ಕೊರಗ ಸಮುದಾಯವು ಆದಿಮ ಅತ್ಯಂತ ಹಿಂದುಳಿದ ಅಸಹಾಯಕ ದುರ್ಬಲ ಬುಡಕಟ್ಟು ಪಂಗಡವಾಗಿದ್ದು ಕೇಂದ್ರ ಸರ್ಕಾರವು 1986ರಲ್ಲಿ ವಿಶೇಷವಾದ ನೋಟಿಫಿಕೇಶನ್ ಮಾಡಿ ಕರ್ನಾಟಕ ರಾಜ್ಯದಲ್ಲಿ ನಿರ್ದಿಷ್ಟ, ದುರ್ಬಲ, ಅಸಹಾಯಕ, ಅಂಚಿಗೆ ತಳ್ಳಲ್ಪಟ್ಟ ಬುಡಕಟ್ಟು ಸಮುದಾಯ (Particularly Vulnerable Trible Group) ಎಂದು ಘೋಷಿಸಿದೆ. ಹೀಗೆ ಘೋಷಣೆಗೆ ಒಳಪಡುವ ಎಲ್ಲಾ ಸಮುದಾಯಗಳ ಪ್ರಮುಖ ಲಕ್ಷಣಗಳೆಂದರೆ, ಕೃಷಿಪೂರ್ವ ನಾಗರೀಕತೆ, ಅಲೆಮಾರಿ, ಅರೆ ಅಲೆಮಾರಿ ಹಂತದಲ್ಲಿರುವ ಬದುಕುವ ವಿಧಾನಗಳು, ತೀವ್ರವಾಗಿ ಇಳಿಮುಖವಾಗುತ್ತಿರುವ ಜನಸಂಖ್ಯೆ, ಹದಗೆಟ್ಟಿರುವ ಆರೋಗ್ಯ ಹಾಗೂ ಆಹಾರದ ಪರಿಸ್ಥಿತಿ, ಮುಖ್ಯ ವಾಹಿನಿ ಸಮಾಜದೊಂದಿಗೆ ಕನಿಷ್ಠ ಸಂವಾದ ಮಾಡಲು ಬೇಕಾಗಿರುವ ಮಾನವ ಸಂಪನ್ಮೂಲ ಇಲ್ಲದೆ ಇರುವುದು ಇತ್ಯಾದಿ. ಕೊರಗರಂತಹ ಪ್ರೀಮಿಟಿವ್ ಹಂತದ ಜೀವನ ವಿಧಾನ ಇರುವ ಜನಸಮುದಾಯವನ್ನು ಸಾಂಪ್ರದಾಯಿಕ ಆಡಳಿತ ವ್ಯವಸ್ಥೆಯು ಗುಲಾಮರನ್ನಾಗಿ ಮತ್ತು ಅಸ್ಪಶ್ಯರನ್ನಾಗಿ ನಡೆಸಿಕೊಂಡಾಗ ಸಮುದಾಯದೊಳಗೆ ಉಂಟಾದ ಗೊಂದಲ ಕೊರಗರನ್ನು ಸಂಪೂರ್ಣ ನಿಷ್ಕ್ರಿಯರನ್ನಾಗಿ ಮಾಡಿತು. ಅಜಲು, ಅಸ್ಪೃಶ್ಯತೆಯ ಕಾರಣ ಸಮುದಾಯದ ಶಿಕ್ಷಣ. ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಿತು.

