ಕೊರಟಗೆರೆ ತಾಲೂಕಿನ ಚಿಂಪುಗಾನಹಳ್ಳಿಯ ಮುತ್ಯಾಲಮ್ಮ ದೇವಸ್ಥಾನದ ಬಳಿಯಿಂದ ಸಿದ್ದರಬೆಟ್ಟದ ರಸ್ತೆ ತನಕ ಸುಮಾರು 30 ಕಿ.ಮೀ. ದೂರ ವ್ಯಾಪ್ತಿಯಲ್ಲಿ 17 ಸ್ಥಳಗಳಲ್ಲಿ ಮಹಿಳೆಯ ದೇಹದ ತುಂಡುಗಳನ್ನು ಎಸೆದಿರುವ ಪ್ರಕರಣಕ್ಕೆ ಹೊಸ ತಿರುವು ದೊರಕಿದೆ.
ಘಟನೆಗೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಮೃತ ಮಹಿಳೆ ಬೆಳ್ಳಾವಿ ಮೂಲದ ಲಕ್ಷ್ಮಿದೇವಮ್ಮ (42) ಹತ್ಯೆಗೀಡಾದ ಮಹಿಳೆ ಎಂದು ಗುರುತಿಸಲಾಗಿದೆ. ಈಕೆಯ ಅಳಿಯ, ವೃತ್ತಿಯಲ್ಲಿ ದಂತ ವೈದ್ಯನಾಗಿರುವ ರಾಮಚಂದ್ರಯ್ಯ ಮತ್ತು ಸತೀಶ್, ಕಿರಣ್ ಎಂಬವರು ಹತ್ಯೆ ಪ್ರಕರಣದಲ್ಲಿ ಬಂಧಿತ ಆರೋಪಿಗಳಾಗಿದ್ದಾರೆ.
ತುಮಕೂರು ನಗರದಲ್ಲಿ ದಂತ ಕ್ಲಿನಿಕ್ ಇಟ್ಟು ಕೊಂಡಿದ್ದ ಆರೋಪಿ ಡಾ. ರಾಮಚಂದ್ರಯ್ಯ ಕುವೆಂಪು ನಗರದಲ್ಲಿ ವಾಸವಾಗಿದ್ದ ಎಂದು ತಿಳಿದು ಬಂದಿದ್ದು, ಅತ್ತೆಯ ಚಟುವಟಿಕೆಗಳ ಬಗ್ಗೆ ಬೇಸತ್ತ ಅಳಿಯ ಅಸಮಾದಾನಗೊಂಡು ಈ ದುಷ್ಕೃತ್ಯ ಮಾಡಿದ್ದಾನೆ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದ್ದು, ತನ್ನ ಸ್ನೇಹಿತರ ಜೊತೆಗೆ ಸೇರಿ ಈ ಕೃತ್ಯ ಎಸಗಿದ್ದಾನೆ ಎಂದು ಹೇಳಲಾಗಿದೆ, ಸದ್ಯ ಕೊರಟಗೆರೆ ಠಾಣೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಮೊದಲ ಹೆಂಡತಿಯು ವಿಚ್ಚೇದನ ಪಡೆಯುವ ಹಂತದಲ್ಲಿದಾಗ 2ನೇ ಮದುವೆಯಾಗಿದ್ದ ಡಾಕ್ಟರ್, 2ನೇ ಹೆಂಡತಿಯ ತಾಯಿಯನ್ನೇ ಮರ್ಡರ್ ಮಾಡಿದ್ದಾನೆ. ಈ ಕೃತ್ಯಕ್ಕೆ ಬಳಸಲಾಗಿದ್ದ ಕಾರ್ ನಿಂದಲ್ಲೇ ಪತ್ತೆಯಾದರೂ ಆರೋಪಿಗಳು, ಸ್ನೇಹಿತ ಸತೀಶ್ ನ ಕಾರ್ ನಲ್ಲಿಯೇ ಅತ್ತೆಯ ತುಂಡು ತುಂಡಾದ ಶರೀರದ ಭಾಗಗಳನ್ನು ದಿಕ್ಕಾಪಾಲು ಮಾಡಿ ಎಸೆದಿದ್ದ ಆರೋಪಿ ಡಾ. ರಾಮಚಂದ್ರಯ್ಯನನ್ನು ಬಂಧಿಸಲಾಗಿದೆ.
ಮೂರು ದಿನಗಳ ಕಾಲ ಮೃತದೇಹವನ್ನು ತಮ್ಮ ಬಳಿಯೇ ಇಟ್ಟುಕೊಂಡು ಆ.6ರಂದು ದೇಹವನ್ನು ತುಂಡು ಮಾಡಿ ಎಸೆದಿದ್ದರು. ಬಳಿಕ ರಾಮಚಂದ್ರ ಧರ್ಮಸ್ಥಳಕ್ಕೆ ತೆರಳಿದ್ದ. ಆತನ ಮೇಲೆ ಅನುಮಾನಗೊಂಡು ಪೊಲೀಸರು ವಿಚಾರಣೆ ನಡೆಸಿದ ಬಳಿಕ ಆರೋಪಿಗಳು ಸಿಕ್ಕಿ ಬಿದ್ದಿದ್ದಾರೆ.