ಜಗದ ಅಂತ್ಯದವರೆಗೂ ಕುವೆಂಪು ಚಿರಸ್ಥಾಯಿಯಾಗಿ ಇರುತ್ತಾರೆ. ಕುವೆಂಪು ಚಿಂತನೆಗಳು, ಸರಳ ಜೀವನದ ಪ್ರತಿಪಾದನೆ, ಮಂತ್ರ ಮಾಂಗಲ್ಯದ ಪರಿಕಲ್ಪನೆ ಪ್ರಸ್ತುತ ಸಮಾಜಕ್ಕೆ ಅತ್ಯವಶ್ಯಕ ಆಗಿವೆ ಎಂದು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಿಕ್ಕಮರಿಗೌಡ್ರು ಅಭಿಪ್ರಾಯಪಟ್ಟರು.

ಅವರು ಸೋಮವಾರ ಕನಕಪುರದ ರಂಗನಾಥ ಬಡಾವಣೆಯ ಹೊಂಗಿರಣ ಆವರಣದಲ್ಲಿ ಜಿಲ್ಲಾ ಲೇಖಕರ ವೇದಿಕೆ ಹಾಗೂ ನೇಗಿಲಯೋಗಿ ಸಾಮಾಜಿಕ ಟ್ರಸ್ಟ್ ವತಿಯಿಂದ ರಾಷ್ಟ್ರಕವಿ ಕುವೆಂಪು 120 ನೇ ಜನ್ಮ ದಿನೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ಉಪನ್ಯಾಸ, ಕೃತಿ ಲೋಕಾರ್ಪಣೆ, ಪ್ರಶಸ್ತಿ ಪ್ರಧಾನ ಮತ್ತು ಗೀತ ಗಾಯನವನ್ನು ಆಯೋಜಿಸಲಾಗಿತ್ತು.
ಡಾ. ಹೆಚ್ ತುಕಾರಾಮ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಜಿಲ್ಲಾ ಲೇಖಕರ ವೇದಿಕೆ ಕಳೆದ 12 ವರ್ಷಗಳಿಂದ ಕರ್ನಾಟಕದ ವೈಶಿಷ್ಟ್ಯಗಳನ್ನು ಮುಂದಿನ ಯುವ ಪೀಳಿಗೆಗೆ ತಲುಪಿಸುವ ಮಹೋನ್ನತ ಕಾರ್ಯಗಳನ್ನು ಮಾಡುತ್ತಿದೆ. ಸಮಾಜದಲ್ಲಿ ಮೌಲ್ಯ ತುಂಬುವ ಕಾವ್ಯ ಕೃಷಿ ಕಾಯಕ ಮಾಡುತ್ತಿದೆ ಎಂದು ಶ್ಲಾಘಿಸಿದರು.
ಖ್ಯಾತ ಸಾಹಿತಿ ಕೂ.ಗಿ ಗಿರಿಯಪ್ಪ ಮಾತನಾಡಿದರು. ನೋಡೋಣ ಬನ್ನಿ ಕರುನಾಡ ಕೃತಿ ಬಿಡುಗಡೆ ಮಾಡಿ ಮಾತನಾಡಿದ ವಿಜಯ ಕಾಲೇಜಿನ ಪ್ರಾಧ್ಯಾಪಕರಾದ ಡಾ. ವಾದಿರಾಜ್ ಕೃತಿಯಲ್ಲಿ ಕರ್ನಾಟಕದ 74 ಸ್ಥಳಗಳ ದಿಗ್ದರ್ಶನವನ್ನು ಲೇಖಕರು ಸವಿವರವಾಗಿ ಮಾಡಿಸಿದ್ದಾರೆ. ಪುಸ್ತಕವನ್ನು ಓದಿದರೆ ಕರ್ನಾಟಕದ ಪ್ರವಾಸ ಮಾಡಿದ ದಿವ್ಯಾನುಭವ ಮೂಡುತ್ತದೆ ಎಂದರು.

ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಜಯಕರ್ನಾಟಕ ಜನಪರ ವೇದಿಕೆಯ ರಾಜ್ಯ ಸಲಹೆಗಾರರು, ಹಾಗೂ ಜಯಕರ್ನಾಟಕ ಮಾಜಿ ರಾಜ್ಯಾಧ್ಯಕ್ಷರಾದ ಕುಮಾರಸ್ವಾಮಿ, ಭೂ ದಾಖಲೆಗಳಾದ ನಿರ್ದೇಶಕ ನಂದೀಶ್, ಪಶು ವೈದ್ಯಾಧಿಕಾರಿ ಡಾ.ಕುಮಾರ್, ನಗರಸಭೆಯ ಸಮುದಾಯ ಸಂಘಟಕರಾದ ನಟರಾಜುಗೆ “ವಿಶ್ವ ಮಾನವ” ಪ್ರಶಸ್ತಿ ಪ್ರಧಾನ ಮಾಡಿ ಸನ್ಮಾನಿಸಲಾಯಿತು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಕುಮಾರಸ್ವಾಮಿ, ಕುವೆಂಪು ಜಗದ ಕವಿ, ಯುಗದ ಕವಿ, ಸಂತ ಕವಿ , ರಾಷ್ಟ್ರಕವಿ ಮಾತ್ರವಲ್ಲ ಜಗತ್ತಿನ ಸಮಾನತೆಯ ಪರಿಕಲ್ಪನೆಗೆ ಸೂತ್ರ ಸಾರಿದ ಮಹಾನ್ ದಾರ್ಶನಿಕರು. ಸಮಾಜದ ಮೌಢ್ಯಗಳ ವಿರುದ್ದ ಚಾಟಿ ಬೀಸಿ ಮೌಲ್ಯಗಳ ಬಿತ್ತಿದ ಮಹಾನ್ ಪುರುಷ. ಜಾತೀಯತೆಯ ವಿರುದ್ದ ಹೋರಾಡಿದ ಸಾಮಾಜಿಕ ಸಮಾನತೆಯ ಹೋರಾಟಗಾರರು ಸಹ ಹೌದು ಎಂದರು.
