ಹುಮನಾಬಾದ್ ತಾಲೂಕಿನ ಬೋತಗಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಸ್ವಂತ ಕಟ್ಟಡವಿಲ್ಲ. ಇರುವ ಕೊಠಡಿಗಳು ಶಿಥಿಲಾವಸ್ಥೆಗೆ ತಲುಪಿವೆ. ಹೀಗಾಗಿ ಕಳೆದೆರಡು ವರ್ಷಗಳಿಂದ ಲಕ್ಷ್ಮಿದೇವಿ ದೇವಸ್ಥಾನದಲ್ಲಿ ಕುಳಿತು ಪಾಠ-ಪ್ರವಚನ ಕೇಳುತ್ತಿದ್ದಾರೆ.
ಶಾಲೆಯಲ್ಲಿ 1ರಿಂದ 5ನೇ ತರಗತಿವರೆಗೆ ಒಟ್ಟು 17 ಮಕ್ಕಳು ಓದುತ್ತಿದ್ದಾರೆ. ಇಬ್ಬರು ಶಿಕ್ಷಕರಿದ್ದಾರೆ. ಹಲವು ದಶಕಗಳ ಹಿಂದೆ ನಿರ್ಮಿಸಿದ್ದ ಕೊಠಡಿಗಳು ಸಂಪೂರ್ಣವಾಗಿ ಶಿಥಿಲಗೊಂಡಿದ್ದು, ಮಳೆಗಾಲದಲ್ಲಿ ಸೋರುತ್ತಿವೆ. ಸದ್ಯ ಒಂದೂ ಕೊಠಡಿ ಇಲ್ಲದಿದ್ದರಿಂದ ಇಲ್ಲಿನ ಮಕ್ಕಳಿಗೆ ಶಾಲೆ ಎದುರಿನ ಲಕ್ಷ್ಮಿ ದೇವಸ್ಥಾನವೇ ತರಗತಿ ಕೋಣೆಯಾಗಿ ಪರಿವರ್ತನೆಯಾಗಿದೆ.
ಒಂದೇ ಕಡೆ ನಾಲ್ಕು ತರಗತಿ
ಈ ಹಿಂದೆ 1ರಿಂದ 7ನೇ ತರಗತಿವರೆಗೆ ಶಾಲೆ ಇತ್ತು. ಆದರೆ, ಶಾಲೆಗೆ ಕೊಠಡಿ, ಆಟದ ಮೈದಾನ, ಕಾಂಪೌಂಡ್ ಸೇರಿ ಇತರ ಮೂಲ ಸೌಕರ್ಯ ಕೊರತೆಯಿಂದಾಗಿ ದಾಖಲಾತಿ ಕುಸಿದಿತ್ತು. ಹೀಗಾಗಿ 2015ರಿಂದ ಇಲ್ಲಿ 1 ರಿಂದ 5ನೇ ತರಗತಿವರೆಗೆ ಮಾತ್ರ ಶಾಲೆ ನಡೆಯುತ್ತಿದೆ.