1988ರ ನಂತರ ಸಂಘಟನೆಯ ಪ್ರಕ್ರಿಯೆ ಆರಂಭಗೊಂಡಾದ ಮೇಲೆ ಸಮುದಾಯದಲ್ಲಿ ಶಿಕ್ಷಣ, ಆರೋಗ್ಯ, ಜನಜಾಗೃತಿಯ ಅರಿವು ಮೂಡಲಾರಂಬಿಸಿತು. ಸಂಘಟನೆಯ ಸತತ 30 ವರ್ಷಗಳ ಸುದೀರ್ಘ ಪ್ರಯತ್ನದಿಂದಾಗಿ ಇಂದು ಎಸ್.ಎಸ್.ಎಲ್.ಸಿ. ಯಿಂದ ಹಿಡಿದು ಪಿ.ಯು.ಸಿ., ವದವಿ. ಸ್ನಾತಕ್ಕೋತ್ತರ ಪದವಿ, ಡಾಕ್ಟರೇಟ್, ವೈದ್ಯಕೀಯ ಹಾಗೂ ಕಾನೂನು ಪದವಿಗಳನ್ನು ಹಾಗೂ ಬೇರೆ ಬೇರೆ ತಾಂತ್ರಿಕ ಕೋರ್ಸ್, ನರ್ಸಿಂಗ್, ಡಿ.ಎಡ್. ಬಿ.ಎಡ್. ಇನ್ನಿತರ ವೃತ್ತಿಪರ ಶಿಕ್ಷಣಗಳನ್ನು ಸಮುದಾಯದ ಯುವಜನರು ಪಡೆಯಲು ಸಾಧ್ಯವಾಯಿತು. ಆದರೆ ಶಿಕ್ಷಣ ಪಡೆದ ಯುವಜನರಿಗೆ ಅವರ ವಿದ್ಯಾರ್ಹತೆಗೆ ತಕ್ಕ ಉದ್ಯೋಗವನ್ನು ಪಡೆಯಲು ಇಂದಿಗೂ ಕೂಡ ಸಾಧ್ಯವಾಗಿಲ್ಲ.

ಈ ಬಗ್ಗೆ ಈದಿನ.ಕಾಮ್ ಜೊತೆ ಮಾತನಾಡಿದ ಕೊರಗ ಸಮುದಾಯ ಹೋರಾಟಗಾರ್ತಿ ಸುಶೀಲ ನಾಡ, ಕಳೆದ ಜುಲೈ 2023 ರಂದು ಸನ್ಮಾನ್ಯ ಭಾರತದ ರಾಷ್ಟ್ರಪತಿಯಾಗಿರುವ ದೌಪದಿ ಮುರ್ಮು ಅವರು ಕರ್ನಾಟಕ ರಾಜ್ಯಕ್ಕೆ ಭೇಟಿ ನೀಡಿರುವ ಸಂದರ್ಭದಲ್ಲಿ ಕೊರಗ ಸಂಘಟನೆ ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ಯುವಜನರಿಗೆ 100% ಉದ್ಯೋಗ ಭದ್ರತೆಗೆ ಸಂಬಂಧಿಸಿ ಕಾಲಬದ್ದ ಕ್ರೀಯಾ ಯೋಜನೆಯನ್ನು ರೂಪಿಸಿ ಕಾರ್ಯರೂಪಕ್ಕೆ ತರುವಂತೆ ಸೂಚಿಸಿದ್ದರು. ಇದಕ್ಕೆ ಸಂಬಂಧಿಸಿ ಕರ್ನಾಟಕ ಸರ್ಕಾರದ ಮಾನ್ಯ ಮುಖ್ಯಮಂತ್ರಿಗಳಾದ ತಾವು ಅಂದಿನ ಬುಡಕಟ್ಟು ಕಲ್ಯಾಣ ಸಚಿವರಾದ ಶ್ರೀಯುತ ನಾಗೇಂದ್ರ ರವರಿಗೆ ಇದನ್ನು ಕಾರ್ಯರೂಪಕ್ಕೆ ತರುವಂತೆ ನಿರ್ದೇಶನ ಮಾಡಿದ್ದರು. ಇದಕ್ಕೆ ಪೂರಕವಾಗಿ ಅಂದು ಸಮಾಜ ಕಲ್ಯಾಣ ಪ್ರಧಾನ ಕಾರ್ಯದರ್ಶಿ ಶ್ರೀಯುತ ಮಣಿವನ್ನನ್ ರವರು ಅನೇಕ ಉಪಕ್ರಮಗಳನ್ನು ತೆಗೆದುಕೊಂಡಿದ್ದರು. ಇಲಾಖೆ ವತಿಯಿಂದ ವಿದ್ಯಾವಂತ ಯುವಜನರ ಸರ್ವೇ ಕಾರ್ಯವನ್ನು ನಡೆಸಲಾಗಿತ್ತು. ಆದರೆ ಹಠಾತ್ತನೆ ಮಣಿವನ್ನನ್ ರವರನ್ನು ನಮ್ಮ ಬುಡಕಟ್ಟು ಕಲ್ಯಾಣ ಇಲಾಖೆಯ ಜವಬ್ದಾರಿಯಿಂದ ನಿಯುಕ್ತಿಗೊಳಿಸಲಾಯಿತು. ಅಲ್ಲಿಂದ ಈ ವಿಷಯ ಯಾವುದೇ ರೀತಿಯಲ್ಲಿ ಸ್ವಲ್ಪವೂ ಕೂಡ ಮುಂದುವರಿದಿರುವುದಿಲ್ಲ. ಸಂಬಂಧಿಸಿದ ಇಲಾಖೆ ಯಾವುದೇ ರೀತಿಯ ಕ್ರಮ ಕೈಗೊಂಡಿರುವುದಿಲ್ಲ. ಇದರಿಂದ ಯುವಜನರು ಉದ್ಯೋಗವಿಲ್ಲದೇ ಮಾನಸಿಕ ಒತ್ತಡದಿಂದ ಆತ್ಮವಿಶ್ವಾಸವನ್ನು ಕಳೆದುಕೊಂಡು ಬದುಕುವಂತಾಗಿದೆ.
