ಭಾಲ್ಕಿ ಪಟ್ಟಣದ ಸರ್ವೇ ನಂ. 180 ಜಾಗ ಕಾನೂನು ಬಾಹಿರ ತಡರಾತ್ರಿ ತೆರವುಗೊಳಿಸಿ ವಯೋವೃದ್ಧ ಶಕುಂತಲಾ ಬಳತೆ ಮತ್ತು ಅವರ ಸೊಸೆ ನ್ಯಾಯವಾದಿ ಧನಲಕ್ಷ್ಮಿ ಬಳತೆ ಅವರನ್ನು ತಡರಾತ್ರಿ ಬಂಧಿಸಿ ಖಾಸಗಿ ವಾಹನದಲ್ಲಿ ಕರೆದ್ಯೊಯ್ದು ಮಾನಸಿಕ ಹಿಂಸೆ ಕೊಟ್ಟ ಅಧಿಕಾರಿಗಳನ್ನು ಕೂಡಲೇ ಅಮಾನತ್ತುಗೊಳಿಸಿ ತನಿಖೆ ಕೈಗೊಳ್ಳಬೇಕೆಂದು ಒತ್ತಾಯಿಸಿ ಸಾಮಾಜಿಕ ಕಾರ್ಯಕರ್ತ ಓಂಪ್ರಕಾಶ ರೊಟ್ಟೆ ವಿಭಿನ್ನ ರೀತಿಯಲ್ಲಿ ಏಕಾಂಗಿ ಪ್ರತಿಭಟನೆ ನಡೆಸಿದರು.
ಬೀದರ್ ನಗರದ ಬಸವೇಶ್ವರ ವೃತ್ತದಿಂದ ಭಗತ್ ಸಿಂಗ್ ವೃತ್ತ, ಡಾ. ಬಿ.ಆರ್. ಅಂಬೇಡ್ಕರ್ ವೃತ್ತ, ಶಿವಾಜಿ ವೃತ್ತದ ಮಾರ್ಗವಾಗಿ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಕಪ್ಪು ಬಟ್ಟೆ ಧರಿಸಿ ಜಿಲ್ಲಾಡಳಿತ ಹಾಗೂ ಉಸ್ತುವಾರಿ ಸಚಿವರ ವಿರುದ್ಧ ಏಕಾಂಗಿಯಾಗಿ ಪ್ರತಿರೋಧ ವ್ಯಕ್ತಪಡಿಸಿ ಅವರು ಮುಖ್ಯಮಂತ್ರಿಗಳಿಗೆ ಬರೆದ ಹಕ್ಕೊತ್ತಾಯ ಪತ್ರವನ್ನು ಅಪರ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ ಅವರಿಗೆ ಸಲ್ಲಿಸಿದರು.
“ಬೀದರ್ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆಯವರ ಮನೆ ಸಮೀಪದ ಸರ್ವೇ ನಂ.180 ಜಮೀನಿನ ವಿವಾದ ಭಾಲ್ಕಿ ಕೋರ್ಟಿನಲ್ಲಿ ಮೊಕದಮ್ಮೆಯಿದ್ದು, ಇದಕ್ಕೆ ತಡೆಯಾಜ್ಞೆ ಇದೆ. ಆದರೆ ಭಾಲ್ಕಿ ತಾಲೂಕು ಆಡಳಿತ ಕಾನೂನು ಗಾಳಿಗೆ ತೂರಿ ತಮ್ಮ ನೇತ್ರತ್ವದಲ್ಲಿ ಸದರಿ ಜಾಗ ತೆರವುಗೊಳಿಸಿ ಖಂಡನೀಯವಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ಧರ್ಮದ ಮಾರಾಟಗಾರರ ಎಡಬಿಡಂಗಿತನದ ಅನಾವರಣ: ಸಾಣೇಹಳ್ಳಿ ಶ್ರೀಗಳ ಲೇಖನ
“ಬಸವಾದಿ ಶರಣರ ಕಲ್ಯಾಣ ನೆಲದಲ್ಲಿ ಮಹಿಳೆಯರಿಗೆ ಅವಮಾನಿಸಿದ್ದು ತೀರಾ ಖಂಡನೀಯ. ಜನ ಪ್ರತಿನಿಧಿಗಳ ಒತ್ತಡಕ್ಕೆ ಮಣಿದು ಪ್ರಜಾಪ್ರಭುತ್ವದ ಕಗ್ಗೊಲೆಗೆ ಮುಂದಾಗಿ ಮಹಿಳೆಯರನ್ನು ಮಧ್ಯರಾತ್ರಿ ಬಂಧಿಸಿ ಅವಮಾನಿಸಿದ ಭಾಲ್ಕಿ ತಹಸೀಲ್ದಾರ್, ಸೇರಿದಂತೆ ಭಾಲ್ಕಿ ತಾಲೂಕು ಆಡಳಿತ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಜಿಲ್ಲಾಧಿಕಾರಿ ಸೇರಿದಂತೆ ಈ ಘಟನೆಯಲ್ಲಿ ಭಾಗಿಯಾದ ಅಧಿಕಾರಿಗಳನ್ನು ಕೂಡಲೇ ಅಮಾನತುಗೊಳಿಸಿ ಸೂಕ್ತ ತನಿಖೆ ನಡೆಸಬೇಕು. ಬೀದರ್ ಜಿಲ್ಲಾ ಉಸ್ತುವಾರಿ ಸಚಿವರ ಮನೆಯ ಸಮೀಪದಲ್ಲೇ ಇಂತಹ ಅಮಾನವೀಯ ಕರಾಳ ಘಟನೆ ನಡೆದಿರುವುದು ದುರ್ದೈವದ ಸಂಗತಿ, ಆದ್ದರಿಂದ ಸಚಿವ ಈಶ್ವರ ಖಂಡ್ರೆ ಅವರನ್ನು ಸಚಿವ ಸಂಪುಟದಿಂದ ಕೈಬಿಡಬೇಕೆಂದು” ಮುಖ್ಯಮಂತ್ರಿಗಳಿಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿ ಆಗ್ರಹಿಸಿದರು.