ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿಯ ದಿ.ದೇವರಾಜ ಅರಸು ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯದಲ್ಲಿ ಮೂಲ ಸೌಕರ್ಯ ಕೊರತೆಯಿದ್ದು, ಕೂಡಲೇ ಈಡೇರಿಸಬೇಕೆಂದು ಆಗ್ರಹಿಸಿ ತಡರಾತ್ರಿ ಕಲಬುರಗಿಯ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಕಚೇರಿ ಎದುರು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.
ʼವಸತಿ ನಿಲಯದಲ್ಲಿ ಸುಮಾರು 150 ವಿದ್ಯಾರ್ಥಿಗಳಿದ್ದಾರೆ. ನಿಲಯದಲ್ಲಿ ಸ್ನಾನಕ್ಕೆ ಬಿಸಿ ನೀರು , ಶುದ್ಧ ಕುಡುಯುವ ನೀರು ಸೇರಿದಂತೆ ಇತರೆ ಸೌಲಭ್ಯ ಒದಗಿಸಬೇಕು. ಮೆನು ಪ್ರಕಾರ ಊಟ ನೀಡುವಂತೆ ಕೇಳಿದರೆ ಅಡುಗೆ ಮುಖ್ಯಸ್ಥ ವಿದ್ಯಾರ್ಥಿಗಳೊಂದಿಗೆ ಅನುಚಿತವಾಗಿ ವರ್ತಿಸಿ ಬೇಜವ್ದಾರಿ ತೋರುತ್ತಿದ್ದಾರೆ. ವಸತಿ ನಿಲಯದ ಅಡುಗೆ ಸಿಬ್ಬಂದಿ ಶ್ರೀಮಂತ ಅವರು ವಿದ್ಯಾರ್ಥಿಗಳಿಗೆ ಅವಾಚ್ಯ ಶಬ್ಧಗಳಿಂದ ನಿಂಧಿಸಿ ಹಲ್ಲೆ ಮಾಡುತ್ತಾನೆ. ಕೂಡಲೇ ಅವರನ್ನು ವರ್ಗಾವಣೆ ಮಾಡಬೇಕುʼ ಎಂದು ಪ್ರತಿಭಟನಾನಿರತ ವಿದ್ಯಾರ್ಥಿಗಳು ದೂರಿದರು.
ವಿಷಯ ತಿಳಿದು ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ ಪ್ರಭು ದೊರೆ ಸ್ಥಳಕ್ಕೆ ಭೇಟಿ ನೀಡಿದರು. ವಿದ್ಯಾರ್ಥಿಗಳ ಬೇಡಿಕೆಗಳ ಕುರಿತು ಚರ್ಚಿಸಿ, ತಮ್ಮ ಕಚೇರಿಯಲ್ಲಿ ವಿದ್ಯಾರ್ಥಿಗಳೊಂದಿಗೆ ಸಭೆ ನಡೆಸುವುದಾಗಿ ಭರವಸೆ ನೀಡಿದ ಹಿನ್ನೆಲೆ ಪ್ರತಿಭಟನೆ ಹಿಂಪಡೆದರು.
ಈ ಸುದ್ದಿ ಓದಿದ್ದೀರಾ? ಸಿದ್ಧಲಿಂಗಯ್ಯನವರ ಕಾವ್ಯ: ಸಾಮಾಜಿಕ ಕ್ರೋಧದ ನೆಲೆಯಿಂದ ಆಧ್ಯಾತ್ಮಿಕ ಅನ್ವೇಷಣೆಯ ಕಡೆಗೆ
ವಸತಿ ನಿಲಯ ವಿದ್ಯಾರ್ಥಿಗಳ ಬೇಡಿಕೆ ಈಡೇರಿಸುವುದಾಗಿ ಅಧಿಕಾರಿಗಳು ಭರವಸೆ ನೀಡಿದರೂ ಸ್ಪಂದಿಸುತ್ತಿಲ್ಲ. ಈಗಲಾದರೂ ಇಲಾಖೆಯ ಅಧಿಕಾರಿಗಳು ವಿದ್ಯಾರ್ಥಿಗಳ ಸಮಸ್ಯೆಗಳಿಗೆ ಸ್ಪಂದಿಸದಿದ್ದರೆ ಮತ್ತೆ ಹೋರಾಟ ಮಾಡುವುದಾಗಿ ವಿದ್ಯಾರ್ಥಿಗಳು, ಹೋರಾಟಗಾರರು ಎಚ್ಚರಿಕೆ ನೀಡಿದ್ದಾರೆ.