ಇದಲ್ಲದೇ ಪದವಿ ಪಡೆದ ಯುವಜನರನ್ನು ಕೂಡ ಕೇವಲ ಗ್ರಾಮ ಪಂಚಾಯಿತಿ, ಪಟ್ಟಣ ಪಂಚಾಯಿತಿ, ಪುರಸಭೆ, ನಗರಸಭೆಗಳಲ್ಲಿ ಸ್ವಚ್ಛತೆ ಕೆಲಸಗಳಿಗೆ ಮಾತ್ರವೇ ಬಳಸಿಕೊಳ್ಳಲಾಗುತ್ತಿದೆ ಎಂದು ಹೇಳಿದರು.
ಇದರಿಂದ ಸಮುದಾಯದ ಯುವಜನರು ಬೇರೆ ಬೇರೆ ಕಾಯಿಲೆಗಳಿಗೆ ತುತ್ತಾಗಿ ಜನಸಂಖ್ಯೆ ತೀವ್ರ ಗತಿಯಲ್ಲಿ ಇಳಿಮುಖವಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಜೊತೆಗೆ ಅಜಲು ಅಸ್ಪೃಶ್ಯತೆಯ ಕಾರಣದಿಂದಾಗಿ ಯಾವುದೇ ಸ್ವ-ಉದ್ಯೋಗಗಳನ್ನು ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. ಸರ್ಕಾರದ ಬೇರೆ ಬೇರೆ ಇಲಾಖೆಗಳ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಿದರು ಇತರ ಬಲಾಡ್ಯ ಬುಡಕಟ್ಟು ಸಮುದಾಯಗಳ ಕಾರಣಗಳಿಂದಾಗಿ ನಮ್ಮ ಯುವಜನರಿಗೆ ಉದ್ಯೋಗ ಸಿಗುತ್ತಿಲ್ಲ. ಆದ್ದರಿಂದ ಸರ್ಕಾರ ಪಿ.ವಿ.ಟೀ.ಜಿ. ಸಮುದಾಯಕ್ಕೆ ವಿಶೇಷವಾಗಿ ನೇರ ನೇಮಕಾತಿ ಮೂಲಕ ಸರ್ಕಾರಿ ಉದ್ಯೋಗಗಳನ್ನು ನೀಡಬೇಕಾಗಿ ಒತ್ತಾಯಿಸುತ್ತಿದ್ದೇವೆ ಎಂದು ಹೇಳಿದರು.

