ಗ್ರಾಮೀಣ ಭಾಗದ ಜನರಿಗೆ ಶುದ್ಧ ಕುಡಿಯುವ ನೀರು ಪೂರೈಸುವ ಮಹತ್ವದ ಉದ್ದೇಶದಿಂದ ಸ್ಥಾಪಿಸಲಾಗಿದ್ದ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸುಸ್ಥಿತಿಯಲ್ಲಿಡುವಲ್ಲಿ ಆಡಳಿತ ವ್ಯವಸ್ಥೆ ಎಡವಿದೆ ಎಂಬ ಆರೋಪಗಳಿವೆ.
ಜಿಲ್ಲೆಯಲ್ಲಿ ಒಟ್ಟು 185 ಗ್ರಾಮ ಪಂಚಾಯತ್‌ಗಳು, 8 ತಾಲೂಕು ಕೇಂದ್ರಗಳಿವೆ. ಇವುಗಳಲ್ಲಿ ಒಟ್ಟು 391 ಶುದ್ಧ ನೀರಿನ ಘಟಕಗಳ ಪೈಕಿ 292 ಕಾರ್ಯನಿರ್ವಹಿಸುತ್ತಿದೆ. ಉಳಿದಿದ್ದು ನಿರ್ವಹಣೆಯಿಲ್ಲದೆ ಕೆಟ್ಟು ನಿಂತಿವೆ, ಇನ್ನೂ ಕೆಲವೆಡೆ ದುರಸ್ತಿ ಮಾಡದಷ್ಟು ಹಾಳಾಗಿವೆ. ಒಟ್ಟು ಘಟಕಗಳಲ್ಲಿ 298 ಗ್ರಾಮ ಪಂಚಾಯತ್‌ಗಳಿಗೆ ಹಸ್ತಾಂತರಿಸಲಾಗಿದೆ, ಇನ್ನುಳಿದ 93 ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ನಿರ್ವಹಿಸುತ್ತದೆ.

ಕೆಲ ವರ್ಷಗಳ ಹಿಂದೆ ಗ್ರಾಮೀಣ ಪ್ರದೇಶದ ವಿವಿಧ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಲಾಗಿತ್ತು. ₹5 ನಾಣ್ಯ ಹಾಕಿ 20 ಲೀ. ನೀರು ಪಡೆಯಲು ಅವಕಾಶ ಕಲ್ಪಿಸಲಾಗಿತ್ತು. ಆದರೆ ನಿರ್ವಹಣೆ, ನೀರಿನ ಮೂಲ ಇಲ್ಲದರಿಂದ ಜಿಲ್ಲೆಯ 99ಕ್ಕೂ ಹೆಚ್ಚು ಘಟಕಗಳು ಕೆಲಸ ನಿಲ್ಲಿಸಿ ವರ್ಷಗಳೇ ಕಳೆದಿದೆ. ಈ ಪೈಕಿ ಕೆಲವು ದುರಸ್ತಿಯಾದರೆ, ಹಲವು ಘಟಕಗಳು ಉದ್ಘಾಟನೆಯಾಗಿ ವರ್ಷಗಳೇ ಗತಿಸಿದ್ದರೂ ತಾಂತ್ರಿಕ ದೋಷದಿಂದ ಕಾರ್ಯನಿರ್ವಹಿಸದೇ ತುಕ್ಕು ಹಿಡಿದಿವೆ.
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಯಮಿತ(ಕೆಆರ್‌ಐಡಿಎಲ್), ಕೋಪರೇಟಿವ್ ಸೇರಿದಂತೆ ವಿವಿಧ ಸಂಸ್ಥೆಗಳು ಶುದ್ಧ ಕುಡಿಯುವ ನೀರಿನ ಘಟಕಗಳು ಅಳವಡಿಸಲಾಗಿದೆ. ಈ ಪೈಕಿ ಜಿಲ್ಲೆಯಲ್ಲಿ ಒಟ್ಟು ಶುದ್ಧ ನೀರಿನ ಘಟಕಗಳ ಬಗ್ಗೆ 2024ರ ಜೂನ್ ತಿಂಗಳ ಪ್ರಗತಿ ವರದಿಯಲ್ಲಿ ಇಲಾಖೆ ಮಾಹಿತಿ ನೀಡಿದೆ.
