ಇಂದಿನ ಯುವಕರು ಯಾಂತ್ರಿಕ ಬದುಕಿನ ಕಡೆಗೆ ಹೆಚ್ಚು ವಾಲುತ್ತಿದ್ದಾರೆ. ತಾಳ್ಮೆ ಕಳೆದುಕೊಂಡು ಸಾಹಿತ್ಯ, ಸಂಸ್ಕೃತಿ ಮತ್ತು ಕಲೆಯನ್ನು ಮರೆಯುತ್ತಿದ್ದಾರೆ ಎಂದು ಅಪರ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ ಕಳವಳ ವ್ಯಕ್ತಪಡಿಸಿದರು.
ಕರ್ನಾಟಕ ಸಾಹಿತ್ಯ ಸಂಘ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಬೀದರ್ ನಗರದ ಕರ್ನಾಟಕ ಸಾಹಿತ್ಯ ಸಂಘದ ಸಾಂಸ್ಕೃತಿಕ ಭವನದಲ್ಲಿ ಜರುಗಿದ ಬಹುಭಾಷಾ ಕವಿಗೋಷ್ಠಿ ಉದ್ಘಾಟನೆ ನೆರವೇರಿಸಿ ಮಾತನಾಡಿ, ʼನಾವು ರಚಿಸುವ ಸಾಹಿತ್ಯ ವ್ಯಕ್ತಿಯ ಎದೆಗಿಳಿದು ಬದುಕು ಪರಿವರ್ತನೆ ಆಗುವಂತಿರಬೇಕು. ಇಂದಿನ ಕವಿಗೋಷ್ಠಿಗಳಲ್ಲಿ ಅಂತಹ ಸಾಹಿತ್ಯ ಮಾರ್ದನಿಸಿದ್ದು ಶ್ಲಾಘನೀಯʼ ಎಂದರು.
ʼಇಂದಿನ ಕವಿಗೋಷ್ಠಿಯಲ್ಲಿ ಬದುಕು, ಕೇರಳದ ವಯನಾಡಿನ ಮಳೆಯ ರೌದ್ರನರ್ತನ, ಪರಿಸರ, ಸ್ವಾತಂತ್ರ್ಯ ಮುಂತಾದ ವಿಷಯಗಳ ಮೇಲೆ ಬೆಳಕು ಚೆಲ್ಲುವ ಗಟ್ಟಿ ಕವಿತೆಗಳು ಮೂಡಿ ಬಂದಿದ್ದವು ಎಂದರು. 18 ವರ್ಷ ಮೇಲ್ಪಟ್ಟ ಯುವಕ, ಯುವತಿಯರು ಗುರುತಿನ ಚೀಟಿ ನೋಂದಣಿ ಮಾಡಿಸಿಕೊಳ್ಳಬೇಕುʼ ಎಂದು ಸಲಹೆ ನೀಡಿದರು.
ಕರ್ನಾಟಕ ಸಾಹಿತ್ಯ ಸಂಘದ ಅಧ್ಯಕ್ಷ ಡಾ.ಜಗನ್ನಾಥ ಹೆಬ್ಬಾಳೆ ಪ್ರಾಸ್ತಾವಿಕವಾಗಿ ಮಾತನಾಡಿ, ʼಮನುಷ್ಯ ಮನುಷ್ಯನಂತೆ ಬದುಕಲು ಸಾಹಿತ್ಯ ಸಹಕಾರಿಯಾಗಿದೆ. ಮೊಬೈಲ್‌ಗಳಲ್ಲಿ ಮಗ್ನರಾದ ಇಂದಿನ ಯುವಕರು ಸಾಹಿತ್ಯದ ಅಭಿರುಚಿ ಕಳೆದುಕೊಳ್ಳುತ್ತಿದ್ದಾರೆ. ಆದರೆ ಸಾಹಿತ್ಯ ರಚನೆಯಿಂದ ಸಹಕಾರ, ಸಹಾನುಭೂತಿ, ಸಹಯೋಗ ಮತ್ತು ಪ್ರೀತಿ, ವಾತ್ಸಲ್ಯ ಮೂಡುತ್ತದೆ. ಕವಿತೆಗಳು ವಾಸ್ತವತೆಯನ್ನು ಜನರ ಮುಂದಿಡುತ್ತವೆ, ಸಮಾಜವ ತಿದ್ದುವ ಕೆಲಸ ಮಾಡುತ್ತವೆ. ಯುವಕರಿಗೆ ಸಾಹಿತ್ಯ ಕುರಿತು ಒಲವು ಹೆಚ್ಚಾಗಲಿ ಎನ್ನುವ ಉದ್ದೇಶದಿಂದ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಕವಿಗೋಷ್ಠಿ ಆಯೋಜಿಸಲಾಗಿದೆʼ ಎಂದರು.

