14 ವರ್ಷ ವಯಸ್ಸಿನ ಅಪ್ರಾಪ್ತ ಬಾಲಕಿಯೊಬ್ಬಳು ಗಂಡು ಮಗುವಿಗೆ ಜನ್ಮ ನೀಡಿರುವ ಘಟನೆ ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನಲ್ಲಿ ನಡೆದಿದೆ.
ಬಾಲಕಿ ಎಂಟು ವಾರಗಳ ಗರ್ಭಿಣಿಯಾಗಿದ್ದಾಗಲೇ ಸಂಬಂಧಪಟ್ಟ ಇಲಾಖೆ ಹಾಗೂ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು. ಆದರೂ ಯಾವ ಅಧಿಕಾರಿಗಳೂ ಇತ್ತ ಗಮನ ಹರಿಸಿಲ್ಲ. ಪ್ರಕರಣದಲ್ಲಿ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ ಎಂದು ಬಾಲಕಿಗೆ ಪ್ರಸವ ಪೂರ್ವ ಚಿಕಿತ್ಸೆ ನೀಡಿದ್ದ ಆಸ್ಪತ್ರೆ ವೈದ್ಯಾಧಿಕಾರಿಗಳು ಆರೋಪಿಸಿದ್ದಾರೆ.
ಬಾಲಕಿಗೆ ಕಳೆದ ಬುಧವಾರ ಮನೆಯಲ್ಲೇ ಸಹಜ ಹೆರಿಗೆಯಾಗಿದೆ. ಬಳಿಕ ಆಕೆಯ ಆರೋಗ್ಯದಲ್ಲಿ ಆರುಪೇರಾಗಿದ್ದು, ಚಿಕಿತ್ಸೆಗೆ ಎಡೆಯೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ವೈದ್ಯರ ತಪಾಸಣೆ ವೇಳೆ ವಿಷಯ ಬೆಳಕಿಗೆ ಬಂದಿದೆ.
ಪ್ರಕರಣವನ್ನು ಗಮನಕ್ಕೆ ತಂದರೂ ಸಂಬಂಧಪಟ್ಟ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ಆರೋಪಿಸಿದ್ದಾರೆ. ಕಳೆದ ವರ್ಷ ಜುಲೈನಲ್ಲಿಯೇ ಪ್ರಕರಣ ಬೆಳಕಿಗೆ ಬಂದರೂ ಡಿಸೆಂಬರ್ ಕೊನೆಗೆ ಮಾಹಿತಿ ನೀಡಲಾಗಿದೆ. ಅದಾಗಲೇ ಬಾಲಕಿ 7 ತಿಂಗಳ ಗರ್ಭಿಣಿಯಾಗಿದ್ದಳು ಎಂದು ಉಳಿದ ಇಲಾಖೆಯ ಅಧಿಕಾರಿಗಳು ಪ್ರತ್ಯಾರೋಪ ಮಾಡಿದ್ದಾರೆ.
ಪ್ರಕರಣಕ್ಕೆ ಸಂಬಂಧಪಟ್ಟಂತೆ, ಎಡೆಯೂರು ವೃತ್ತ ಮೇಲ್ವಿಚಾರಕಿ ಭಾಗ್ಯಲಕ್ಷ್ಮೀ ದೇವಿ ಅವರ ದೂರಿನ ಮೇರೆಗೆ ಬಾಲಕಿಯ ಅಪ್ರಾಪ್ತ ಪತಿ ಹಾಗೂ ಪೋಷಕರ ವಿರುದ್ಧ ಬಾಲ್ಯ ವಿವಾಹ ತಡೆ ಕಾಯ್ದೆ ಹಾಗೂ ಪೋಕ್ಸೋ ಕಾಯ್ದೆಯಡಿ ಅಮೃತೂರು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ?: ಕುಣಿಗಲ್ ಎಕ್ಸ್‌ಪ್ರೆಸ್ ಕೆನಾಲ್‌ಗೆ ವಿರೋಧ; ಹೋರಾಟದ ಎಚ್ಚರಿಕೆ
ತಾಯಿ ಜೊತೆ ಕಲ್ಯಾಣ ಮಂಟಪದಲ್ಲಿ ಕೆಲಸ ಮಾಡುತ್ತಿದ್ದ ಬಾಲಕಿ, ಅಲ್ಲಿಯೇ ಕೆಲಸ ಮಾಡುತ್ತಿದ್ದ ಅಪ್ರಾಪ್ತ ಬಾಲಕನೊಬ್ಬನ್ನು ಪ್ರೀತಿಸುತ್ತಿದ್ದಳು. ಕಳೆದ ವರ್ಷ ಇಬ್ಬರೂ ಅಪ್ರಾಪ್ತರು ಮದುವೆಯಾಗಿದ್ದರು. ಬಾಲಕಿ 5 ತಿಂಗಳ ಗರ್ಭಿಣಿಯಾಗಿದ್ದಾಗ ಬಾಲಕ ಆಕೆಯನ್ನು ತೊರೆದು ಪರಾರಿಯಾಗಿದ್ದಾನೆ ಎನ್ನಲಾಗಿದೆ.
