ವಿಧಾನಸಭಾ ಚುನಾವಣೆಯಲ್ಲಿ ಟಿಎಂಸಿ ಸೋಲುಂಡು, ಬಿಜೆಪಿ ಅಧಿಕಾರ ಹಿಡಿದ ಬೆನ್ನಲ್ಲೇ ಪಶ್ಚಿಮ ಬಂಗಾಳದಲ್ಲಿ ಭಾರೀ ರಾಜಕೀಯ ಉದ್ವಿಗ್ನತೆ ಸೃಷ್ಟಿಯಾಗಿದೆ. ಚುನಾವಣೋತ್ತರ ಹಿಂಸಾಚಾರಕ್ಕೆ ಬಲಿಯಾದ ತಮ್ಮ ಪಕ್ಷದ ಕಾರ್ಯಕರ್ತರನ್ನು ಭೇಟಿ ಮಾಡಲು ತೆರಳಿದ್ದ ಟಿಎಂಸಿ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಅವರ ಮೇಲೆ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಅವರತ್ತ ಮೊಟ್ಟೆಗಳನ್ನು ಎಸೆದು ದೈಹಿಕವಾಗಿ ಹಲ್ಲೆ ನಡೆಸಿರುವ ಗಂಭೀರ ಘಟನೆ ಶನಿವಾರ ನಡೆದಿದೆ.
ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯ ಸೋನಾರ್ಪುರ ಎಂಬಲ್ಲಿ ಘಟನೆ ನಡೆದಿದೆ. ಚುನಾವಣೆಯ ಬಳಿಕ, ತಮ್ಮ ರಾಜಕೀಯ ವಿರೋಧಿಗಳು ತಮ್ಮನ್ನು ಗುರಿಯಾಗಿಸಿಕೊಂಡು ದೌರ್ಜನ್ಯ ಎಸಗುತ್ತಿದ್ದಾರೆ ಎಂದು ಸೋನಾರ್ಪುರದ ಟಿಎಂಸಿ ಕಾರ್ಯಕರ್ತರು ಆರೋಪಿಸಿದ್ದರು. ಈ ಹಿಂಸಾಚಾರದಲ್ಲಿ ಕೊಲೆಯಾಗಿದ್ದ ಟಿಎಂಸಿ ಕಾರ್ಯಕರ್ತರೊಬ್ಬರ ಕುಟುಂಬವನ್ನು ಭೇಟಿ ಮಾಡಿ, ಸಾಂತ್ವನ ಹೇಳಲು ಅಭಿಷೇಕ್ ಬ್ಯಾನರ್ಜಿ ತೆರಳಿದ್ದರು. ಈ ವೇಳೆ, ಅವರ ಮೇಲೂ ದಾಳಿಗಳು ನಡೆದಿವೆ.
ಅಭಿಷೇಕ್ ಬ್ಯಾನರ್ಜಿ ಅವರನ್ನು ಸುತ್ತುವರಿದ ಗುಂಪು, ಅಭಿಷೇಕ್ ಅವರನ್ನು ‘ಚೋರ್, ಚೋರ್’ (ಕಳ್ಳ, ಕಳ್ಳ) ಎಂದು ಜೋರಾಗಿ ಘೋಷಣೆಗಳನ್ನು ಕೂಗುತ್ತಾ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ನಂತರ, ಅವರ ಮೇಲೆ ಕೆಲವರು ಮೊಟ್ಟೆಗಳನ್ನು ಎಸೆದು, ದೈಹಿಕವಾಗಿ ಹಲ್ಲೆ ನಡೆಸಿದ್ದಾರೆ.
ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ; ಬಿಳಿ ಶರ್ಟ್ ಧರಿಸಿ, ತಲೆಗೆ ಕ್ರಿಕೆಟ್ ಹೆಲ್ಮೆಟ್ ಧರಿಸಿರುವ ಅಭಿಷೇಕ್ ಬ್ಯಾನರ್ಜಿ ಅವರನ್ನು ಕೆಲವರು ತಳ್ಳುತ್ತಾ, ಎಳೆದಾಡುತ್ತಾ ಹಾಗೂ ಆಕ್ರೋಶದಿಂದ ಕೂಗಾಡುತ್ತಿರುವುದು ಕಂಡುಬಂದಿದೆ. ಪರಿಸ್ಥಿತಿ ಕೈಮೀರುತ್ತಿದ್ದಂತೆ ತಕ್ಷಣವೇ ರಕ್ಷಣಾ ಕವಚಗಳನ್ನು ಧರಿಸಿ ಸ್ಥಳಕ್ಕೆ ಧಾವಿಸಿದ ಪೊಲೀಸ್ ಸಿಬ್ಬಂದಿಗಳು ಉದ್ರಿಕ್ತ ಜನಸಮೂಹದಿಂದ ಅಭಿಷೇಕ್ ಅವರನ್ನು ರಕ್ಷಿಸಿ ಅಲ್ಲಿಂದ ಕರೆದೊಯ್ದಿದ್ದಾರೆ.