ಕವಿಗೋಷ್ಠಿಯಲ್ಲಿ ಮಹಿಳೆ, ಕೇರಳದ ವಯನಾಡಿನ ಅತಿವೃಷ್ಠಿ, ಆಗಸ್ಟ್ ಪಂದ್ರಾ, ನಮ್ಮನ್ನು ನಾವು ಪ್ರೀತಿಸಬೇಕು, ಆರ್.ವಿ.ಬಿಡಪ್ ಸಾಧನೆಗಳು, ಹೊಸ ನಿರ್ಭಯಾ ಎಂಬ ಕವಿತೆಗಳು ಮಾರ್ದನಿಸಿದವು. ಕವಿಗಳಾದ ಪ್ರೊ.ಎಸ್.ವಿ.ಕಲ್ಮಠ, ಭಾರತಿ ವಸ್ತ್ರದ್, ಡಾ. ಶ್ರೇಯಾ ಮಹಿಂದ್ರಕರ್, ರೂಪಾ ಪಾಟೀಲ, ಪುಷ್ಪ ಕನಕ, ಜಗದೇವಿ ದುಬಲಗುಂಡಿ, ಮಹಾರುದ್ರ ಡಾಕುಳಗಿ, ಅಸೃತ್ ಖಾದ್ರಿ, ಮಾರುತಿ ಭೀಮಣ್ಣ, ವೀರಶೆಟ್ಟಿ ಚೌಕನಪಳ್ಳಿ, ಡಾ. ಮಹಾದೇವಿ ಹೆಬ್ಬಾಳೆ, ಹಂಸಕವಿ, ಡಾ.ರಾಮಚಂದ್ರ ಗಣಾಪುರ, ಡಾ.ಮುಸ್ತಾಕಂ, ಮಲ್ಲಮ್ಮ ಸಂತಾಜಿ, ಡಾ.ಸಾವಿತ್ರಿ ಹೆಬ್ಬಾಳೆ ಸೇರಿದಂತೆ ಇನ್ನಿತರರು ಸ್ವರಚಿತ ಕವನ ವಾಚಿಸಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಒಳ್ಳೆಯ ಮನುಷ್ಯನಾಗಲು ಓದಿನ ಅಗತ್ಯವಿದೆ : ಡಾ.ಶಿವಾಜಿ ಮೇತ್ರೆ
ಸಮಾರಂಭದಲ್ಲಿ ಬೀದರ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಿ.ಎಸ್.ಬಿರಾದಾರ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಹೆಚ್ಚುವರಿ ಪೊಲೀಸ್ ಅಧೀಕ್ಷಕ ಮಹೇಶ ಮೇಘಣ್ಣವರ್, ಕರ್ನಾಟಕ ಸಾಹಿತ್ಯ ಸಂಘದ ಟ್ರಸ್ಟ್ ಅಧ್ಯಕ್ಷ ಶಂಕ್ರೆಪ್ಪ ಹೊನ್ನಾ, ಕಾರ್ಯಕ್ರಮದ ದಾಸೋಹಿ ಅಶೋಕ ಹೆಬ್ಬಾಳೆ, ಪ್ರಕಾಶ ಕನ್ನಾಳೆ ಉಪಸ್ಥಿತರಿದ್ದರು. ರಾಷ್ಟ್ರೀಯ ಜನಪದ ಬುಡಕಟ್ಟು ಕಲಾ ಪರಿಷತ್ತಿನ ಕಾರ್ಯದರ್ಶಿ ಡಾ.ರಾಜಕುಮಾರ ಹೆಬ್ಬಾಳೆ ಸ್ವಾಗತಿಸಿದರು. ಎಸ್.ಬಿ.ಕುಚಬಾಳ ನಿರೂಪಿಸಿದರು. ನಿಜಲಿಂಗಪ್ಪ ತಗಾರೆ ವಂದಿಸಿದರು.