ಒಟ್ಟು 391 ಶುದ್ಧ ಕುಡಿಯುವ ನೀರಿನ ಘಟಕಗಳು :
ಔರಾದ-ಕಮಲನಗರ ತಾಲೂಕು ವ್ಯಾಪ್ತಿಯಲ್ಲಿ ಒಟ್ಟು 110 ಶುದ್ಧ ನೀರಿನ ಘಟಕಗಳು ಸ್ಥಾಪಿಸಲಾಗಿದ್ದು, ಇವುಗಳಲ್ಲಿ 55 ಘಟಕಗಳ ನಿರ್ವಹಣೆಯನ್ನು ಗ್ರಾ.ಪಂ.ಗಳಿಗೆ ಒಪ್ಪಿಸಲಾಗಿದೆ, ಇನ್ನುಳಿದ 55 ಘಟಕಗಳು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ನಿರ್ವಹಣೆಯಲ್ಲಿವೆ. 110 ಘಟಕಗಳ ಪೈಕಿ 82 ಕಾರ್ಯನಿರ್ವಹಿಸುತ್ತಿದೆ, ಉಳಿದ 28 ಘಟಕಗಳು ಹಾಳಾಗಿವೆ.
ಬಸವಕಲ್ಯಾಣ-ಹುಲಸೂರ ತಾಲೂಕು ವ್ಯಾಪ್ತಿಯಲ್ಲಿ ಒಟ್ಟು 65 ಶುದ್ಧ ನೀರಿನ ಘಟಕಗಳು ಸ್ಥಾಪಿಸಲಾಗಿದ್ದು, ಇವುಗಳಲ್ಲಿ 55 ಘಟಕಗಳ ನಿರ್ವಹಣೆಯನ್ನು ಗ್ರಾ.ಪಂ.ಗಳು ಮಾಡುತ್ತಿವೆ, ಉಳಿದ 10 ಘಟಕಗಳು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ನಿರ್ವಹಣೆಯಲ್ಲಿವೆ. 65 ಘಟಕಗಳ ಪೈಕಿ 39 ಕಾರ್ಯನಿರ್ವಹಿಸುತ್ತಿದೆ, ಉಳಿದ 26 ಘಟಕಗಳು ದುರಸ್ತಿ ಇಲ್ಲದೇ ಕೆಟ್ಟು ನಿಂತಿವೆ.

ಭಾಲ್ಕಿ ತಾಲೂಕಿನಲ್ಲಿ 64 ಶುದ್ಧ ನೀರಿನ ಘಟಕಗಳಿದ್ದು, ಇವುಗಳಲ್ಲಿ 41 ಘಟಕಗಳನ್ನು ಗ್ರಾಮ ಪಂಚಾಯಿತಿಗಳ ನಿರ್ವವಹಣೆಯಲ್ಲಿವೆ. ಉಳಿದ 23 ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ನಿರ್ವಹಿಸುತ್ತಿದೆ. ಒಟ್ಟು 64 ಘಟಕಗಳಲ್ಲಿ 60 ಕಾರ್ಯನಿರ್ವಹಿಸುತ್ತಿದ್ದು, 4 ಘಟಕಗಳು ಕಾರ್ಯನಿರ್ವಹಿಸುತ್ತಿಲ್ಲ.
ಬೀದರ್ ತಾಲೂಕಿನ ಗ್ರಾಮೀಣ ಪ್ರದೇಶದಲ್ಲಿ ಒಟ್ಟು 74 ಘಟಕಗಳಿದ್ದು, ಇವುಗಳಲ್ಲಿ 73 ಘಟಕಗಳನ್ನು ಗ್ರಾಮ ಪಂಚಾಯಿತಿಗಳ ನಿರ್ವವಹಣೆಯಲ್ಲಿವೆ. ಕೇವಲ 1 ಮಾತ್ರ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ನಿರ್ವಹಿಸುತ್ತಿದೆ. ಒಟ್ಟು 74 ಘಟಕಗಳಲ್ಲಿ 58 ಕಾರ್ಯನಿರ್ವಹಿಸುತ್ತಿದ್ದು, 16 ಘಟಕಗಳು ಕಾರ್ಯನಿರ್ವಹಿಸುತ್ತಿಲ್ಲ.