Staying true to his word, Shri @abhishekaitc REFUSED TO ABANDON the grieving family of Sanju Karmakar.
— All India Trinamool Congress (@AITCofficial) May 30, 2026
Even after a vicious attack by @BJP4Bengal-backed miscreants, our National General Secretary chose not to turn back. Instead, he stood beside a family devastated by an… pic.twitter.com/L11oo92AzQ
ಹತ್ಯೆಗೀಡಾದ ಟಿಎಂಸಿ ಕಾರ್ಯಕರ್ತನ ಕುಟುಂಬವನ್ನು ಭೇಟಿಯಾದ ಬಳಿಕ, ಸುದ್ದಿಗಾರರೊಂದಿಗೆ ಮಾತನಾಡಿದ ಅಭಿಷೇಕ್ ಬ್ಯಾನರ್ಜಿ, “ಅವರು (ದಾಳಿಕೋರರು) ನನಗೆ ಏನು ಮಾಡಿದ್ದಾರೆ ಎಂಬುದನ್ನು ನೀವೇ ನೋಡಿ. ಇದು ಸಂಪೂರ್ಣವಾಗಿ ಪೂರ್ವನಿಯೋಜಿತವಾಗಿ ನಡೆದ ಸಂಚಾಗಿದೆ. ಈ ಇಡೀ ಪ್ರದೇಶದಲ್ಲಿ ಯಾವುದೇ ಪೊಲೀಸ್ ಬಂದೋಬಸ್ತ್ ಇರಲಿಲ್ಲ. ಅವರು ನನ್ನನ್ನು ಕೊಲ್ಲಲು ಸಂಚು ರೂಪಿಸಿದ್ದರು. ಸ್ಥಳೀಯ ಪೊಲೀಸರು ತಮ್ಮ ಪಡೆಯನ್ನು ಇಲ್ಲಿಗೆ ಕಳುಹಿಸಿ, ಸಂತ್ರಸ್ತ ಕುಟುಂಬಗಳಿಗೆ ಸೂಕ್ತ ರಕ್ಷಣೆ ನೀಡುವವರೆಗೂ ನಾನು ಈ ಸ್ಥಳವನ್ನು ಬಿಟ್ಟು ಕದಲುವುದಿಲ್ಲ” ಎಂದು ಅಲ್ಲಿಯೇ ಪಟ್ಟು ಹಿಡಿದು ಕುಳಿತಿದ್ದಾರೆ.
ಈ ಹಲ್ಲೆಯ ಹಿಂದೆ ಆಡಳಿತಾರೂಢ ಬಿಜೆಪಿಯ ಕೈವಾಡವಿದೆ ಎಂದು ಟಿಎಂಸಿ ನಾಯಕರು ಆರೋಪಿಸಿದ್ದಾರೆ. ಆದಾಗ್ಯೂ, ಈ ಆರೋಪವನ್ನು ಬಿಜೆಪಿ ತಳ್ಳಿಹಾಕಿದೆ. “ಅಭಿಷೇಕ್ ಬ್ಯಾನರ್ಜಿ ಅವರ ಮೇಲಿನ ಮೊಟ್ಟೆ ಎಸೆತ ಹಾಗೂ ಎಳೆದಾಟದ ಘಟನೆಯಲ್ಲಿ ಬಿಜೆಪಿಯ ಯಾವುದೇ ಪಾತ್ರವಿಲ್ಲ. ಕಳೆದ 15 ವರ್ಷಗಳ ಅವಧಿಯಲ್ಲಿ ಟಿಎಂಸಿ ರಾಜ್ಯವನ್ನು ಹೇಗೆ ಆಳಿದೆ ಎಂಬುದು ಅಲ್ಲಿನ ಜನರಿಗೆ ಚೆನ್ನಾಗಿ ಗೊತ್ತಿದೆ” ಎಂದು ಬಂಗಾಳ ಬಿಜೆಪಿ ರಾಜ್ಯಾಧ್ಯಕ್ಷ ಸಮೀಕ್ ಭಟ್ಟಾಚಾರ್ಯ ಹೇಳಿದ್ದಾರೆ.



