ಕನ್ನಡವು ಅನ್ನದ ಭಾಷೆಯಾಗಬೇಕು. ಕನ್ನಡ ಕಲಿತವರಿಗೆ ಮಾತ್ರ ಕರ್ನಾಟಕದಲ್ಲಿ ಉದ್ಯೋಗ ದೊರಕುವ ಕಠಿಣ ಕಾನೂನು ತರುವಂತಾಗಬೇಕು ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಸದಸ್ಯ ಬಿ.ಹೆಚ್.ನಿರಗುಡಿ ಹೇಳಿದರು.
ಅತಿವಾಳೆ ಸಾಂಸ್ಕೃತಿಕ ಪ್ರತಿಷ್ಠಾನದಿಂದ ಭಾನುವಾರ ಬೀದರ್ ನಗರದ ಪೂಜ್ಯ ಡಾ.ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ಕನ್ನಡ ರಾಜ್ಯೋತ್ಸವ ನಿಮಿತ್ಯ ಆಯೋಜಿಸಿದ್ದ ಉಪನ್ಯಾಸ – ಸಾಂಸ್ಕೃತಿಕ ಹಾಗೂ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ʼಕನ್ನಡ ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಸರ್ಕಾರದ ಮೇಲೆ ಅವಲಂಬಿತರಾಗದೆ ನಾವೆಲ್ಲರೂ ಕನ್ನಡ ಕಡ್ಡಾಯವಾಗಿ ಬಳಸಿ ಸಂರಕ್ಷಣೆಗೆ ಮುಂದಾಗಬೇಕು. ನಮ್ಮ ಮಕ್ಕಳನ್ನು ಕನ್ನಡ ಮಾಧ್ಯಮದಲ್ಲಿಯೇ ಓದಿಸಿ ಮಾತ್ರ ಭಾಷೆ ಉಳಿಸುವ ನಮ್ಮ ಕರ್ತವ್ಯ ನಿರ್ವಹಿಸಬೇಕು. ಸಾಮಾಜಿಕ ಜಾಲತಾಣದ ಬೆಳವಣಿಗೆಯಿಂದಾಗಿ ಕನ್ನಡಕ್ಕೆ ಜಾಗತೀಕತೆಯ ಮನ್ನಣೆ ದೊರತಿದೆʼ ಎಂದರು.
ಶಿಕ್ಷಕ ಪ್ರಕಾಶ ದೇಶಮುಖ ವಿಶೇಷ ನೀಡಿ, ʼಸಾಹಿತಿಗಳು ತಮ್ಮ ಬದುಕು-ಬರಹ ಒಂದಾಗಿಸಿಕೊಳ್ಳದಿದ್ದರೆ ಸಮಾಜಕ್ಕೆ ಸೂಕ್ತ ಮಾರ್ಗದರ್ಶನ ದೊರೆಯುವುದಿಲ್ಲ. ಸಾಹಿತಿಗಳು, ಬರಹಗಾರರು ಸಾಮಾಜಿಕ ಸಮಸ್ಯೆಗಳಿಗೆ ಸ್ಪಂದಿಸಿ ಸಮಾಜ ತಿದ್ದುವ ಸಾಹಿತ್ಯ ರಚಿಸಬೇಕು. ಭಾವನೆಗಳನ್ನು ಮಾರಿಕೊಳ್ಳದೆ ಸತ್ವಯುತ ಬರಹದಿಂದ ಮುಂದಿನ ಜನಾಂಗಕ್ಕೆ ಮಾರ್ಗದರ್ಶನ ನೀಡಬೇಕುʼ ಎಂದರು.
ಅತಿವಾಳೆ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಡಾ.ಸಂಜೀವಕುಮಾರ ಅತಿವಾಳೆ ಕಾರ್ಯಕ್ರಮದ ಅಧ್ಯಕತೆ ವಹಿಸಿ ಮಾತನಾಡಿ, ʼಗಡಿ ಜಿಲ್ಲೆ ಬೀದರನಲ್ಲಿ ಪ್ರತಿಭೆಗಳ ಕೊರತೆ ಇಲ್ಲ. ಸೂಕ್ತ ಮಾರ್ಗದರ್ಶನ, ವೇದಿಕೆ ಸಿಗದಿರುವ ಕಾರಣಕ್ಕೆ ಪ್ರತಿಭಾವಂತ ಬರಹಗಾರರು ಸಮಾಜದ ಮುಖ್ಯವಾಹಿನಿಗೆ ಬರಲಾಗುತ್ತಿಲ್ಲ. ಅತಿವಾಳೆ ಸಾಂಸ್ಕೃತಿಕ ಪ್ರತಿಷ್ಠಾನದಿಂದ ನಿರಂತರವಾಗಿ ಸಾಹಿತ್ಯಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಆಯೋಜಿಸಿ ಹೊಸ ಪ್ರತಿಭೆಗಳಿಗೆ ಬೆಳಕಿಗೆ ತರುವ ಕೆಲಸ ಮಾಡುತ್ತಿದ್ದೇವೆʼ ಎಂದು ಹೇಳಿದರು.
