ಆದಿವಾಸಿ ಬುಡಕಟ್ಟು ಸಮುದಾಯದ ಸಮಸ್ಯೆಗಳಿಗೆ ಸ್ಪಂದಿಸಬೇಕಿದ್ದ ಐಟಿಡಿಪಿ ಇಲಾಖೆಯು ಜನ ವಿರೋಧಿ ಧೋರಣೆಯಿಂದ ವರ್ತಿಸುತ್ತಿದೆ ಎಂದು ಆರೋಪಿಸಿ ಆದಿವಾಸಿ ಕೊರಗ ಸಮುದಾಯದ ಮುಖಂಡರು ಪ್ರತಿಭಟನೆ ನಡೆಸಿದ್ದಾರೆ.
ಮಂಗಳೂರಿನ ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆ (ಟಿಐಡಿಪಿ) ಕಚೇರಿಯ ಎದುರು ‘ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ’ ನೇತೃತ್ವದಲ್ಲಿ ಸಮುದಾಯದ ಮುಖಂಡರು ಪ್ರತಿಭಟನೆ ನಡೆಸಿದ್ದಾರೆ. “ವಸತಿ ಯೋಜನೆಯ ಫಲಾನುಭವಿಗಳಿಗೆ ಕಳೆದ 8 ತಿಂಗಳಿನಿಂದ ಸಹಾಯಧನದ ಕಂತು ಬಿಡುಗಡೆ ಮಾಡಿಲ್ಲ. ಕೇಳಿದರೂ ಸತಾಯಿಸುತ್ತಿದ್ದಾರೆ” ಎಂದು ಸಿಐಟಿಯು ಮುಖಂಡ ಸುನೀಲ್ ಕುಮಾರ್ ಬಜಾಲ್ ಆರೋಪಿಸಿದ್ದಾರೆ.
ಪ್ರತಿಭಟನೆಯಲ್ಲಿ ಮಾತನಾಡಿದರ ಡಿವೈಎಫ್‌ಯ ಜಿಲ್ಲಾಧ್ಯಕ್ಷ ಜಿ.ಕೆ.ಇಮ್ತಿಯಾಜ್, “ಅತ್ಯಂತ ಶೋಷಿತ ಸಮುದಾಯವಾದ ಕೊರಗರ ಬದುಕನ್ನು ಉತ್ತಮ ಪಡಿಸಲು ಸರ್ಕಾರಗಳು ಪ್ರಾಮಾಣಿಕ ಪ್ರಯತ್ನ ಮಾಡಬೆಕು. ಆದರೆ, ಸಮುದಾಯದ ಹಕ್ಕನ್ನು ಕಸಿಕೊಳ್ಳುತ್ತಿವೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಆದಿವಾಸಿ ಹಕ್ಕುಗಳ ಸಮಿತಿಯ ಯೋಗೀಶ್ ಜಪ್ಪಿನಮೊಗರು ಮಾತನಾಡಿ, “ಕೆರೆಕಾಡು ಪ್ರದೇಶದ ಕೊರಗ ಸಮುದಾಯದ ಮನೆ ನಿರ್ಮಾಣಕ್ಕೆ ಕಳೆದ 14 ತಿಂಗಳಿನಿಂದ ಹಣ ಬಿಡುಗಡೆ ಮಾಡಿಲ್ಲ. ವಿನಃಕಾರಣ ವಿಳಂಬ ಮಾಡಲಾಗುತ್ತಿದೆ. ಇದು ಆದಿವಾಸಿ ವಿರೋಧಿ ಮನೋಭಾವವನ್ನು ತಳೆದಿರುವ ಐಟಿಡಿಪಿ ಅಧಿಕಾರಿಗಳ ಧೋರಣೆಯಾಗಿದೆ” ಎಂದು ಕಿಡಿಕಾರಿದ್ದಾರೆ.
ಪ್ರತಿಭಟನೆಯಲ್ಲಿ ಆದಿವಾಸಿ ಹಕ್ಕುಗಳ ಸಮಿತಿಯ ಕರಿಯ ಕೆ, ಕೃಷ್ಣ ಇನ್ನ, ರಶ್ಮಿ ವಾಮಂಜೂರು, ತುಳಸಿ ಪಡುಬಿದ್ರಿ, ಕಾರ್ಮಿಕ ಮುಖಂಡ ಅಶೋಕ್ ಶ್ರೀಯಾನ್, ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ನಾಯಕರಾದ ಶೇಖರ್ ವಾಮಂಜೂರು, ಕೆರೆಕಾಡು ಘಟಕದ ಮುಖಂಡರಾದ ಅಭಿಜಿತ್, ಶಶಿಧರ್, ಕೇಶವ, ಮನೋಹರ್, ರಮೇಶ್ ಕೆರೆಕಾಡು ರವೀಂದ್ರ, ಕಿಶನ್, ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ಮಂಗಳೂರಿನ ಉಪಾಧ್ಯಕ್ಷರಾದ ಪ್ರಶಾಂತ್ ಕಂಕನಾಡಿ,ನವೀನ್ ಕಂಕನಾಡಿ, ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ಮಹಿಳಾ ಮುಖಂಡರಾದ ನಿಶ್ಚಿತ, ಮಂಜುಳಾ, ಪೂರ್ಣಿಮಾ, ಶ್ವೇತ, ಸುಶೀಲ ಮುಂತಾದವರು ಇದ್ದರು.