ಸಾಕು ನಾಯಿಗಳ ಮೇಲೆ ಚಿರತೆ ದಾಳಿ ನಡೆಸಿರುವ ಘಟನೆ ಹಾಸನ ಜಿಲ್ಲೆ ಹೊಳೆನರಸೀಪುರ ತಾಲೂಕಿನ ದಾಳ ಗೌಡನಹಳ್ಳಿ ಗ್ರಾಮದಲ್ಲಿ ನಡೆದಿದೆ.
ದಾಳ ಗೌಡನಹಳ್ಳಿ ಗ್ರಾಮದ ಯೋಗೇಶ್ ಎಂಬುವರು ಮನೆಯಲ್ಲಿ ಸಾಕು ನಾಯಿಗಳನ್ನು ಸಾಕಿದ್ದರು. ಎಂದಿನಂತೆ ಸಾಕು ನಾಯಿಗಳನ್ನು ಕೊಟ್ಟಿಗೆಯಲ್ಲಿ ಬಿಟ್ಟಿದ್ದರು. ಕೊಟ್ಟಿಗೆಯಲ್ಲಿದ್ದ ಸಾಕು ನಾಯಿಗಳ ಮೇಲೆ ಚಿರತೆ ದಾಳಿ ನಡೆಸಿದೆ.
ಕೊಟ್ಟಿಗೆಯಲ್ಲಿದ್ದ ಶ್ವಾನಗಳು ಬೊಬ್ಬಿಡುತ್ತಿದ್ದನ್ನು ಕಂಡ ಮನೆಯವರು ಕೊಟ್ಟಿಗೆ ಬಾಗಿಲು ತೆರೆಯುತ್ತಿದ್ದಂತೆ ಚಿರತೆ ಕಂಡು ಭಯಭೀತರಾಗಿದ್ದಾರೆ. ಜನರನ್ನು ಕಂಡ ಚಿರತೆ ಅಲ್ಲಿಂದ ಓಡಿ ಹೋಗಿದೆ. ಆದರೆ ಅಷ್ಟರಲ್ಲೇ ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದ ಎರಡು ನಾಯಿಗಳು ಕೂಡ ಸಾವನ್ನಪ್ಪಿದೆ.
ಈ ಹಿಂದೆ ಸಹ ಇದೆ ಕೊಟ್ಟಿಗೆಯಲ್ಲಿ ಚಿರತೆ ಪ್ರತ್ಯಕ್ಷವಾಗಿತ್ತು, ಇದೀಗ ಮತ್ತೊಮ್ಮೆ ಚಿರತೆ ದಾಳಿ ನಡೆದಿರುವುದು ಮನೆಯವರನ್ನು ಆತಂಕಕ್ಕೀಡುಮಾಡಿದೆ. ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಚಿರತೆ ಸೆರೆಗೆ ಬೋನಿರಿಸಿ ಕಾರ್ಯಾಚರಣೆ ನಡೆಸುವುದಾಗಿ ತಿಳಿಸಿದ್ದಾರೆ.
ಇದನ್ನೂ ಓದಿದ್ದೀರಾ?ಹಾಸನ | ₹1.49 ಕೋಟಿ ಹಣ ದುರುಪಯೋಗ; ಗ್ರಾ.ಪಂ ಕಾರ್ಯದರ್ಶಿ ಪಿ ಎನ್ ಭುವನ್ ಅಮಾನತು
ಗ್ರಾಮದ ಸುತ್ತಮುತ್ತ ಚಿರತೆಯ ಹಾವಳಿ ಹೆಚ್ಚಾಗಿರುವುದರಿಂದ ಸುತ್ತಲಿನ ಗ್ರಾಮಸ್ಥರು ಭಯಭೀತರಾಗಿದ್ದಾರೆ. ಅರಣ್ಯ ಇಲಾಖೆಯ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುವಂತೆ ದಾಳ ಗೌಡಹಳ್ಳಿ ಗ್ರಾಮಸ್ಥರು ಅಧಿಕಾರಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.
