ಕೊಪ್ಪಳ ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿದೆ. ಪರಿಣಾಮ ಜಿಲ್ಲೆಯ ಕುಕನೂರು ತಾಲೂಕಿನ ಮಂಗಳೂರು ಗ್ರಾಮ ಪಂಚಾಯತಿ ಸದಸ್ಯ ಶರಣಪ್ಪ ಬಸಪ್ಪ ಎಮ್ಮಿ ಅವರ ಹೊಲದಲ್ಲಿದ್ದ ಕೃಷಿ ಹೊಂಡ ಸಂಪೂರ್ಣ ಭರ್ತಿಯಾಗಿದೆ.
ಕಳೆದ ತಿಂಗಳಷ್ಟೇ ತಮ್ಮ ಜಮೀನಿನಲ್ಲಿ ಶರಣಪ್ಪ ಅವರು ಕೃಷಿ ಹೊಂಡ ನಿರ್ಮಾಣ ಮಾಡಿದ್ದರು. ಇದೀಗ, ಮಳೆ ನೀರಿನಿಂದಾಗಿ ಹೊಂಡು ಸಂಪೂರ್ಣ ತುಂಬಿದೆ. “ಹೊಂಡ ತುಂಬಿರುವುದು ನಮ್ಮ ಗ್ರಾಮದ ಪ್ರಾಣಿ ಪಕ್ಷಿಗಳಿಗೆ, ಹೊಲ-ಗದ್ದೆಗಳಿಗೆ ಉಪಯೋಗವಾಗಲಿದೆ” ಎಂದು ಗ್ರಾಮದ ರೈತ ಗಟ್ಟೆಪ್ಪ ಉಮಚಗಿ ಹೇಳಿದ್ದಾರೆ.
ಶರಣಪ್ಪ ಅವರ ಜಮೀನಿಗೆ ಗ್ರಾಮ ಪಂಚಾಯತಿ ಪಿಡಿಒ ನೀಲಂ ಚಳಗೇರಿ, ಗ್ರಾಮ ಪಂಚಾಯತಿ ಅಧ್ಯಕ್ಷ ಸಕ್ರಪ್ಪ ಮಂಗಳಪ್ಪ ಚಿನ್ನೂರು ಭೇಟಿ ನೀಡಿ, ಹೊಂಡ ನಿರ್ಮಿಸಿದ ಶರಣಪ್ಪ ಅವರ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈ ವೇಳೆ, ರೈತರಾದ ಬಸಪ್ಪ ಎಮ್ಮಿ, ರಾಮಣ್ಣ ನಿಂಗಾಪುರ, ರವಿಕುಮಾರ ಶೆಲೂಡಿ, ವೀರಭದ್ರಪ್ಪ ಎಮ್ಮಿ, ಸುರೇಶ ಮ್ಯಾಗಳೇಶಿ ಇದ್ದರು.