ಇದನ್ನು ಓದಿದ್ದೀರಾ? ರಾಮನಗರ | ರಕ್ತದಾನ ಮಹಾ ಜೀವದಾನ : ಡಾ. ಮುತ್ತಣ್ಣ
ತಮ್ಮ ಕಾವ್ಯದ ವಿಚಾರಧಾರೆಗಳಿಂದ ಸಮಾಜದಲ್ಲಿ ಇಂದಿಗೂ ಅವರ ಜೀವಂತಿಕೆ ಕಾಣಬಹುದು. ಜ್ಞಾನಪೀಠ ಪ್ರಶಸ್ತಿಗೆ ಬುನಾದಿ ಹಾಕಿಕೊಟ್ಟ ಮಹನೀಯರು. ಕನ್ನಡ ಭಾಷೆಯ ಸಿರಿ ಸಂಪತ್ತನ್ನು ಜಗತ್ತಿಗೆ ತಿಳಿಸಿ ಕೊಟ್ಟವರು. ನಿರ್ದಿಷ್ಟವಾಗಿ ಸಾರ್ವತ್ರಿಕ ಮಾನವತಾವಾದವನ್ನು ಪ್ರತಿಪಾದಿಸಿ ವಿಶ್ವ ಮಾನವರೆಸಿನಿದ್ದಾರೆ. ಅಂತವರ ಹೆಸರಲ್ಲಿ ಪ್ರಶಸ್ತಿಗೆ ಭಾಜನನಾಗಿದ್ದು ನನ್ನ ಜೀವಿತದ ಅವಿಸ್ಮರಣೀಯ ಘಳಿಗೆಯಾಗಿದ್ದು, ಅದಕ್ಕಾಗಿ ಜಿಲ್ಲಾ ಲೇಖಕರ ವೇದಿಕೆ, ಹಾಗೂ ನೇಗಿಲಯೋಗಿ ಸಾಮಾಜಿಕ ಟ್ರಸ್ಟಿಗೆ ನಾ ಚಿರ ಋಣಿಯಾಗಿರುತ್ತೇನೆ ಎಂದು ಭಾವುಕರಾಗಿ ಹೇಳಿದರು.
ನೇಗಿಲಯೋಗಿ ಟ್ರಸ್ಟಿನ ಚಿಕ್ಕೆಂಪೆಗೌಡರು ಸ್ವಾಗತ ಭಾಷಣ ಮಾಡಿದರೆ , ಕಸಾಪ ಅಧ್ಯಕ್ಷರಾದ ಶಿವನಹಳ್ಳಿ ಶಿವಲಿಂಗಯ್ಯ ಕುವೆಂಪು ಬಗ್ಗೆ ಸವಿವರವಾಗಿ ಉಪನ್ಯಾಸ ನೀಡಿದರು. ಎಸ್. ಶೋಭ ಕಾರ್ಯಕ್ರಮವನ್ನು ನಿರೂಪಿಸಿದರು. ವಿಜಯ ಶಂಕರ್ ಹಾಗೂ ವಿನಯ್ ಕುಮಾರ್ ಹಾಗೂ ತಂಡದವರು ಕುವೆಂಪು ವಿರಚಿತ ಗೀತ ಗಾಯನ ನಡೆಸಿಕೊಟ್ಟರು.
ಇದನ್ನು ನೋಡಿದ್ದೀರಾ? ಗದಗ | ಮನೆ ಹಂಚಿಕೆಯಲ್ಲಿ ತಾರತಮ್ಯ ಆರೋಪ
ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಕಾಡೇಗೌಡ, ಕನ್ನಡ ಭಾಸ್ಕರ್, ಜಿಕೆವಿಕೆ ರಾಮಯ್ಯ, ಚಿಕ್ಕ ರಂಗಯ್ಯ, ನಮನ ಚಂದ್ರು, ಅಸ್ಗರ್ ಖಾನ್ , ಕೆಂಚಪ್ಪ, ನಾಗರಾಜು, ಶಿವಣ್ಣ , ಎಸ್. ವೆಂಕಟೇಶ್ ಗೋಪಾಲ ಕಾಂಬ್ಳೆ, ನಾಗೇಂದ್ರ, ರಾವುಗೋಡ್ಲು ವೆಂಕಟಗಿರಿಯಪ್ಪ ಮತ್ತು ಮುಂತಾದ ಸಾಹಿತಿಗಳು ಭಾಗವಹಿಸಿದ್ದರು.