ಉಡುಪಿ ಜಿಲ್ಲೆಯ ಕುಂದಾಪುರ ಬಸೂರು ಮೂರುಕೈ ಸಮೀಪದ ವಡೇರಹೋಬಳಿ ಎಂಬಲ್ಲಿ ಆಟೋ ರಿಕ್ಷಾ ಢಿಕ್ಕಿ ಹೊಡೆದ ಪರಿಣಾಮ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಇಂದು ಮುಂಜಾನೆ ನಡೆದ ಬಗ್ಗೆ ವರದಿಯಾಗಿದೆ.
ಅಪಘಾತದ ಬಳಿಕ ರಿಕ್ಷಾ ಚಾಲಕ ನಿಲ್ಲಿಸದೆ ಪರಾರಿಯಾಗಿದ್ದು ಒಂದಷ್ಟು ಗಂಟೆಗಳ ಬಳಿಕ ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾನೆ ಎಂದು ತಿಳಿದುಬಂದಿದೆ.
ಇಲ್ಲಿನ ವಡೇರಹೋಬಳಿ ಬೆಟ್ಟಾಗರ ಮನೆ ನಿವಾಸಿ ಸೋಮಯ್ಯ (61) ಮೃತರು ಎಂದು ಗುರುತಿಸಲಾಗಿದೆ.
ಸೋಮಯ್ಯ ಅವರು ನಿತ್ಯ ಬೆಳಿಗ್ಗೆ ವಾಕಿಂಗ್ ಮಾಡುವ ಹವ್ಯಾಸ ಹೊಂದಿದ್ದರು. ಬುಧವಾರವೂ ವಾಕಿಂಗ್ ತೆರಳಿದ್ದ ವೇಳೆ ರಿಕ್ಷಾ ಅಪಘಾತ ನಡೆಸಿ ಪರಾರಿಯಾಗಿದ್ದು ಗಾಯಗೊಂಡು ಗದ್ದೆಗೆ ಬಿದ್ದ ಸೋಮಯ್ಯ ಮೃತಪಟ್ಟಿದ್ದಾರೆ. ಒಂದಷ್ಟು ಸಮಯದ ನಂತರ ಅದೇ ದಾರಿಯಲ್ಲಿ ಪಾದಚಾರಿಯಾಗಿ ಬರುತ್ತಿದ್ದ ಸೋಮಯ್ಯ ಅವರ ಸಂಬಂಧಿಯೊಬ್ಬರು ಗದ್ದೆಯಲ್ಲಿ ವ್ಯಕ್ತಿ ಬಿದ್ದಿರುವುದನ್ನು ಕಂಡಿದ್ದು ಪರಿಶೀಲಿಸಿದಾಗ ಸೋಮಯ್ಯ ಎಂದು ತಿಳಿದುಬಂದಿದೆ. ಕೂಡಲೇ ಮನೆಗೆ ತೆರಳಿ ಸುದ್ದಿ ಮುಟ್ಟಿಸಿ ಮರಳಿಬಂದು ಕುಟುಂಬಿಕರ ಜೊತೆ ಆಸ್ಪತ್ರೆಗೆ ಕರೆದೊಯ್ದಿದ್ದು ಅಷ್ಟರಲ್ಲಾಗಲೇ ಸೋಮಯ್ಯ ಮೃತಪಟ್ಟಿರುವುದು ತಿಳಿದುಬಂದಿದೆ.
ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 05/2025 ಕಲಂ: 281, 106 BNS 134 (A&B) IMV ACT ರಂತೆ ಪ್ರಕರಣ ದಾಖಲಾಗಿದೆ.
