ರಾಜ್ಯದ ಕೃಷಿ ಭೂಮಿಯನ್ನು ತಂಬಾಕು ಮುಕ್ತ ಭೂಮಿಯನ್ನಾಗಿ ಮಾಡುವ ಉದ್ದೇಶದಿಂದ ಕರ್ನಾಟಕ ರಾಜ್ಯ ತಂಬಾಕು ನಿಯಂತ್ರಣ ಘಟಕ (ಕೆಎಸ್‌ಟಿಸಿಸಿ)ವು ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯೊಂದಿಗೆ (ಆರ್‌ಡಿಪಿಆರ್) ಕೈಜೋಡಿಸಲು ಮುಂದಾಗಿದೆ.
ಕೃಷಿ ಭೂಮಿಯನ್ನು ತಂಬಾಕು ಮುಕ್ತಗೊಳಿಸಿ, ರೈತರಿಗೆ ವೈವಿಧ್ಯ ಬೆಳೆಗಳ ಆಯ್ಕೆಗಳನ್ನು ನೀಡುವ ಸಲುವಾಗಿ ಕೆಎಸ್‌ಟಿಸಿಸಿ, ಆರ್‌ಡಿಪಿಆರ್ ಜೊತೆಗೆ ಕೈಜೋಡಿಸಲು ಮುಂದಾಗಿದೆ ಎಂದು ತಿಳಿದುಬಂದಿದೆ.
“ಮಂಡ್ಯ ಮತ್ತು ರಾಮನಗರ ಜಿಲ್ಲೆಗಳ ಸುಮಾರು 25-30 ಗ್ರಾಮಗಳನ್ನು ತಂಬಾಕು ಮುಕ್ತಗೊಳಿಸಲಾಗಿದೆ. ಇದೀಗ ಇತರ ಸರ್ಕಾರಿ ಇಲಾಖೆಗಳ ನೆರವಿನೊಂದಿಗೆ ತಂಬಾಕು ಬೆಳೆಯುವ ಮೈಸೂರು, ಹಾಸನ, ಬೆಳಗಾವಿ, ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಮಡಿಕೇರಿ ಜಿಲ್ಲೆಯಲ್ಲಿಯೂ ಇದೇ ಮಾದರಿ ಅನುಸರಿಸಲು ನಿರ್ಧರಿಸಲಾಗಿದೆ” ಎಂದು ಕೆಎಸ್‌ಟಿಸಿಸಿ ಯೋಜನಾ ಸಂಯೋಜಕ ಪ್ರಭಾಕರ ತಿಳಿಸಿದ್ದಾರೆ.
“ರೈತರಿಗೆ ಸಂಭವನೀಯ ಪರ್ಯಾಯ ಬೆಳೆ ಪರಿಹಾರಗಳನ್ನು ಸೂಚಿಸಲು ತಂಬಾಕು ಬೆಳೆಯುವ ಪ್ರದೇಶಗಳನ್ನು ಪರಿಶೀಲಿಸಲಾಗುತ್ತದೆ. ಬಳಿಕ ತಂಬಾಕು ಉತ್ಪಾದನೆಯೇ ಜೀವನಾಧಾರವಾಗಿರುವ ಜನರ ಮೇಲೆ ತಂಬಾಕಿನ ವ್ಯತಿರಿಕ್ತ ಸಾಮಾಜಿಕ ಮತ್ತು ಆರ್ಥಿಕ ಪರಿಣಾಮಗಳನ್ನು ತಿಳಿಸಲಾಗುತ್ತದೆ” ಎಂದರು.
ಈ ಸುದ್ದಿ ಓದಿದ್ದೀರಾ? ದಕ್ಷಿಣ ಕನ್ನಡ | ಜಾನುವಾರುಗಳ ಪಶು ಆಧಾರ್ ನೋಂದಣಿಗೆ ಸಿದ್ಧತೆ
“ವಿಶ್ವ ಆರೋಗ್ಯ ಸಂಸ್ಥೆ ಕೂಡ ʼಕೃಷಿ ಭೂಮಿಯನ್ನು ತಂಬಾಕು ಮುಕ್ತಗೊಳಿಸಬೇಕಿದ್ದು, ಇದಕ್ಕೆ ಪರಿಹಾರವಾಗಿ ಆರ್ಥಿಕವಾಗಿ ಸಮರ್ಥನೀಯ ಪರ್ಯಾಯಗಳನ್ನು ಉತ್ತೇಜಿಸುವ ಅಗತ್ಯವಿದೆʼ ಎಂದು ಹೇಳಿದೆ” ಎಂದರು.
“ಕರ್ನಾಟಕದಲ್ಲಿ ತಂಬಾಕು ಉತ್ಪಾದನೆಯನ್ನು ಕಡಿತಗೊಳಿಸಲು ಇಲಾಖೆಯೊಂದಿಗೆ ಕೆಲಸ ಮಾಡಲಾಗುತ್ತಿದೆ. ಈ ನಿಟ್ಟಿನಲ್ಲಿ ಸರ್ಕಾರ ಕೂಡ ಹಲವು ಕ್ರಮಗಳನ್ನು ಕೈಗೊಂಡು ಪರಿಣತಿ ಮತ್ತು ಸಂಪನ್ಮೂಲಗಳನ್ನು ವಿಸ್ತರಿಸಬೇಕು” ಎಂದು ತಂಬಾಕು ಮುಕ್ತ ಕರ್ನಾಟಕಕ್ಕಾಗಿ ಒಕ್ಕೂಟದ ಸಂಚಾಲಕ ಎಸ್ ಜೆ ಚಂದರ್ ತಿಳಿಸಿದ್ದಾರೆ.