ರಾಜ್ಯದ ರೈತರಿಗೆ ಬರ ಪರಿಹಾರ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಷ್ಟ್ರ ಸಮಿತಿ (ಕೆಆರ್‌ಎಸ್) ಪಕ್ಷದ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ವಿಜಯಪುರ ಜಿಲ್ಲಾಧಿಕಾರಿ ಕಚೇರಿಗೆ ಹಕ್ಕೊತ್ತಾಯ ಪತ್ರ ಸಲ್ಲಿಸಿದ್ದಾರೆ.
ಹಕ್ಕೊತ್ತಾಯ ಸಲ್ಲಿಸಿ ಮಾತನಾಡಿದ ಪಕ್ಷ ಸಂಘಟನಾ ಕಾರ್ಯದರ್ಶಿ ಶಿವಾನಂದ ಯಡಹಳ್ಳಿ, “ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳು ಬರಗಾಲದಿಂದ ತತ್ತರಿಸಿ ಹೋಗಿವೆ. ರೈತರಿಗೆ ಉಳುಮೆ ಮಾಡಲು ಭೂಮಿ ಇದ್ದರೂ ದುಡಿಮೆ ಇಲ್ಲದೆ ಅನ್ನಕ್ಕಾಗಿ ಹೊರ ರಾಜ್ಯಕ್ಕೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಬರಗಾಲ ಘೋಷಣೆ ಮಾಡಿ ರಾಜ್ಯ ಸರ್ಕಾರ ನಾಲ್ಕು ತಿಂಗಳು ಕಳೆಯುತ್ತಾ ಬಂದರು ಇದೂವರೆಗೂ ಪರಿಹಾರ ಬಿಡುಗಡೆಯಾಗಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಬಿತ್ತನೆ ಬೀಜ, ಗೊಬ್ಬರ, ಉಳುಮೆಗಾಗಿ ಮಾಡಿದ ಸಾಲವನ್ನು ತೀರಿಸಲಾಗದೆ ಅನ್ನದಾತರು ಪರಿತಪಿಸುತ್ತಿದ್ದಾರೆ. ರಾಜ್ಯ ಸರ್ಕಾರ ಕೂಡಲೇ ಅನುದಾನವನ್ನು ಬಿಡುಗಡೆ ಮಾಡಿ ರೈತರ ಮೊಗದಲ್ಲಿ ಮಂದಹಾಸ ಮೂಡುವಂತೆ ಮಾಡಬೇಕು. ಬರಗಾಲಕ್ಕಾಗಿ ಈಗಾಗಲೇ ರಾಜ್ಯ ಸರ್ಕಾರ ಘೋಷಣೆ ಮಾಡಿರುವ ಅನುದಾನ ತುಂಬಾ ಕಡಿಮೆಯಾಗಿದ್ದು, ರೈತರು ಮಾಡಿರುವ ಸಾಲದ ಬಡ್ಡಿ ಕಟ್ಟಲು ಸಾಕಾಗದು. ಹೀಗಾಗಿ, ಪರಿಹಾರದ ಮೊತ್ತವನ್ನು ಹೆಚ್ಚಿಸಬೇಕು” ಎಂದು ಒತ್ತಾಯಿಸಿದ್ದಾರೆ.
ಈ ವೇಳೆ, ರಾಕೇಶ ಇಂಗಳಗಿ, ವಿಕ್ರಮ ವಾಗಮೋರೆ, ಹಮೀದ್ ಇನಾಮದಾರ, ಪ್ರವೀಣ ಕನಸೆ, ಕಾಂತುಗೌಡ ಬೆಂಡವಾಡ, ಸುನೀಲ ತಳವಾರ, ಸುರೇಂದ್ರ ಕುನಸಲೇ, ಗಣಪತಿ ರಾಠೋಡ, ರಾಘವೇಂದ್ರ ಚಲವಾದಿ, ಮೈಬೂಬ ತಾಂಬೋಳಿ, ನಬಿರಸುಲ ಹುಣಶ್ಯಾಳ, ಭೀಮಾಶಂಕರ ಕಾಂಬಳೆ, ಪುಂಡಲಿಕ ಬಿರಾದಾರ, ನಬೀರಸೂಲ್ ಜಮಾದಾರ ಮತ್ತಿತರರು ಇದ್ದರು.