ಹುಮನಾಬಾದ್-ಚಿಟಗುಪ್ಪ ತಾಲೂಕಿನಲ್ಲಿ 78 ಘಟಕಗಳಿದ್ದು, ಈ ಪೈಕಿ 74 ಘಟಕಗಳನ್ನು ಗ್ರಾಮ ಪಂಚಾಯಿತಿಗಳ ನಿರ್ವವಹಣೆಯಲ್ಲಿವೆ. 4 ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ನಿರ್ವಹಿಸುತ್ತಿದೆ. 78 ಘಟಕಗಳಲ್ಲಿ 53 ಕಾರ್ಯನಿರ್ವಹಿಸುತ್ತಿದ್ದು, 25 ಘಟಕಗಳು ಕಾರ್ಯನಿರ್ವಹಿಸುತ್ತಿಲ್ಲ.
ದುರಸ್ತಿ ಕಾಣದ ಘಟಕಗಳಿಗೂ ದಾಖಲೆಯಲ್ಲಿ ʼವರ್ಕಿಂಗ್ʼ :
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ನೀಡಿದ ಮಾಹಿತಿ ಪಡೆದು ಈದಿನ.ಕಾಮ್ ವಿವಿಧ ತಾಲೂಕು ವ್ಯಾಪ್ತಿಯಲ್ಲಿ ಅಳವಡಿಸಲಾದ ಶುದ್ಧ ನೀರಿನ ಘಟಕಗಳ ಸಮೀಕ್ಷೆ ಅಭಿಯಾನ ನಡೆಸಿತು. ಇಲಾಖೆ ನೀಡಿದ ಮಾಹಿತಿ ಪ್ರಕಾರ ಬಹುತೇಕ ಕಡೆಗಳಲ್ಲಿ ಶುದ್ಧ ನೀರಿನ ಘಟಕಗಳು ಕಾರ್ಯನಿರ್ವಹಿಸುತ್ತಿಲ್ಲ ಎಂಬ ಸತ್ಯ ಬಯಲಾಗಿದ್ದು, ಘಟಕಗಳು ಕಾರ್ಯನಿರ್ವಹಿಸುತ್ತಿವೆ ಎಂದು ದಾಖಲೆಯಲ್ಲಿದೆ, ಆದರೆ ವಾಸ್ತವದಲ್ಲಿ ಘಟಕಗಳು ಕೆಟ್ಟು ನಿಂತಿರುವುದು ಕಂಡು ಬಂದಿದೆ.
ಔರಾದ್ ತಾಲೂಕಿನ ಚಿಂತಾಕಿ, ಶೆಂಬೆಳ್ಳಿ, ಬೆಳಕುಣಿ(ಚೌ) ಹಾಗೂ ಸಂತಪೂರ ಗ್ರಾಮ ಪಂಚಾಯತ್ ವ್ಯಾಪ್ತಿಯ ಗ್ರಾಮಗಳಲ್ಲಿ ಶುದ್ಧ ನೀರಿನ ಘಟಕಗಳು ಕಾರ್ಯನಿರ್ವಹಿಸುತ್ತಿದೆ ಎಂದು ದಾಖಲೆಯಲ್ಲಿದೆ. ಆದರೆ ಫ್ಯಾಕ್ಟ್ ಚೆಕ್ ಮಾಡಿದಾಗ ಅಲ್ಲಿನ ಘಟಕಗಳು ಸಮಪರ್ಕ ನಿರ್ವಹಣೆಯಿಲ್ಲದೆ ಹಾಳಾಗಿರುವುದು ಗೊತ್ತಾಗಿದೆ. ಇದೊಂದು ತಾಲೂಕಿನಲ್ಲಿ ಅಷ್ಟೇ ಅಲ್ಲದೇ ಉಳಿದ ಬಹುತೇಕ ಕಡೆ ಶುದ್ಧ ನೀರಿನ ಘಟಕಗಳು ಬಂದ್ ಇರುವುದು ಈದಿನ.ಕಾಮ್ ಅಭಿಯಾನದಲ್ಲಿ ಬೆಳಕಿಗೆ ಬಂದಿದೆ.