ಶಾಲೆಯ ಎರಡು ಕೊಠಡಿಗಳ ಮೇಲ್ಛಾವಣಿ ಬಿರುಕು ಬಿಟ್ಟು ಕುಸಿಯುವ ಹಂತಕ್ಕೆ ತಲುಪಿವೆ. ಹೀಗಾಗಿ ಪಕ್ಕದ ಅಂಗನವಾಡಿ ಕೇಂದ್ರದ ಖಾಲಿ ಕೋಣೆಯೊಂದರಲ್ಲಿ ಓರ್ವ ಶಿಕ್ಷಕರು ನಾಲ್ಕು ತರಗತಿ ನಡೆಸಿದರೆ, ಇನ್ನೋರ್ವ ಶಿಕ್ಷಕರು ಉಳಿದ ತರಗತಿ ಮಕ್ಕಳಿಗೆ ಲಕ್ಷ್ಮಿದೇವಿ ದೇವಸ್ಥಾನದಲ್ಲಿ ಬೋಧಿಸಲು ವ್ಯವಸ್ಥೆ ಮಾಡಿಕೊಂಡಿದ್ದಾರೆ.
ಆಟದ ಮೈದಾನ, ಶೌಚಾಲಯ ಇಲ್ಲ:
ಈ ಶಾಲೆ ಗ್ರಾಮದ ಹೃದಯಭಾಗದಲ್ಲಿದೆ. ಈ ಹಿಂದೆ ರಸ್ತೆಗೆ ಅಂಟಿಕೊಂಡೇ ಕೋಣೆಗಳು ನಿರ್ಮಿಸಿದ್ದ ಕಾರಣ ಕಾಂಪೌಂಡ್ ನಿರ್ಮಿಸಲೇ ಇಲ್ಲ. ಇನ್ನು ಆಟದ ಮೈದಾನ, ಪ್ರತ್ಯೇಕ ಶೌಚಾಲಯ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯೂ ಇಲ್ಲವಾದ ಪರಿಣಾಮ ಮಕ್ಕಳು ಶೌಚಕ್ಕೆ ಮನೆಗೆ ತೆರಳಬೇಕಾದ ಅನಿವಾರ್ಯತೆ ಇದೆ.
“ಶಾಲೆಗೆ ಮೌಲ ಸೌಕರ್ಯ ಕೊರತೆ ಇರುವ ಪೋಷಕರು ಗ್ರಾಮದ ಶಾಲೆಯ ಮೇಲೆ ನಿರುತ್ಸಾಹ ತೋರಿ ಖಾಸಗಿ ಶಾಲೆಗಳ ಕಡೆ ಮುಖ ಮಾಡಿದ್ದಾರೆ. ಇದರಿಂದ ಶಾಲೆಯ ದಾಖಲಾತಿ ವರ್ಷದಿಂದ ವರ್ಷಕ್ಕೆ ಕುಸಿಯುತ್ತಿದೆ. ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ 1ನೇ ತರಗತಿಗೆ ಕೇವಲ 3 ವಿದ್ಯಾರ್ಥಿಗಳು ಮಾತ್ರ ಪ್ರವೇಶ ಪಡೆದಿದ್ದಾರೆ. ಹೀಗೆ ಮುಂದುವರೆದರೆ ಶಾಲೆ ಮುಚ್ಚುಬೇಕಾದ ಪರಿಸ್ಥಿತಿ ಬರುತ್ತದೆ” ಎನ್ನುತ್ತಾರೆ ಗ್ರಾಮಸ್ಥರು.

ʼಶಾಲೆಗೆ ಒಂದೂ ಕೋಣೆಗಳಿಲ್ಲ. ಹೀಗಾಗಿ ಪಕ್ಕದ ಅಂಗನವಾಡಿ ಕೋಣೆ ಹಾಗೂ ಲಕ್ಷ್ಮೀದೇವಿ ದೇವಸ್ಥಾನದಲ್ಲಿ ಕೂರಿಸಿ ತರಗತಿ ನಡೆಸಬೇಕಾದ ಪರಿಸ್ಥಿತಿ ಬಂದೊದಗಿದೆ. ಹೊಸ ಕಟ್ಟಡ ನಿರ್ಮಿಸುವಂತೆ ಶಿಕ್ಷಣ ಇಲಾಖೆಗೆ ಪತ್ರ ಬರೆಯಲಾಗಿದೆʼ ಎಂದು ಶಿಕ್ಷಕರು ಮಾಹಿತಿ ನೀಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ವಿಶೇಷ | ಅಂಬಾನಿ ಪುತ್ರನ ವಿವಾಹೋತ್ಸವವೂ ಹಸಿವಿನ ಅಣಕವೂ
ʼಬೋತಗಿ ಪ್ರಾಥಮಿಕ ಶಾಲೆಗೆ ಕಟ್ಟಡ ಸಮಸ್ಯೆ ಗಮನಕ್ಕೆ ಬಂದಿದೆ. ಕೆಕೆಆರ್‌ಡಿಬಿ ಯೋಜನೆಯಡಿ ಒಂದು ಹೊಸ ಕಟ್ಟಡ ಮಂಜೂರಾಗಿದೆ. ಶಿಥಿಲಗೊಂಡ ಕೊಠಡಿಗಳ ದುರಸ್ತಿ ಕಾರ್ಯ ನಡೆಸಲಾಗುವುದುʼ ಎಂದು ಹುಮನಾಬಾದ್ ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶ ಗುಡಾಳ್ ಈ ದಿನ.ಕಾಮ್ ಜೊತೆ ಮಾತನಾಡಿ ಹೇಳಿದರು.

ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.