ಗೊಬ್ಬರ ತುಂಬಿದ್ದ ಲಾರಿ ಬ್ರೇಕ್ ಫೇಲ್ಯೂರ್ ಆಗಿ ಬೇಕರಿಗೆ ನುಗ್ಗಿದ ಪರಿಣಾಮ ಮೂವರು ಸ್ಥಳದಲ್ಲೇ ಸಾವನ್ನಪ್ಪಿರುವ ದುರಂತ ಘಟನೆ ಕೊರಟಗೆರೆ ತಾಲೂಕಿನ ಕೋಳಾಲ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ತಾಲೂಕಿನ ಕೋಳಾಲ ಗ್ರಾಮದಲ್ಲಿ ಮಂಗಳವಾರ 12ಗಂಟೆ ಸುಮಾರಿಗೆ ಕೋಳಾಲ ಪೋಲಿಸ್ ಠಾಣೆ ರಸ್ತೆ ಕಡೆಯಿಂದ ಬಂದ ಗೊಬ್ಬರದ ಲಾರಿಯ ಬ್ರೇಕ್ ಫೇಲ್ಯೂರ್ ಆಗಿದ್ದು, ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ಭೈರವೇಶ್ವರ ಕ್ಯಾಂಡಿಮೆಂಟ್ಸ್‌ಗೆ ನುಗ್ಗಿದ್ದು, ಈ ದುರಂತದಲ್ಲಿ ಬೇಕರಿ ಮುಂದೆಯಿದ್ದ ರಂಗಶಾಮಯ್ಯ(70), ಬೈಲಪ್ಪ(65), ಜಯಣ್ಣ(55) ಎಂಬುವವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ಜಿ.ಪಂ ಮಾಜಿ ಸದಸ್ಯೆ ಸಿದ್ದಗಂಗಮ್ಮ ಪ್ರಜ್ಞಾಹೀನಗೊಂಡಿದ್ದು, ಉಳಿದ ಇಬ್ಬರಿಗೆ ಗಂಭೀರ ಗಾಯಗಳಾಗಿವೆ. ಹೆಚ್ಚಿನ ಚಿಕಿತ್ಸೆಗೆ ತುಮಕೂರಿನ ಸಿದ್ದಗಂಗಾ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ತಿಳಿದುಬಂದಿದೆ.
ಬೇಕರಿ ಮಾಲೀಕ ಈ ದುರಂತದಿಂದ ಪಾರಾಗಿದ್ದು, ಹಿಂದೆಯೂ ಕೂಡ ಇದೇ ರೀತಿ ಘಟನೆ ನಡೆದ ಉದಾಹರಣೆ ಇದೆ. ರೋಡ್ ಹಂಪ್ ಇಲ್ಲದ ಕಾರಣ ಇಂತಹ ಘಟನೆಗಳು ಮರುಕಳಿಸುತ್ತಿವೆಯೆಂದು ಸ್ಥಳೀಯರು, ಸಾರ್ವಜನಿಕರು ಸಂಬಂಧಪಟ್ಟ ಅಧಿಕಾರಿಗಳ ವಿರುದ್ದ ಆಕ್ರೋಶ ಹೊರ ಹಾಕಿದ್ದಾರೆ.
ಈ ಸುದ್ದಿ ಓದಿದ್ದೀರಾ? ಮುಳಬಾಗಿಲು | ವಿದ್ಯಾರ್ಥಿಗೆ ಬೆಲ್ಟ್‌ನಿಂದ ಹಿಗ್ಗಾಮುಗ್ಗಾ ಥಳಿಸಿದ ವಾರ್ಡನ್: ಯಾರಿಗೂ ಹೇಳದಂತೆ ಬೆದರಿಕೆ
ಘಟನಾ ಸ್ಥಳಕ್ಕೆ ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ವೆಂಕಟ್, ಸಿಪಿಐ ಅನಿಲ್, ಕೋಳಾಲ ಪಿಎಸ್‌ಐ ಅಭಿಷೇಕ್, ಯೋಗೀಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕೋಳಾಲ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದುರಂತದ ಬಗ್ಗೆ ಗೃಹ ಸಚಿವ ಡಾ.ಜಿ ಪರಮೇಶ್ವರ ಅಧಿಕಾರಿಗಳಿಂದ ಮಾಹಿತಿ ಪಡೆದು ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿ, ಮೃತ ವ್ಯಕ್ತಿಗಳ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಸಂತಾಪ ಸೂಚಿಸಿದ್ದಾರೆ.