ಕರ್ನಾಟಕ ರಾಜ್ಯ ಸರ್ಕಾರಿ ಹಾಸ್ಟೆಲ್ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರ ಸಂಘದ ಸದಸ್ಯರು ಹಾಗೂ ಸಮಾಜ ಕಲ್ಯಾಣ ಇಲಾಖಾ ವಸತಿ ನಿಲಯ ಮತ್ತು ವಸತಿ ಶಾಲೆಗಳ ಹೊರಗುತ್ತಿಗೆ ಕಾರ್ಮಿಕರು, ಸರ್ಕಾರ ವೇತನ ಹೆಚ್ಚಿಸಿರುವುದಕ್ಕೆ, ಹರ್ಷ ವ್ಯಕ್ತಪಡಿಸಿದ್ದು ಸರ್ಕಾರದ ನಿಲುವನ್ನು ಸ್ವಾಗತಿಸಿದ್ದಾರೆ. ಕೂಡ್ಲಿಗಿ ತಾಲೂಕು ಸಮಾಜ ಕಲ್ಯಾಣ ಇಲಾಖೆಯ ವ್ಯವಸ್ಥಾಪಕ ಫಕೀರಪ್ಪರವರಿಗೆ ಸಿಹಿ ತಿನಿಸುವುದರ ಮೂಲಕ ಪರಸ್ಪರ ಸಿಹಿ ಹಂಚಿ ಸಂಭ್ರಮಿಸಿದ್ದಾರೆ.
“ಹಗಲಿರುಳು ವಸತಿ ಶಾಲೆ, ವಸತಿ ನಿಲಯದಲ್ಲಿ ಕೆಲಸಕ್ಕೆ ಅತಿ ಕಡಿಮೆ ವೇತನ ನೀಡಲಾಗುತ್ತಿತ್ತು. ವೇತನ ಪರಿಷ್ಕರಿಸಿ ಹೆಚ್ಚಿಸಬೇಕೆಂಬ ಹೊರಗುತ್ತಿಗೆ ನೌಕರರ ಹಲವು ವರ್ಷಗಳ ಬೇಡಿಕೆಯನ್ನು ಗಣನೆಗೆ ತೆಗೆದುಕೊಂಡು ಈ ಬಾರಿ ವೇತನ ಹೆಚ್ಚಳ ಮಾಡಿರುವುದು ಸಂತಸ ತಂದಿದೆ. ಬೆವರಿಗೆ ಸೂಕ್ತ ಗೌರವ ನೀಡಿ ತಕ್ಕ ಪ್ರತಿ ಫಲವಾಗಿ, ನ್ಯಾಯಯುತವಾದ ವೇತನ ನೀಡಲು ಸರ್ಕಾರ ನಿರ್ಧರಿಸಿರುವುದನ್ನು ಸ್ವಾಗತಿಸಿದ್ದೇವೆ” ಎಂದು ಕಾರ್ಮಿಕರು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಹೊರಗುತ್ತಿಗೆ ನೌಕರರ ಸಂಘದ ಯುವ ಮುಖಂಡ ಜಿ ಪರಸಪ್ಪ, ವಂದೇ ಮಾತರಂ ಜಾಗೃತಿ ವೇದಿಕೆ ಮುಖಂಡ ಹಾಗೂ ಕಾರ್ಮಿಕರ ಪರ ದಲಿತ ಹೋರಾಟಗಾರ ಡಿ ಹೆಚ್ ಮರಿಸ್ವಾಮಿ, ಗೋವಿಂದಪ್ಪ, ವಸತಿ ಶಾಲೆ ಹಾಗೂ ವಸತಿ ನಿಲಯಗಳ ಹೊರಗುತ್ತಿಗೆ ನೌಕರರಾದ ಅಂಜಿನಮ್ಮ, ಸಾವಿತ್ರಮ್ಮ, ಬೆನಾಳಮ್ಮ, ನಾಗರತ್ನ, ಕಲಾವತಿ, ಭಾರತಿ, ಲಕ್ಷ್ಮಿ, ಭಾಗ್ಯಮ್ಮ, ಸಿ ಜೆ ನಾಗರಾಜ, ಮಹಾಂತೇಶ, ಪವಿತ್ರ, ಸಿದ್ದಮ್ಮ, ರತ್ನಮ್ಮ, ಶಕುಂತಲಮ್ಮ, ಯಲ್ಲಮ್ಮ ಹಾಗೂ ಸಿದ್ದಲಿಂಗಮ್ಮ, ಕೆ.ರೇಣುಕಮ್ಮ, ಸಮಾಜ ಕಲ್ಯಾಣ ಇಲಾಖೆಯ ಸಿಬ್ಬಂದಿ ಸಿದ್ದಪ್ಪ ಸೇರಿದಂತೆ ಇತರರು ಹಾಜರಿದ್ದರು.
ಇದನ್ನೂ ಓದಿ: ವಿಜಯನಗರ | ಪಹಲ್‌ಗಾಮ್ ಭಯೋತ್ಪಾದಕರ ದಾಳಿಗೆ 28 ಜನರ ಸಾವು; ಡಿವೈಎಫ್ಐ ಖಂಡನೆ