ತರಗತಿಯಲ್ಲಿ ಪಾಠ ಮಾಡುವಾಗ ಉಪನ್ಯಾಸಕನೊಬ್ಬ ಪ್ರವಾದಿ ಮಹಮ್ಮದ್ ಪೈಗಂಬರ್ ಹಾಗೂ ಇಸ್ಲಾಂ ಧರ್ಮದ ಆಚರಣೆಗಳ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಅವರ ವಿರುದ್ಧ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿರುವ ಘಟನೆ ಬಳ್ಳಾರಿಯ ಶ್ರೀ ಮೇಧ ಕಾಲೇಜಿನಲ್ಲಿ ನಡೆದಿದೆ.
ಕಾಲೇಜಿನ ಉಪನ್ಯಾಸಕ ಯು.ಎಸ್.ಗೌಡ ವಿರುದ್ದ ಮುಸ್ಲಿಂ ವಿದ್ಯಾರ್ಥಿಗಳು ಹಾಗೂ ವಿವಿಧ ಸಂಘಟನೆಗಳ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಉಪನ್ಯಾಸಕ ತರಗತಿಯಲ್ಲಿ ಪಾಠ ಮಾಡುವ ವೇಳೆ ಮುಸ್ಲಿಂ ಸಮುದಾಯದ ಧಾರ್ಮಿಕ ಹಕ್ಕು, ಆಚಾರ, ವಿಚಾರ, ಜೀವನ ಶೈಲಿಯ ಬಗ್ಗೆ ಕೆಟ್ಟದಾಗಿ ನಿಂದಿಸಿದ್ದಾರೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.
“ಪ್ರವಾದಿ ಅವರು ನಾಲ್ಕು ಮದುವೆ ಮಾಡಿಕೊಂಡಿದ್ದಾರೆ. ನೀವು ಹಾಗೆ ಮಾಡಬೇಡಿ” ಎಂದು ಪಾಠದಲ್ಲಿ ಇರದ ವಿಚಾರಗಳನ್ನು ವಿದ್ಯಾರ್ಥಿಗಳಿಗೆ ಬೋಧಿಸಿದ್ದಾರೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ಉಪನ್ಯಾಸಕರ ವಿರುದ್ದ ಕ್ರಮಕ್ಕೆ ಒತ್ತಾಯಿಸಿದರು.
ವಿದ್ಯಾರ್ಥಿಗಳ ಪ್ರತಿಭಟನೆ ಜೋರಾಗುತ್ತಿದ್ದಂತೆ ಉಪನ್ಯಾಸಕ ಕ್ಷಮೆ ಕೋರಿದ್ದಾರೆ ಎಂದು ತಿಳಿದು ಬಂದಿದೆ. ಆದರೆ ಇಂತಹ ಶಿಕ್ಷಕರು ನಮಗೆ ಬೇಡವೇ ಬೇಡ ಎಂದು ವಿದ್ಯಾರ್ಥಿಗಳು ಪಟ್ಟು ಹಿಡಿದು ವಾಗ್ವಾದ ನಡೆಸಿದರು. ನಂತರ ಮುಸ್ಲಿಂ ಸಮುದಾಯದ ಯುವಕರು, ವಿದ್ಯಾರ್ಥಿಗಳು ಎಸ್.ಪಿ. ಕಚೇರಿ ಮುಂಭಾಗದಲ್ಲಿ ಜಮಾವಣೆಗೊಂಡು ಕೆಲಕಾಲ ಪ್ರತಿಭಟನೆ ನಡೆಸಿದರು. ತಕ್ಷಣ ಮನವಿಗೆ ಸ್ಪಂದಿಸಿದ ಪೊಲೀಸ್ ಇನ್‌ಸ್ಪೆಕ್ಟರ್ ಸುಭಾಷ್ ಎಫ್ಐರ್ ದಾಖಲಿಸಿಕೊಂಡು ಮುಸ್ಲಿಂ ಮುಖಂಡರಿಗೆ ಮತ್ತು ಭೀಮ್ ಆರ್ಮಿ ಸಂಘಟನೆ ಪ್ರಮುಖರಿಗೆ ದೂರು ಪ್ರತಿ ನೀಡಿದ ನಂತರ ಶಾಂತಿಯುತವಾಗಿ ಪ್ರತಿಭಟನೆ ಹಿಂತೆಗೆದುಕೊಂಡರು.
ಈ ಸುದ್ದಿ ಓದಿದ್ದೀರಾ? ಬಸವಣ್ಣನವರನ್ನು ರಾಜ್ಯದ ಸಾಂಸ್ಕೃತಿಕ ನಾಯಕನೆಂದು ಘೋಷಿಸಿ: ಅನುಭವ ಮಂಟಪ ಆಗ್ರಹ
ಈ ಸಂದರ್ಭದಲ್ಲಿ ಮುಖಂಡರುಗಳಾದ ಅಯಾಜ್ ಅಹ್ಮದ್, ಅಲ್ಲಭಕಾಶ, ಖಾಲಿಲ್, ಬಾಯ, ಖಾಜಾ ಖಾನ್ ತನ್ವಿರ್ ಮತ್ತು ಭೀಮ್ ಆರ್ಮಿ ಸಂಘಟನೆಯ ಗಜೇಂದ್ರವರ್ಮ, ವೆಂಕಟೇಶ್, ರಘು ಹರಿಕೃಷ್ಣ ಸೇರಿದಂತೆ ಹಲವಾರು ಜನ ಉಪಸ್ಥಿತರಿದ್ದರು