ಅಧಿಕಾರಿಗಳ ನಿರ್ಲಕ್ಷ್ಯ; ಪಾಳು ಬಿದ್ದ ಘಟಕಗಳು :
ಸರ್ಕಾರ ಘಟಕವೊಂದಕ್ಕೆ ಅಂದಾಜು ₹12 ಲಕ್ಷ ರೂ. ವೆಚ್ಚದಿಂದ ಶುದ್ಧ ನೀರಿನ ಘಟಕ ನಿರ್ಮಿಸಿ ಹಲವು ವರ್ಷಗಳೇ ಕಳೆದಿವೆ. ಆದರೆ ಅಧಿಕಾರಿಗಳ ನಿಷ್ಕಾಳಜಿ, ತಾಂತ್ರಿಕ ಸಮಸ್ಯೆ, ಸೂಕ್ತ ನಿರ್ವಹಣೆ ಕೊರತೆಯಿಂದ ಜನರಿಗೆ ಉಪಯೋಗಕ್ಕೆ ಬಾರದಂತಾಗಿವೆ. ಕೆಲವು ಗ್ರಾಮಗಳಲ್ಲಿ ಶುದ್ಧ ನೀರಿನ ಘಟಕಗಳು ನಿರ್ಮಿಸಿದಾಗಿನಿಂದ ಬಾಗಿಲು ತೆರೆದಿಲ್ಲ. ಇನ್ನು ಹಲವೆಡೆ ಘಟಕಗಳ ಸುತ್ತ ಗಿಡಗಂಟಿಗಳು ಬೆಳೆದುಕೊಂಡಿದ್ದು ಘಟಕದ ಬಳಿ ಹೋಗಲು ಜನ ಹೆದರುವ ಸ್ಥಿತಿ ಇದೆ.
ಶುದ್ಧ ಕುಡಿಯುವ ನೀರಿನ ಘಟಕಗಳೇ ಕಾಣದ ಹಲವು ಗ್ರಾಮಸ್ಥರು ಬೇರೆ ಊರಿಗೆ ತೆರಳಿ ಖಾಸಗಿಯವರ ಬಳಿ ಶುದ್ಧ ನೀರು ಖರೀಸುತ್ತಿದ್ದಾರೆ. ಔರಾದ್ ತಾಲೂಕಿನ ಬೋರ್ಗಿ(ಜೆ), ಜೋಜನಾ ಹಾಗೂ ಕಮಲನಗರ ತಾಲೂಕಿನ ಚಾಂದೋರಿ, ಬಸನಾಳ ಸೇರಿದಂತೆ ಕೆಲವು ಗ್ರಾಮ ಪಂಚಾಯಿತಿಗಳ ನಿರ್ವಹಣೆಯಿಂದ ಅಲ್ಲಿನ ಗ್ರಾಮಸ್ಥರಿಗೆ ರಿಯಾಯಿತಿ ದರದಲ್ಲಿ ಶುದ್ಧ ಕುಡಿಯುವ ನೀರು ಸಿಗುತ್ತಿದೆ.

ʼಪ್ರತಿ ವರ್ಷ ಜಿಲ್ಲೆಯ ಜನ ಬೇಸಿಗೆಯ ಬಿಸಿಲಿನ ಪ್ರಖರತೆಗೆ ತತ್ತರಿಸುತ್ತಾರೆ. ಬೇಸಿಗೆ ಬಂದರೆ ಸಾಕು ಜಿಲ್ಲೆಯ ನೂರಕ್ಕೂ ಅಧಿಕ ಹಳ್ಳಿಗಳಲ್ಲಿ ನೀರಿನ ಸಮಸ್ಯೆ ಉಲ್ಬಣಗೊಳ್ಳುತ್ತದೆ. ನೀರಿಗಾಗಿ ಹಗಲಿರುಳು ಅಲೆದಾಡುವುದು, ಕೆಲವು ತಾಂಡದ ಜನರು ನೀರಿಗಾಗಿ ಪಕ್ಕದ ತೆಲಂಗಾಣಕ್ಕೆ ನಡೆದುಕೊಂಡು ಹೋಗುವ ದುಸ್ಥಿತಿ ಪ್ರತಿ ವರ್ಷ ತಾಂಡವಾಡುತ್ತದೆ. ಅದಕ್ಕೆ ಶಾಶ್ವತ ಪರಿಹಾರ ಹುಡುಕಲು ಪ್ರಯತ್ನಿಸದ ಜನಪ್ರತಿನಿಧಿಗಳು, ಅಧಿಕಾರಿಗಳು ʼಟ್ಯಾಂಕರ್ ನೀರುʼ ಒದಗಿಸುವ ʼಪರಿಹಾರʼ ಕಂಡುಕೊಂಡು ಕೈತೊಳೆದುಕೊಳ್ಳುವುದು ಬಿಟ್ಟರೆ ಮುಂದಿನ ಬೇಸಿಗೆಯಲ್ಲಿ ಉದ್ಭವಿಸುವ ನೀರಿನ ಸಮಸ್ಯೆ ಬಗ್ಗೆ ಯಾರೊಬ್ಬರೂ ತಲೆಕೆಡಿಸಿಕೊಳ್ಳದೇ ಇರುವುದು ವಿಪರ್ಯಾಸದ ಸಂಗತಿʼ ಎಂದು ಪ್ರಜ್ಞಾವಂತ ನಾಗರಿಕರ ಅಭಿಮತ.
