ಡಿಪೋ ಮ್ಯಾನೇಜರ್ ಕಿರುಕುಳ ನೀಡುತ್ತಿದ್ದಾರೆಂದು ಆರೋಪಿಸಿ ಕೆಎಸ್‌ಆರ್‌ಟಿಸಿ ಸಿಬ್ಬಂದಿಯೊಬ್ಬರು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಕೊಡಗು ಜಿಲ್ಲೆಯಲ್ಲಿ ನಡೆದಿದೆ.
ಮಡಿಕೇರಿ ತಾಲೂಕಿನ ಹೆಬ್ಬಾಲೆ ಗ್ರಾಮದ ನಿವಾಸಿ ಅಭಿಷೇಕ್ ಆತ್ಮಹತ್ಯೆಗೆ ಯತ್ನಿಸಿರುವ ಉದ್ಯೋಗಿ. ಅವರು ಸಾರಿಗೆ ಇಲಾಖೆಯ ಜಿಲ್ಲಾ ವಿಭಾಗಾಧಿಕಾರಿ ಅವರಿಗೆ ಪತ್ರ ಬರೆದಿದ್ದು, ಬಳಿಕ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ಪತ್ರದಲ್ಲಿ ಮಡಿಕೇರಿ ಡಿಪೇ ಮ್ಯಾನೇಜರ್ ಗೀತಾ ಅವರು ತಮಗೆ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.
ಅಭಿಷೇಕ್ ಅವರು ಮಡಿಕೇರಿ ಡಿಪೋದಲ್ಲಿ ಕಿರಿಯ ಸಹಾಯಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ತಮಗೆ ಗೀತಾ ಅವರು ಕಳೆದ ಮೂರ್ನಾಲ್ಕು ವರ್ಷಗಳಿಂದ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.

“ಗೀತಾ ಅವರು ಹಿಂದಿನ ಸರ್ಕಾರದಲ್ಲಿ ಜಿಲ್ಲೆಯ ಶಾಸಕರ ನೆರವು ಪಡೆದು ನೆಲೆ ಕಂಡುಕೊಂಡಿದ್ದಾರೆ. ಅವರ ವಿರುದ್ಧ ವ್ಯಾಪಕ ದೂರುಗಳು ಇದ್ದರೂ, ಮಾಜಿ ಶಾಸಕರ ನೆರವಿನಿಂದ ಇಲ್ಲೇ ಉಳಿದಿದ್ದಾರೆ. ಅವರನ್ನು ವರ್ಗಾವಣೆ ಮಾಡಿ ಹೊಸ ಸರ್ಕಾರ ಆದೇಶಿಸಿದೆ. ಆದರೂ, ಗೀತಾ ಅವರು ತಮ್ಮ ಪ್ರಭಾವ ಬಳಸಿ, ಜಿಲ್ಲೆಯ ಇಬ್ಬರೂ ಶಾಸಕರ ಮನವೊಲಿಸಿ, ಇಲ್ಲೇ ಮುಂದುವರೆಯಲು ಶಿಫಾರಸ್ಸು ಮಾಡಿಸಿಕೊಂಡಿದ್ದಾರೆ” ಎಂದು ಪತ್ರದಲ್ಲಿ ಆರೋಪಪಿಸಿದ್ದಾರೆ.
“ಗೀತಾ ಅವರ ಕಿರುಕುಳವನ್ನು ಸಹಿಸಲಾರದೆ ಹಾಗೂ ಹಾಲಿ ಶಾಸಕರುಗಳು ಕೂಡ ಇವರ ಬಗ್ಗೆ ಮೃದು ಧೋರಣೆ ಅನುಸರಿಸಿದನ್ನು ಕಂಡು ಬೇಸಿತ್ತು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ” ಎಂದು ಅವರು ದೂರಿದ್ದಾರೆ.