ನಿವೃತ್ತ ನ್ಯಾಯಮೂರ್ತಿ ನಾಗಮೋಹನ್‌ದಾಸ್ ಅವರು ನೀಡಿರುವ ವೈಜ್ಞಾನಿಕ ದತ್ತಾಂಶವನ್ನು ಆಧರಿಸಿ, ರಾಜ್ಯ ಸರ್ಕಾರ ಆ.16 ರಂದು ನಡೆಯಲಿರುವ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಒಳ ಮೀಸಲಾತಿಯನ್ನು ಜಾರಿಗೊಳಿಸಬೇಕು ಎಂದು ಡಿಎಸ್‌ಎಸ್ ಸಂಚಾಲಕ ಡಿ.ಎಲ್ ಶಿವರಾಮ್ ಒತ್ತಾಯಿಸಿದರು.
ಕೊರಟಗೆರೆ ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಆಯೋಜಿಸಿದ್ದ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಮೂರು ದಶಕಗಳ ನಿರಂತರ ಹೋರಾಟದ ಫಲವಾಗಿ ಸರ್ಕಾರವು ಆಯೋಗವನ್ನು ರಚಿಸಿ ವರದಿಯನ್ನು ಸ್ವೀಕರಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇನ್ನು ವಿಳಂಬ ಮಾಡದೆ, ಸಂಪುಟ ಸಭೆಯಲ್ಲಿ ಒಳ ಮೀಸಲಾತಿ ಜಾರಿಗೊಳಿಸುವ ಮೂಲಕ ಶೋಷಿತ ಸಮುದಾಯಗಳಿಗೆ ನ್ಯಾಯ ಒದಗಿಸಬೇಕು ಎಂದು ಹೇಳಿದರು.
ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಚಿಕ್ಕರಂಗಯ್ಯ ಮಾತನಾಡಿ, ಕರ್ನಾಟಕ ರಾಜ್ಯದಲ್ಲಿ ಒಳ ಮೀಸಲಾತಿ ವರ್ಗೀಕರಣದ ಬಗ್ಗೆ ಈಗಾಗಲೇ ಅನೇಕ ಕೂಗುಗಳು ಕೇಳಿ ಬರುತ್ತಿವೆ. ನಾಗಮೋಹನ್‌ದಾಸ್‌ರವರ ವರದಿಯ ಆಧಾರದ ಮೇಲೆ ಒಳಮೀಸಲಾತಿಯನ್ನು ಅಂಗೀಕರಿಸಬೇಕಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು, ಸಚಿವರಾದ ಡಾ.ಜಿ.ಪರಮೇಶ್ವರ್, ಮಹದೇವಪ್ಪನವರು ಒಳಮೀಸಲಾತಿಯನ್ನು ಸಚಿವ ಸಂಪುಟ ಸಭೆಯಲ್ಲಿ ಜಾರಿಗೊಳಿಸುವುದರ ಬಗ್ಗೆ ತೀರ್ಮಾನಿಸಬೇಕಿದೆ ಎಂದು ಹೇಳಿದರು.
ಮೀಸಲಾತಿ ಜಾರಿಗೆ ಜನಾಂದೋಲನ, ಪ್ರತಿಭಟನೆ, ತಮಟೆ ಚಳುವಳಿಯ ಮೂಲಕ ಹಲವು ಹೋರಾಟಗಳನ್ನು ಮಾಡಿದ್ದೇವೆ. ಬಲಗೈ ಜನಾಂಗದ ಸಹೋದರರು ಮೈಸೂರಿನ ಉರಿಲಿಂಗಿ ಪೆದ್ದ ಮಠದ ಜ್ಞಾನಪ್ರಕಾಶ್ ಸ್ವಾಮೀಜಿ ಮುಖಾಂತರ ಒಳಮೀಸಲಾತಿ ಜಾರಿಗೆ ವಿವಿಧಾತ್ಮಕ ಹೇಳಿಕೆ ನೀಡಿದ್ದಾರೆ, ಇದು ತರವಲ್ಲ. ದತ್ತಾಂಶಗಳ ವರದಿ ಆಧಾರದ ಮೇಲೆ ಮೀಸಲಾತಿ ಜಾರಿಗೊಳಿಸದಿದ್ದರೆ ಮುಂದಿನ ದಿನಗಳಲ್ಲಿ ರಾಜ್ಯಾದ್ಯಾಂತ ಉಗ್ರ ಹೋರಾಟವನ್ನು ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.
ದಲಿತ ಮುಖಂಡ ದಾಡಿ ವೆಂಕಟೇಶ್ ಮಾತನಾಡಿ, ಆಯಾ ರಾಜ್ಯ ಸರ್ಕಾರ ಪ.ಜಾತಿಯ ಒಳಮೀಸಲಾತಿ ಜಾರಿಗೊಳಿಸುವಂತೆ ಸುಪ್ರಿಂಕೋರ್ಟ್ ಆದೇಶಿಸಿದೆ. ಹೊರ ರಾಜ್ಯಗಳಲ್ಲಿ ಈಗಾಗಲೇ ಒಳ ಮೀಸಲಾತಿ ಜಾರಿಗೆ ಬಂದಿದೆ. ಚುನಾವಣೆಯ ಪ್ರಣಾಳಿಕೆಯಲ್ಲಿ ಅಂಶಗಳಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದು ಎರಡು ವರ್ಷ ಕಳೆದರೂ ಒಳ ಮೀಸಲಾತಿ ಜಾರಿಗೆ ಬಂದಿಲ್ಲಾ ಎಂದು ಆರೋಪ ಮಾಡಿದರು.