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಇಇ ರಾಮಲಿಂಗ ಬಿರಾದರ್ ಅವರನ್ನು ವಿಚಾರಿಸಿದಾಗ, ʼಈ ಬಗ್ಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ಅವರೊಂದಿಗೆ ಈಗಾಗಲೇ ಸಭೆಯಾಗಿದೆ. ಎಲ್ಲ ಘಟಕಗಳು ಸಮೀಕ್ಷೆ ನಡೆಸಲು ತಿಳಿಸಿದ್ದಾರೆ. ವರದಿ ಆಧರಿಸಿ ಘಟಕಗಳ ನಿರ್ವಹಣೆಗೆ ಕ್ರಮ ಕೈಗೊಳ್ಳಲಾಗುವುದುʼ ಎಂದು ಮಾಹಿತಿ ನೀಡಿದರು.
ʼಸರ್ಕಾರ ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ನಿರ್ಮಿಸಿದ ಬಹುತೇಕ ಶುದ್ಧ ನೀರಿನ ಘಟಕಗಳು ಸೂಕ್ತ ನಿರ್ವಹಣೆಯಿಲ್ಲದೆ ಬಾಗಿಲು ಮುಚ್ಚಿವೆ. ಹಲವು ಬಾರಿ ಮನವಿ ಸಲ್ಲಿಸಿದರೂ ಕ್ಯಾರೇ ಎನ್ನದ ಅಧಿಕಾರಿಗಳು ಏನಾದರೂ ನೆಪ ಹೇಳಿ ಜಾರಿಕೊಳ್ಳುತ್ತಾರೆ. ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಲಕ್ಷಾಂತರ ರೂ. ವೆಚ್ಚದ ಘಟಕಗಳು ಜನರಿಗೆ ಉಪಯೋಗಕ್ಕೆ ಬಾರದೇ ಹಾಳಾಗುತ್ತಿವೆ. ಕೂಡಲೇ ಅವುಗಳನ್ನು ದುರಸ್ತಿಪಡಿಸಿ ಜನರಿಗೆ ಅನುಕೂಲ ಮಾಡಿಕೊಡಬೇಕುʼ ಎಂದು ಹುಮನಾಬಾದ್ ತಾಲೂಕಿನ ಭೀಮರೆಡ್ಡಿ ಸಿಂಧನಕೇರಾ ಈದಿನ.ಕಾಮ್ ಜೊತೆ ಮಾತನಾಡಿ ಆಗ್ರಹಿಸಿದರು.

ʼಕೆಲವು ಕಡೆ ಘಟಕಗಳು ಚನ್ನಾಗಿದ್ದರೂ ನೀರಿನ ಮೂಲ ಇಲ್ಲದಕ್ಕೆ ಕಾರ್ಯನಿರ್ವಹಿಸುತ್ತಿಲ್ಲ. ನಿರ್ವಹಣೆಗೆ ಬೇಕಾದ ಖರ್ಚು-ವೆಚ್ಚ ಇಲಾಖೆಯಿಂದ ಬರುತ್ತಿಲ್ಲ. ಕರ ವಸೂಲಿ ಹಣದಿಂದ ನಿರ್ವಹಣೆ ಮಾಡಬೇಕಾಗುತ್ತದೆ. ಘಟಕಗಳ ನಿರ್ವಹಣೆಗೆ ಒಬ್ಬರು ಅಗತ್ಯವಿದೆ. ಹೀಗಾಗಿ ಹಲವೆಡೆ ಶುದ್ಧ ನೀರಿನ ಘಟಕಗಳಿದ್ದರೂ ಜನರಿಗೆ ಉಪಯೋಗ ಇಲ್ಲದಂತಾಗಿದೆ ಎಂದು ಜಿಲ್ಲೆಯ ಪಿಡಿಒಯೊಬ್ಬರು ಮಾಹಿತಿ ನೀಡುತ್ತಾರೆ.