ಕೊರಗ ಸಮುದಾಯದ ವಿಶೇಷ ಅಧ್ಯಯನ ಮಾಡಿರುವ ಡಾ. ಮಹಮ್ಮದ್ ಫೀರ್ ವರದಿಯಲ್ಲಿ ಕೊರಗರ ಇಂದಿನ ಪರಿಸ್ಥಿತಿಗೆ ಅವರು ಭೂಮಿಯನ್ನು ಹೊಂದದೇ ಇರುವುದು, ಕೃಷಿಕರಾಗದೇ ಇರುವುದು ಎಲ್ಲಾ ಸಮಸ್ಯೆಗಳಿಗೂ ಮೂಲಭೂತ ಕಾರವಾಗಿದೆ. ಆದ್ದರಿಂದ ಕೊರಗ ಸಮುದಾಯದ ಪ್ರತಿಯೊಂದು ಕುಟುಂಬಕ್ಕೆ 2.5 ಎಕ್ರೆ ಕೃಷಿ ಭೂಮಿ ನೀಡಿ ಮಾದರಿ ಕೃಷಿಕರಾಗುವಂತೆ ಪುನರ್ವಸತಿ ವ್ಯವಸ್ಥೆಗಳನ್ನು ಮಾಡುವುದು ಅತ್ಯಗತ್ಯ ಎಂದು ಶಿಫಾರಸ್ಸು ಮಾಡಿದೆ. ಸರ್ಕಾರ ಈ ವರದಿಯನ್ನು ಒಪ್ಪಿ 2003 ರಿಂದ ಕೊರಗ ಕುಟುಂಬಗಳಿಗೆ ಕರ್ನಾಟಕ ಭೂ ಕಂದಾಯ ನಿಯಮಗಳು 1964 ಕರ್ನಾಟಕದ ಭೂ ಮಂಜೂರಾತಿ ನಿಯಮಗಳು 1969 ನೋಟಿಪೀಕೇಶನ್ ಸಂಖ್ಯೆ : ಆರ್.ಡಿ. 25 2ಜಿ ಎ 68 ರ ದಿನಾಂಕ 03-11-1969 ಕರ್ನಾಟಕ ಸರ್ಕಾರದ ಗಜೆಟೆಡ್ ನೋಟಿಫೀಕೇಶನ್ 12-06-1969 ರಂತೆ ಪ್ರತೀ ಕುಟುಂಬಕ್ಕೂ ಕನಿಷ್ಠ 1 ಎಕರೆ ಭೂಮಿಯನ್ನು ಅಂದಿನ ಮಾನ್ಯ ಉಸ್ತುವಾರಿ ಸಚಿವರಾದ ಶ್ರೀ ಕೆ. ಜಯಪ್ರಕಾಶ್ ಹೆಗ್ಡೆ ಯವರು, ಅಂದಿನ ಜಿಲ್ಲಾಧಿಕಾರಿಗಳಾದ ಪೊನ್ನುರಾಜ್, ಉಮಶಂಕರ್, ಸತ್ಯನಾರಾಯಣ, ಐ.ಟಿ.ಡಿ.ಪಿ. ಅಧಿಕಾರಿಗಳಾದ ಉರ್ಮಿಳಾ ಇವರ ವಿಶೇಷ ಕಾಳಜಿಯಿಂದಾಗಿ ದಕ್ಷಿಣ ಕನ್ನಡ ಉಡುಪಿ ಜಿಲ್ಲೆಯಲ್ಲಿ ಒಂದಷ್ಟು ಕುಟುಂಬಗಳಿಗೆ ಹಕ್ಕುಪತ್ರ ವಿತರಿಸಿರುವುದು ಗಮನಾರ್ಹ. ಇನ್ನೂ ಉಳಿದ ಕುಟುಂಬಗಳಿಗೆ ಕೊರಗ ಅಭಿವೃದ್ಧಿ ಸಂಘಟನೆಯ ವತಿಯಿಂದ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ತಾಲೂಕುಗಳ ಸಮುದಾಯದ ಹಾಡಿಗಳಲ್ಲಿ ಕ್ಷೇತ್ರಕಾರ್ಯ ನಡೆಸಿ ಸಂಘಟನೆಯ ವಿಶೇಷ ಸಭೆಗಳು. ಗುಂಪು ಸಭೆಗಳನ್ನು ನಡೆಸಿ ಸುಮಾರು 800 ಭೂ ರಹಿತರನ್ನು ಗುರುತಿಸಿ ಫಲಾನುಭಾವಿಗಳ ದರ್ಖಾಸು ಅರ್ಜಿಯನ್ನು ಭರ್ತಿ ಮಾಡಿ ಆಯಾ ತಲೂಕಿನ ತಹಶೀಲ್ದಾರರಿಗೆ ಸಲ್ಲಿಸಿದ್ದಾರೆ, ಹಾಗೆಯೇ ದ.