್ಲಾ ಪಂಚಾಯತಿಯ ಸ್ವಚ್ಛ ಭಾರತ ಮಿಷನ್ ಯೋಜನೆಯ ನೈರ್ಮಲ್ಯ ಮತ್ತು ವೈಯಕ್ತಿಕ ಶುಚಿತ್ವ ಸಮಾಲೋಚಕಿ ಬಸಮ್ಮ ಹುಡೇದ ಅವರು ಸಲಹೆ ನೀಡಿದರು.
ಕಲ್ಲತಾವರಗೇರಾ ಗ್ರಾಮ ಪಂಚಾಯತಿಯಿಂದ ಮಹಾತ್ಮಾ ಗಾಂಧಿ ನರೇಗಾ ಯೋಜನೆಯಡಿ ಕೆಂಚನಡೊಣಿ ತಾಂಡಾದ ಹತ್ತಿರ ಇರುವ ಡಿ ಹೊಸಳ್ಳಿ ಕೆರೆ ಹೂಳೆತ್ತುವ ಕಾಮಗಾರಿ ಸ್ಥಳದಲ್ಲಿ ನರೇಗಾ ಮಹಿಳೆಯರ ಸಮ್ಮುಖದಲ್ಲಿ ಮೇ 29ರಂದು ನಡೆದ ಋತುಚಕ್ರ ನೈರ್ಮಲ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಮುಟ್ಟಿನ ಸಮಯದಲ್ಲಿ ಮಾಸಿಕ ಋತುಚಕ್ರ ನಿರ್ವಹಣೆ, ಶುಚಿಯಾದ ಬಟ್ಟೆ ಬಳಕೆ ಹಾಗು ಸ್ಯಾನಿಟೆರಿ ಪ್ಯಾಡ್ ಬಳಕೆಯಿಂದ ಆಗುವ ಅನುಕೂಲಗಳು, ವೈಯಕ್ತಿಕ ಶುಚಿತ್ವ ಕುರಿತು ಎಲ್ಲರು ತಿಳಿಯಬೇಕು. ಮಹಿಳೆಯರು ವೈಯಕ್ತಿಕ ಶುಚಿತ್ವದ ಬಗ್ಗೆ ಹೆಚ್ಚಿನ ಒತ್ತು ಕೊಡಬೇಕು. ಸ್ಯಾನಿಟರಿ ಪ್ಯಾಡ್ಗಳ ಬಳಕೆ ಹಾಗೂ ಬಳಸಿದ ಪ್ಯಾಡ್ಗಳನ್ನು ಇನ್ಸಿನರೇಟರ್ ಮೂಲಕ ವೈಜ್ಞಾನಿಕ ನಿರ್ವಹಣೆ ಮಾಡುವುದನ್ನು ಬಗ್ಗೆ ತಿಳಿದುಕೊಳ್ಳಬೇಕು” ಎಂದು ಸಲಹೆ ನೀಡಿದರು.
“ಇತ್ತೀಚಿನ ದಿನಗಳಲ್ಲಿ ನಾವು ಆರೋಗ್ಯದ ಬಗ್ಗೆ ಕಾಳಜಿ ವಹಿಸದೇ ಇರುವುದರಿಂದ ಅನಾರೋಗ್ಯಕ್ಕೆ ಒಳಗಾಗುತ್ತಿದ್ದೇವೆ. ಮುಟ್ಟನ್ನು ಗುಟ್ಟನಾಗಿಡಬೇಕು ಎಂಬ ಭ್ರಮೆಯಿಂದ ಹೊರಬರಬೇಕು. ಆರೋಗ್ಯದ ಬದಲಾವಣೆಗೆ ಮುನ್ನುಡಿ ಬರೆಯಬೇಕು. ಮಹಿಳೆಯರು ಋತುಚಕ್ರ ಸಂದರ್ಭದಲ್ಲಿ ವೈಯಕ್ತಿಕ ಶುಚಿತ್ವಕ್ಕೆ ಹೆಚ್ಚಿನ ಆದ್ಯತೆ ನೀಡಲು ಪ್ರತಿ ಗ್ರಾಮ ಪಂಚಾಯತಿಯಲ್ಲಿ ಬಳಕೆಯಾದ ಪ್ಯಾಡಗಳನ್ನು ಸಂಗ್ರಹಿಸಿ ವೈಜ್ಞಾನಿಕ ನಿರ್ವಹಣೆ ಮಾಡಲು ಇನ್ಸಿನರೇಟರ್ ಅಳವಡಿಸಲಾಗುತ್ತಿದ್ದು, ಎಲ್ಲಾ ಮಹಿಳೆಯರು ಬಳಸಿದ ಪ್ಯಾಡ್ಗಳನ್ನು ಈ ನಿರ್ವಹಣಾ ಘಟಕಕ್ಕೆ ನೀಡಬೇಕು. ಎಲ್ಲಿ ಬೇಕಾದಲ್ಲಿ ಎಸೆಯದೆ ಗ್ರಾಮ ಪಂಚಾಯತಿಯ ಕಸ ವಿಲೇವಾರಿ ವಾಹನಕ್ಕೆ ನೀಡಬೇಕು ಅಥವಾ ನಿಗದಿಪಡಿಸಿದ ಸ್ಥಳದಲ್ಲಿ ಅವುಗಳನ್ನು ವಿಲೆವಾರಿ ಮಾಡತಕ್ಕದ್ದು , ಬಯಲು ಶೌಚಕ್ಕೆ ಹೋಗುವುದರಿಂದ ಅನೇಕ ರೋಗಗಳು ಹರಡುವ ಸಾಧ್ಯತೆಯು ಶೇ.80ರಷ್ಟು ಇರುತ್ತದೆ ಎಂಬ ಬಗ್ಗೆ ತಿಳಿಯಬೇಕು. ಹಸಿ ಕಸ ಮತ್ತು ಒಣ ಕಸ ಪ್ರತ್ಯೇಕಿಸಿ ಕೊಡಬೇಕು.” ಎಂದು ಮಾಹಿತಿ ನೀಡಿದರು.