ಈ ಸುದ್ದಿ ಓದಿದ್ದೀರಾ? ಚಿಕ್ಕಮಗಳೂರು | ಆಸ್ತಿಗಾಗಿ ಸಹೋದರನನ್ನೇ ಕೊಲೆಗೈದ ಸಹೋದರಿಯರು!
ʼಆಗಾಗ ಬರಕ್ಕೆ ತುತ್ತಾಗುತ್ತಿರುವ ಜಿಲ್ಲೆಯಲ್ಲಿ ಬೇಸಿಗೆಯಲ್ಲಿ ನೀರಿನ ಸಮಸ್ಯೆಯಾದರೆ, ಮಳೆಗಾಲದಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥರಾದ ಘಟನೆಗಳು ಕಳೆದ ವರ್ಷ ನಡೆದಿದ್ದವು. ಶುದ್ಧ ಕುಡಿಯುವ ನೀರು ಪೂರೈಸುವಲ್ಲಿ ವಿಫಲರಾದ ಸಂಬಂಧಪಟ್ಟ ತಾ.ಪಂ.ಇಒ, ಪಿಡಿಒ ಅಮಾನತುಗೊಂಡಿದ್ದರು. ಇತ್ತೀಚೆಗೆ ಕಮಲನಗರ ತಾಲೂಕಿನ ಗ್ರಾಮವೊಂದರಲ್ಲಿ ಕುಡಿಯುವ ನೀರಿನಲ್ಲಿ ಕಪ್ಪೆ ಮರಿಗಳು ಕಂಡು ಬಂದ ಘಟನೆ ನಡೆದಿತ್ತು.
ಆಡಳಿತ ವ್ಯವಸ್ಥೆ ಇಂತಹ ಘಟನೆಗಳು ಗಂಭೀರವಾಗಿ ಪರಿಗಣಿಸಿ ಮರುಕಳಿಸದಂತೆ ಎಚ್ಚರ ವಹಿಸಿದರೆ ಜನರು ನೆಮ್ಮದಿಯ ನಿಟ್ಟುಸಿರು ಬಿಡಬಹುದು. ಆದರೆ ಗ್ರಾಮೀಣ ಜನರಿಗೆ ಶುದ್ಧ ನೀರು ಪೂರೈಸಲು ಸರ್ಕಾರ ಕೋಟ್ಯಾಂತರ ರೂಪಾಯಿ ಖರ್ಚು ಮಾಡಿದರೂ ಅಧಿಕಾರಿಗಳ ನಿರ್ಲಕ್ಷಿಸಿದಿಂದಾಗಿ ಹೇಗೆ ಹಳ್ಳ ಹಿಡಿದಿದೆ ಎನ್ನುವುದಕ್ಕೆ ಜಿಲ್ಲೆಯಲ್ಲಿನ ಶುದ್ಧ ಕುಡಿಯುವ ನೀರಿನ ಘಟಕಗಳೇ ಸಾಕ್ಷಿ ಎನ್ನಬಹುದು.

ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.
ಭಾಲ್ಕಿ ತಾಲೂಕಿನ ಚಳಕಾಪುರ(3 ತಿಂಗಳಿಂದ) ಮತ್ತು ಚಿಕಲಚೆಂದ(ಸುಮಾರು 40ತಿಂಗಳಿಂದ) ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ದುರುಸ್ಥಿಯಲ್ಲಿದೆ. ಅಧಿಕಾರಿಗಳ ಗಮನಕ್ಕೂ ತಂದರೂ ಯಾವುದೇ ಪ್ರಯೋಜನವಾಗಿಲ್ಲ