ಕ ಉಡುಪಿ ಜಿಲ್ಲೆಯ ಜಿಲ್ಲಾಧಿಕಾರಿಗಳು ಹಾಗೂ ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಿದ್ದಾರೆ. ಆದರೆ ದುರದೃಷ್ಟವಶಾತ್ ಕಳೆದ ಮೂರು ವರ್ಷಗಳಿಂದ ಜಿಲ್ಲಾಡಳಿತಗಳು ನಮ್ಮ ಅರ್ಜಿಯನ್ನು ಪರಿಗಣಿಸದೆ 1 ಎಕರೆ ಭೂಮಿಯನ್ನೂ ವಿತರಿಸದೆ ಭೂಮಿಯೇ ಇಲ್ಲ ಎಂದು ಉತ್ತರ ನೀಡಿ ಕೊರಗ ಸಮುದಾಯಕ್ಕೆ ನಿರಾಸೆ ಹಾಗೂ ಆತಂಕಕ್ಕೆ ಒಳಪಡಿಸಿದೆ. ಕೊರಗ ಸಮುದಾಯವು ಸನ್ಮಾನ್ಯ ಮುಖ್ಯಮಂತ್ರಿಗಳಾದ ತಮ್ಮ ಬಗ್ಗೆ ಅಪಾರವಾದ ಗೌರವ, ನಂಬಿಕೆ ಇರಿಸಿಕೊಂಡಿದ್ದೇವೆ. ಜನಸಾಮಾನ್ಯರು, ಬಡವರ ಪರ ಕಾಳಜಿಯುಳ್ಳ, ಸಾಮಾಜಿಕ ನ್ಯಾಯದ ಹರಿಕಾರರು ಆದ ತಾವು ನಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಮನವಿಯನ್ನು ಸಹ ಸಲ್ಲಿಸಿದ್ದಾರೆ.

ಬೇಡಿಕೆಗಳು.
- 2025-26 ನೇ ಸಾಲಿನ ಬಜೆಟ್‌ನಲ್ಲಿ ಕೊರಗರು ಒಳಗೊಂಡಂತೆ ರಾಜ್ಯ ಸಿವಿಲ್ ಸೇವೆಗಳಲ್ಲಿ ಪ್ರಾತಿನಿಧ್ಯ ನೀಡುವ ಸಲುವಾಗಿ ನೇರ ನೇಮಕಾತಿಯನ್ನು ಘೋಷಿಸಿರುವುದು ಸಂತಸ ತಂದಿದೆ. ಆದರೆ ಅಸ್ಪೃಶ್ಯರಿಂದಲೂ ಅಸ್ಪೃಶ್ಯತೆಗೆ ಒಳಗಾದ ಪ.ಜಾತಿ ಮತ್ತು ವ.ವರ್ಗದಲ್ಲಿ ಅತ್ಯಂತ ಹಿಂದುಳಿದಿರುವ ಕೊರಗ ಸಮುದಾಯವನ್ನು ಪ್ರಿಮಿಟಿವ್ ಆದಾರದಲ್ಲಿ ಈ ವಿಶೇಷ ನೇರ ನೇಮಕಾತಿಯನ್ನು ಅನುಷ್ಠಾನಗೊಳಿಸಬೇಕು. ಈ ಸಂದರ್ಭದಲ್ಲಿ ಮೊದಲ ಹಂತದಲ್ಲಿ ಅತೀ ಹೆಚ್ಚು ಅರ್ಹತೆ ಹೊಂದಿದ ಡಾಕ್ಟರೇಟ್, ವೈದ್ಯಕೀಯ, ಸ್ನಾತ್ತಕ್ಕೋತರ ಪದವಿ, ಪದವಿ, ತಾಂತ್ರಿಕ ನರ್ಸಿಂಗ್, ಡಿಪ್ಲೋಮಾ, ಡಿ.ಎಡ್. ಬಿ.ಎಡ್. ಕಾನೂನು ಪದವಿ, ಇಂಜಿನಿಯರಿಂಗ್ ಪದವಿ ಪಡೆದವರಿಗೆ ಮೊದಲ ಆದ್ಯತೆ ನೀಡುವುದು. ತದನಂತರ ಎಸ್.ಎಸ್.ಎಲ್.ಸಿ. ಪಿ.ಯು.ಸಿ. ಅರ್ಹತೆಗೆ ಅನುಗುನವಾಗಿ ಪರಿಗಣಿಸುವುದು.