ರಾಜ್ಯ ಸರ್ಕಾರ ರಚಿಸಿದ ಆಯೋಗದ ವರದಿಯಲ್ಲಿ ಮಾದಿಗ ಸಮುದಾಯವು ೧೮ಜಾತಿಗಳ ಸಂಖೈಯಲ್ಲಿ ಬಹುಸಂಖ್ಯಾತರಾಗಿದ್ದಾರೆ. ರಾಜ್ಯದಲ್ಲಿ ಮಾದಿಗ ಜನಾಂಗದ ಜನಸಂಖೈ ೨೭ಲಕ್ಷ ಇದೆ. ಛಲವಾದಿ ಜನಸಂಖೈ ಕಡಿಮೆ ಇರುವ ಕಾರಣ ಬಲಗೈ ಸಮುದಾಯದ ಜನರು ಸಹಿಸದೆ ಮೈಸೂರಿನ ಪೆದ್ದ ಮಠದ ಶ್ರೀಗಳ ಕಡೆಯಿಂದ ‘‘ಮಾದಿಗರು ಅಂಬೇಡ್ಕರ್ ವಾದಿಗಳಲ್ಲ’’ ಎಂಬ ಮಾತನ್ನು ಹೇಳಿಸುತ್ತಿದ್ದಾರೆ. ನಾಗಮೋಹನ್‌ದಾಸ್ ವರದಿಯ ಪ್ರತಿಯನ್ನು ಸುಟ್ಟು ಒಳಮೀಸಲಾತಿ ಜಾರಿಗೆ ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ಆಕ್ರೋಶ ಹೊರ ಹಾಕಿದರು.
ಜಟ್ಟಿಅಗ್ರಹಾರ ನಾಗರಾಜು ಮಾತನಾಡಿ 16ನೇ ತಾರೀಖು ಒಳಮೀಸಲಾತಿ ಜಾರಿಯಾಗುವ ಸಲುವಾಗಿ ಈ ಪತ್ರಿಕಾಗೋಷ್ಠಿಯ ಉದ್ದೇಶವಾಗಿದೆ. 40ವರ್ಷಗಳ ಕಾಲ ಸತತ ಹೋರಾಟ ದಿಂದ ಒಳಮೀಸಲಾತಿಗೆ ಜಯಸಂದಿದೆ, ತಮ್ಮ ಸಮುದಾಯದ ಓಲೈಕೆ ಉರಿಲಿಂಗ ಪೆದ್ದ ಮಠದ ಜ್ಞಾನ ಪ್ರಕಾಶ್ ಸ್ವಾಮಿಯವರ ವಿವಾದಾತ್ಮಕ ಹೇಳಿಕೆ ಸರಿಯಲ್ಲ ತಕ್ಷಣ ಇದನ್ನು ಹಿಂಪಡೆಯಬೇಕು, ಮಾನ್ಯ ಡಾ.ಜಿ ಪರಮೇಶ್ವರ್ ರವರು ನಮ್ಮ ಮಾದಿಗ ಸಮಾಜದ ಮತಗಳನ್ನು ನಿಮಗೆ ಹಾಕಿ ತಮ್ಮಗೆ ಸಹಕರಿಸಿದ್ದಾರೆ, ಇದರೆ ಈ ಒಳಮೀಸಲಾತಿ ಜಾರಿ ಮಾಡಬೇಕು. ಮುಂದಿನ ದಿನಗಳಲ್ಲಿ ಇನ್ನೂ ಉನ್ನತ ಹುದ್ದೆಗೆ ನಾವು ಸದಾ ನಮ್ಮ ಸಮುದಾಯ ನಿಮ್ಮ ಜೊತೆಗಿದೆ, ರಾಜ್ಯದ ಮುಖ್ಯಮಂತ್ರಿ ಸ್ಥಾನ ಖಂಡಿತ ಒಲಿಯಲಿದೆ. ನಮ್ಮ ಸಮುದಾಯದ ಯಾವುದೇ ನಿರೀಕ್ಷೆ ಇಲ್ಲದೇ ನಿಮ್ಮ ಜೊತೆಗಿದ್ದು, ನಿಮ್ಮೆಲ್ಲ ಗೆಲುವಿಗೆ ಸಹಕಾರ ನೀಡಿದ್ದಾರೆ, ನಮ್ಮ ಸಮಾಜದ ನಾಯಕರಿಗೆ ಯಾವುದೇ ಸ್ಥಾನಮಾನ ಕಲ್ಪಿಸಿಲ್ಲ ಆದರೂ ನಾವು ಸದಾ ನಿಮ್ಮೊಟ್ಟಿಗೆ ಇದ್ದೇವೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ದೊಡ್ಡಯ್ಯ ವಿಭಾಗೀಯ ಸಂಚಾಲಕ, ಜಿಲ್ಲಾ ಸಂಘಟನಾ ಸಂಚಾಲಕ ಗಂಗಣ್ಣ, ಮುಖಂಡರಾದ ಮಂಜುನಾಥ್, ಸಿದ್ದಗಂಗಯ್ಯ, ವೆಂಕಟಸ್ವಾಮಿ, ಹರೀಶ್‌ಬಾಬು, ನರಸಿಂಹಮೂರ್ತಿ, ಶಿವರಾಜು, ವೀರಕ್ಯಾತರಾಯ್ಯ, ಸುಬ್ಬಣ್ಣ, ದೊಡ್ಡಯ್ಯ, ನಾಗರಾಜು, ಭೀಮರಾಜು, ಲಕ್ಷ್ಮೀನರಸಯ್ಯ ಸೇರಿದಂತೆ ಇತರರು ಇದ್ದರು.