ತಾಲೂಕು ಪಂಚಾಯತಿಯ ನರೇಗಾ ಸಹಾಯಕ ನಿರ್ದೇಶಕಿ ಸೌಮ್ಯ ಕೆ ಅವರು ಮಾತನಾಡಿ, “ಎಲ್ಲಾ ಕೂಲಿಕಾರ್ಮಿಕರು ತಮ್ಮ ಕೆಲಸದ ಜೊತೆಗೆ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ನೆಮ್ಮದಿ ಜೀವನ ಸಾಗಿಸಬೇಕೆಂದು ತಿಳಿಸಿದರು. ಕೆಲಸದ ಒತ್ತಡದಲ್ಲಿ ನಾವುಗಳು ಆರೋಗ್ಯದ ಬಗ್ಗೆ ಗಮನ ಹರಿಸದಿರುವದರಿಂದ ದೇಹದ ಆರೋಗ್ಯದಲ್ಲಿ ಏರುಪೇರುಗಳು ಆಗುತ್ತವೆ. ಕಾಲಕಾಲಕ್ಕೆ ನಾವುಗಳು ವೈದ್ಯರನ್ನು ಸಂಪರ್ಕಿಸಿ ತಪಾಸಣೆ ಮಾಡಿಸಿಕೊಳ್ಳಬೇಕು. ಇತ್ತೀಚಿನ ದಿನಗಳಲ್ಲಿ ಎಲ್ಲರೂ ಒತ್ತಡಕ್ಕೆ ಒಳಗಾಗಿ ನಮ್ಮ ದೇಹದ ಆರೋಗ್ಯದಲ್ಲಿ ಏರುಪೇರಾಗುವುದನ್ನು ಕಾಣುತ್ತಿದ್ದೇವೆ. ಆ ದಿಸೆಯಲ್ಲಿ ಕ್ರಮಬದ್ದವಾದ ಆಹಾರ, ಆರೋಗ್ಯ ಕಾಳಜಿಯೊಂದಿಗೆ ಕೆಲಸ ನಿರ್ವಹಿಸುವುದರಿಂದ ದೇಹದ ಮೇಲೆ ಯಾವುದೇ ವ್ಯತಿರಿಕ್ತ ಪರಿಣಾಮ ಉಂಟಾಗುವದಿಲ್ಲ ” ಎಂದು ಸಲಹೆ ನೀಡಿದರು.
ತಾಲೂಕು ಐಇಸಿ ಸಂಯೋಜಕ ದೇವರಾಜ ಪತ್ತಾರ, ಬೇರ್ಫೂಟ್ ಟೆಕ್ನಿಷಿಯನ್ ರಾಮಣ್ಣ ಕುಟುಗನಹಳ್ಳಿ, ಡಿಇಒ ಲಕ್ಷ್ಮಣ ಹಿರೇಮನಿ, ಗ್ರಾಮ ಕಾಯಕ ಮಿತ್ರ ಯಂಕಮ್ಮ, ತಾಂಡಾ ರೋಜಗಾರ್ ಮಿತ್ರ ಶೇಖಪ್ಪ ಕಾರಬಾರಿ, ಕಾಯಕ ಬಂಧುಗಳು, ಕೂಲಿಕಾರ್ಮಿಕರು ಹಾಜರಿದ್ದರು.