- ಆದಿವಾಸಿ ಕೊರಗ ಸಮುದಾಯದ ಜನರು ಪಾರಂಪರಿಕ ಜ್ಞಾನದಿಂದ ತಮ್ಮ ಜೀವನ ಉಪಾಯಕ್ಕಾಗಿ ಕೌಶಲ್ಯ ಅಭಿವೃದ್ಧಿ ವಿವಿಧ ರೀತಿಯ ಕೃಷಿ. ಕುಲಕಸುಬು. ಸ್ವ- ಉದ್ಯೋಗಕ್ಕೆ ಪೂರಕವಾಗಿ ಅವಕಾಶಗಳಿಗೆ ಹೋಗುವ ಹಾಗೆ ತರಬೇತಿಗಳು ನೀಡುವುದು ಅನುಸರಣೆ ಮಾಡುವುದು. ತಯಾರಿಸಿದ ಉತ್ಪನ್ನಗಳಿಗೆ ಮಾರುಕಟ್ಟೆ ವ್ಯವಸ್ಥೆ ಒದಗಿಸುವುದು. ವಿಶೇಷವಾಗಿ ನಮ್ಮ ಕುಲಕಸುಬಿನ ಉತ್ಪನ್ನಗಳು ಬ್ರಾಂಡ್ ಉತ್ಪನ್ನವಾಗಿಸುವುದು. ಹಾಗೆಯೇ ನಾವು ಅದನ್ನು ಮಾರುಕಟ್ಟೆಗೆ ತೆಗೆದುಕೊಂಡು ಹೋಗುವ ಹಾಗೆ ಅಗಬೇಕು. ಇಂದಿನ ಮಾರುಕಟ್ಟೆಗೆ ಅನುಕೂಲ ಆಗುವ ಹಾಗೆ ಬೆಳಸಬೇಕು. ಇದಕ್ಕೋಸ್ಕರ 100 ಎಕ್ರೆ ಭೂಮಿ ಕನಿಷ್ಠ ರೂ. 100 ಕೋಟಿ ಬಂಡವಾಳವನ್ನು ಸದ್ರಿ ಬಜೆಟ್‌ನಲ್ಲಿ ಘೋಷಿಸಿದ ಅನುದಾನದಲ್ಲಿ ಕಾದಿರಿಸಿ ಅನುಷ್ಠಾನಗೊಳಿಸುವುದು,
- ಈಗಾಗಲೇ ಕೊರಗ ಸಮುದಾಯಕ್ಕೆ ಭೂಮಿ ನೀಡಲಾಗಿದ್ದು ಸರಿಯಾದ ಪುನರ್ ವಸತಿ ಕಾರ್ಯಕ್ರಮಗಳು ಮುಂದುವರಿದಿಲ್ಲ ಇದಕ್ಕಾಗಿ ಕೃಷಿ ಇಲಾಖೆಯ ಅಧಿಕಾರಿಗಳ ನೇತೃತ್ವದಲ್ಲಿ ಮಾವು, ಬಾಳೆ, ಮಲ್ಲಿಗೆ ಇತ್ಯಾದಿ. ಪಶುಸಂಗೋಪನೆ (ಊರಿನ ದನ, ನಾಟಿ ಕೋಳಿ ಸಾಕಣಿಕೆ) ಇಂಜಿನಿಯರಿಂಗ್ ಇಲಾಖೆಯನ್ನು ಒಳಗೊಂಡು ಬರಡು ಭೂಮಿ ಫಲವತ್ತತೆ ಹೆಚ್ಚಿಸುವ ಕಾರ್ಯಕ್ರಮ ಒಣ ಭೂಮಿ, ಕೃಷಿ ಪದ್ದತಿ, ಅರಣ್ಯ, ಸಾವಯವ ಕೃಷಿ. ಮಾದರಿಗಳು, ಜಲಾನಯನ, ಕಾರ್ಯಕ್ರಮಗಳು ಪುನರ್ವಸತಿ ಭೂಮಿಗೆ ಸಂಬಂಧಿಸಿ ಕ್ರಿಯಾ ಯೋಜನೆ ತಯಾರಿಸಿ ಕನಿಷ್ಠ ರೂ. 10 ಕೋಟಿ ಅನುದಾನ ಕಾದಿರಿಸುವುದು. ಕಾದಿರಿಸಿದ ಅನುದಾನವನ್ನು ಸದರಿ ಉದ್ದೇಶಕ್ಕಾಗಿ ಮಾತ್ರ ಬಳಸುವಂತೆ ಖಾತ್ರಿಗೊಳಿಸಬೇಕು. ಹಾಗೂ ಕಾಲ ಮಿತಿಯಲ್ಲಿ ಅನುಷ್ಠಾನ ಗೊಳಿಸುವುದಕ್ಕೆ ಕ್ರಮ ಜರಗಿಸಬೇಕು.

