ಇತ್ತೀಚೆಗೆ ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದಲ್ಲಿ ನಡೆದ ಕೃಷಿ ಮೇಳದಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಹೊಸಹಳ್ಳಿ ಗ್ರಾಮದ ರೈತ ಡಿ.ಕೆ ಚಂದ್ರಪ್ಪ ಅವರಿಗೆ ‘ಕೃಷಿ ಸಾಧಕ’ ಪ್ರಶಸ್ತಿ ನೀಡಲಾಗಿದೆ. ಬರೋಬ್ಬರಿ 26 ಮಂದಿ ಇರುವ ಕೂಡು ಕುಟುಂಬವು ಕೃಷಿಯಲ್ಲಿ ಉತ್ತಮ ಸಾಧನೆ ಮಾಡಿದ್ದು, ಕುಟುಂಬವನ್ನು ಮುನ್ನಡೆಸುತ್ತಿರುವ ಚಂದ್ರಪ್ಪ ಅವರು ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಹೊಸಹಳ್ಳಿ ಗ್ರಾಮದ ಚಂದ್ರಪ್ಪ ಅವರ ಕುಟುಂಬಕ್ಕೆ 28 ಎಕರೆ ಕೃಷಿ ಜಮೀನು ಇದೆ. ಇಡೀ ಕುಟುಂಬ ಕೃಷಿಯಲ್ಲಿ ತೊಡಗಿಕೊಂಡಿದ್ದು, ಉತ್ತಮವಾಗಿ ಕೃಷಿ ಮಾಡುತ್ತಿದೆ. ಅದೇ ರೀತಿ ಒಳ್ಳೆಯ ಆದಾಯವನ್ನೂ ಗಳಿಸುತ್ತಿದೆ. ತಮ್ಮ ಜಮೀನಿನಲ್ಲಿ ದ್ರಾಕ್ಷಿ, ದಾಳಿಂಬೆ, ರಾಗಿ, ದಪ್ಪ ಮೆಣಸಿನಕಾಯಿ, ಜೋಳ ಸೇರಿದಂತೆ ನಾನಾ ಬೆಳೆಗಳನ್ನು ಬೆಳೆದಿದ್ದಾರೆ. ಮಾತ್ರವಲ್ಲದೆ, ಹೈನುಗಾರಿಕೆ, ಕೋಳಿ, ಕುರಿ ಸಾಕಾಣಿಕೆಯನ್ನೂ ಚಂದ್ರಪ್ಪ ನಡೆಸುತ್ತಿದ್ದಾರೆ.
“ನಮ್ಮ ಮನೆಯಲ್ಲಿ 26 ಮಂದಿ ಇದ್ದೇವೆ. ಜೊತೆಗೆ, ಕೆಲಸಕ್ಕೂ ಹಲವಾರು ಮಂದಿ ಕೂಲಿ ಕಾರ್ಮಿಕರು ಬರುತ್ತಾರೆ. ವಾತಾವರಣಕ್ಕೆ ತಕ್ಕಂತೆ ಬೆಳೆಗಳನ್ನು ಬೆಳೆಯುತ್ತೇವೆ. ನಾನಾ ಸಂದರ್ಭಗಳಲ್ಲಿ ವಿವಿಧ ಬೆಳೆಗಳನ್ನು ಬೆಳೆಯುತ್ತೇವೆ” ಎಂದು ಚಂದ್ರಪ್ಪ ಹೇಳಿರುವುದಾಗಿ ‘ಪಿವಿ’ ವರದಿ ಮಾಡಿದೆ.
“ಜಿಲ್ಲೆಯಲ್ಲಿ ನೀರಿನ ಅಭಾವ ಹೆಚ್ಚಾಗಿದೆ. ನೀರು ಕೃಷಿಗೆ ಸಾವಾಲಾಗಿದೆ. ನಮ್ಮ ಜಮೀನಿನಲ್ಲಿ ಇದೂವರೆಗೂ 66 ಕೊಳವೆ ಬಾವಿಗಳನ್ನು ಕೊರೆಸಿದ್ದೇವೆ. ಹನಿ ನೀರಾವರಿಯನ್ನು ಅಳವಡಿಸಿಕೊಂಡಿದ್ದೇವೆ” ಎಂದು ಅವರು ತಿಳಿಸಿದ್ದಾರೆ.