- ಈಗಾಗಲೇ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ನೀಡಿದ 800 ಭೂ ರಹಿತ ಅರ್ಜಿದಾರರಿಗೆ ಕನಿಷ್ಠ 1 ಎಕ್ರೆ ಕೃಷಿ ಭೂಮಿಯ ಹಕ್ಕುಪತ್ರ ಒದಗಿಸುವಂತೆ ಸೂಕ್ತ ಕ್ರಮ ಕೈಗೊಳ್ಳುವುದು.
- ಉಡುಪಿ ದಕ್ಷಿಣ ಕನ್ನಡ ಜಿಲ್ಲೆಯ ಆದಿವಾಸಿ ಬುಡಕಟ್ಟು ಕೊರಗ ಜನಾಂಗ ಜನಗಣತಿಯಿಂದ ಜನಗಣತಿಗೆ ಜನ ಸಂಖ್ಯೆ ಇಳಿಮುಖವಾಗುತ್ತಿರುವುದು ಹದಕೆಟ್ಟ ಆರೋಗ್ಯ, ರಕ್ತ ಹೀನತೆ ಮತ್ತು ಆಹಾರದ ಪರಿಸ್ಥಿತಿಗಳು ಮತ್ತು ನಮ್ಮ ಸಾಮಾಜಿಕ ಸಮಸ್ಯೆಗಳು ಕೂಡ ಕಾರಣವಾಗಿದೆ. ಅಂದರೆ ಕೇವಲ 20 ವರ್ಷಗಳಲ್ಲಿ ನಮ್ಮ ಜನ ಸಂಖ್ಯೆ 30% ರಷ್ಟು ಕಡಿಮೆಯಾಗಿದೆ. ಮಾನವ ಸಂಪನ್ಮೂಲ ಅಭಿವೃದ್ಧಿಯ ಸೂಚ್ಯಾಂಕಗಳ ಪರಿಗಣನೆಯಲ್ಲಿ ನಮ್ಮ ಜಿಲ್ಲೆ ರಾಜ್ಯದಲ್ಲೆ ಒಂದು ಮತ್ತು ಎರಡನೇ ಸ್ಥಾನದಲ್ಲಿ ಇದ್ದರೂ ಸಹ ಈ ಪ್ರಮಾಣದ ಜನಸಂಖ್ಯೆ ಇಳಿಮುಖವಾಗುತ್ತಿರುವುದಕ್ಕೆ ಕಾರಣ ನಿಗೂಡವಾಗಿದೆ. ಅದಕ್ಕಾಗಿ (1) ಈಗಾಗಲೇ ಆರೋಗ್ಯಕ್ಕೆ ಸಂಬಂಧಿಸಿ ಪ್ರಚಲಿತದಲ್ಲಿರುವ ಖಾಸಗಿ ಆಸ್ಪತ್ರೆಗಳ ಚಿಕಿತ್ಸೆಯ ಮರುಪಾವತಿ ಹಾಗೂ ಕುಡಿತ ಮತ್ತು ದುಷ್ಟ ನಿವಾರಣ ಕಾರ್ಯಕ್ರಮ ಆರೋಗ್ಯ ಮತ್ತು ತಪಾಸಣಾ ಶಿಬಿರಗಳು ಆರೋಗ್ಯಕ್ಕೆ ಸಂಬಂಧಿಸಿದ ಇತರ ಕಾರ್ಯಕ್ರಮಗಳು. ಈಗ ಇರುವಂತೆಯೇ ಮುಂದುವರಿಸುವುದು. (2) ಕೊರಗ ಸಮುದಾಯದ ಜನ ಸಂಖ್ಯೆ ಇಳಿಮುಖವಾಗುತ್ತಿರುವುದಕ್ಕೆ ನುರಿತ ವೈದ್ಯಕೀಯ ತಜ್ಞರನ್ನು ಮಾನವ ಶಾಸ್ತ್ರ, ಸಮಾಜ ಶಾಸ್ತ್ರ, ಮನೋಶಾಸ್ತ್ರಜ್ಞರನ್ನು ಒಳಗೊಂಡ ತಂಡ ಕೊರಗರ ಸಹಭಾಗಿತ್ವದಲ್ಲಿ ಸಮಗ್ರ ಆರೋಗ್ಯ ಅಧ್ಯಯನ ಮತ್ತು ಸಂಶೋಧನೆ ನಡೆಸುವುದು ಇದರ ನೇತೃತ್ವ ಜಿಲ್ಲಾ ವೈದ್ಯಾಧಿಕಾರಿಗಳು ಜಿಲ್ಲಾ ಆರೋಗ್ಯ ಅಧಿಕಾರಿಗಳು ನಿರ್ವಹಿಸುವುದು ಸಮುದಾಯದ ಜನ ಸಂಖ್ಯೆ ಏರುಗತಿಗೆ ಪಡೆಯುವವರೆಗೆ ಈ ಕಾರ್ಯಕ್ರಮ ಮುಂದುವರಿಸುವುದು. ಇದಕ್ಕಾಗಿ ವಾರ್ಷಿಕ ರೂ. 2 ಕೋಟಿ ಅನುದಾನ ಕಾದಿರಿಸಿ ನೀತಿಯಾಗಿ ಜಾರಿಯಾಗಬೇಕು
- ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಅದಿವಾಸಿ ಕೊರಗ ಸಮುದಾಯವು ಇಂದಿಗೂ ಕೂಡ ಅಸ್ಪೃಶ್ಯರಿಗೂ ಅಸ್ಪೃಶ್ಯರಾಗಿ ಮಾನಸಿಕ ಶೈಕ್ಷಣಿಕ ಅನಾರೋಗ್ಯ, ನಿರುದ್ಯೋಗ ಹಾಗೂ ಬಿಂಬಿಡದೇ ಕಾಡುತ್ತಿರುವ ಅಪೌಷ್ಟಿಕತೆ ರಕ್ತ ಹೀನತೆಯಿಂದ ಬಳಲುತ್ತಿರುವ ಅಳಿವಿನ ಅಂಚಿನಲ್ಲಿರುವ ಸಮುದಾಯವಾಗಿದೆ ಅದಕ್ಕಾಗಿ ಕರ್ನಾಟಕ ಸರ್ಕಾರದ ಮಾನ್ಯ ಮುಖ್ಯಮಂತ್ರಿಗಳು ಕೊರಗರಿಗೆ ಪ್ರತ್ಯೇಕ ನಿಗಮ ಮಂಡಳಿ ಸ್ಥಾಪಿಸಿ ಸಮಗ್ರ ಕೊರಗದ ಅಭಿವೃದ್ಧಿ ಪಡಿಸುವುದು ಇದಕ್ಕಾಗಿ ರೂ. 10 ಕೋಟಿ ಅನುದಾನ ಕಾದಿರಿಸುವುದು.

ಮುಖ್ಯಮಂತ್ರಿಯವರು ಈ ಎಲ್ಲಾ ಬೇಡಿಕೆಗಳನ್ನು ಈಡೇರಿಸಿ ಅಳಿವಿನಂಚಿನಲ್ಲಿರುವ ಕೊರಗ ಸಮುದಾಯವನ್ನು ಬಲಪಡಿಸುತ್ತಾರೆಯೇ ಎಂದು ಕಾದುನೊಡಬೇಕಾಗಿದೆ.