ಕಾರ್ಯಕ್ರಮದ ಸಾನಿಧ್ಯ ವಹಿಸಿಕೊಂಡಿದ ಬೇಮಳಖೇಡ -ಗೋರ್ಟಾ ಹಿರೇಮಠ ಸಂಸ್ಥಾನದ ಡಾ. ರಾಜಶೇಖರ ಶಿವಾಚಾರ್ಯ ಮಾತನಾಡಿ, ʼಸಂಜೀವಕುಮಾರ ಅತಿವಾಳೆ ಪ್ರತಿಭಾವಂತ ಸಾಹಿತಿ, ಸಂಘಟಕರು, ಜಿಲ್ಲೆಯಲ್ಲಿ ನಿರಂತರವಾಗಿ ಕನ್ನಡ ಉಳಿಸುವ ಬೆಳೆಸುವ ನಿಟ್ಟಿನಲ್ಲಿ ಪ್ರಾಮಾಣಿಕ ಸೇವೆ ಸಲ್ಲಿಸುತ್ತಿದ್ದಾರೆ. ಇಂತಹವರಿಗೆ ಸಹಕಾರ ನೀಡಬೇಕಾದ ಅವಶ್ಯಕತೆ ಇದೆʼ ಎಂದು ಹೇಳಿದರು.

ಕಸಾಪ ಜಿಲ್ಲಾಧ್ಯಕ್ಷ ಸುರೇಶ ಚನ್ನಶೆಟ್ಟಿ ಮಾತನಾಡಿ, ʼಕನ್ನಡ ನಮ್ಮ ಅಸ್ಮಿತೆಯಾಗಿದೆ. ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಕನ್ನಡ ಭಾಷೆ ಮುಂದೆಯೂ ಇನ್ನಷ್ಟು ಸಮೃದ್ಧವಾಗಿ ಬೆಳೆದು ಉಳಿಯುತ್ತದೆ. ಅತಿವಾಳೆ ಪ್ರತಿಷ್ಠಾನದ ಕಾರ್ಯ ಸಮಾಜಕ್ಕೆ ಮಾದರಿಯಾಗಿದೆʼ ಎಂದರು.
ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ 69 ಸಾಧಕರಿಗೆ ವಿಶೇಷವಾಗಿ ಸನ್ಮಾನಿಸಲಾಯಿತು.
ನಾಟ್ಯಶ್ರೀ ನೃತ್ಯಾಲಯದ ನಿರ್ದೇಶಕರಾದ ರಾಣಿ ಸತ್ಯಮೂರ್ತಿ ನಿರ್ದೇಶನದಲ್ಲಿ ಕನ್ನಡ ಗೀತೆಗಳ ನೃತ್ಯೋತ್ಸವ, ಸವಿಗಾನ ಸಂಗೀತ ಅಕಾಡಮಿ ನಿರ್ದೇಶಕರಾದ ಭಾನುಪ್ರಿಯ ಅರಳಿ ಹಾಗೂ ಅವರ ತಂಡದಿಂದ ಕನ್ನಡ ಗೀತೆಗಳ ಗಾಯನೋತ್ಸವ ಹಾಗೂ ವಿವಿಧ ಶಾಲೆ ಮಕ್ಕಳಿಂದ ಜಾನಪದ ನೃತ್ಯ ಮತ್ತು ಕಲಾ ತಂಡಗಳಿಂದ ವೈವಿಧ್ಯಮಯವಾದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಈ ಸುದ್ದಿ ಓದಿದ್ದೀರಾ? ಜನವರಿಯೊಳಗೆ ಕಾಂಗ್ರೆಸ್ ಸರ್ಕಾರ ಬೀಳಲಿದೆ, ವಿ.ಸೋಮಣ್ಣ ವಾಸ್ತವ ಹೇಳಿದ್ದಾರೆ: ಹೆಚ್ ಡಿ ದೇವೇಗೌಡ
ಕಾರ್ಯಕ್ರಮದಲ್ಲಿ ಪ್ರಸಕ್ತ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹೀರಾಚಂದ ವಾಗ್ಮಾರೆ, ನಿವೃತ್ತ ಅಧಿಕಾರಿ ಪುಂಡಲೀಕರಾವ ಇಟಕಂಪಳ್ಳಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಿದ್ರಾಮ ಶಿಂಧೆ, ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಭಾರತಿ ವಸ್ತ್ರದ, ನಿವೃತ್ತ ಪ್ರಾಚಾರ್ಯ ಡಿ.ನಿಜಾಮುದ್ದೀನ್, ಜೆಸ್ಕಾಂ ಲೆಕ್ಕಾಧಿಕಾರಿ ಸುಮಂತ ಕಟ್ಟಿಮನಿ, ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ವಿಜಯಕುಮಾರ ಸೋನಾರೆ, ತಾಲೂಕು ಕಸಾಪ ಅಧ್ಯಕ್ಷ ಎಂ.ಎಸ್.ಮನೋಹರ, ಕನ್ನಡ ಪ್ರಗತಿ ಸಂಘದ ಅಧ್ಯಕ್ಷ ಉಮಾಕಾಂತ ಮೀಸೆ, ಸಂಘಟಕ ಸಂತೋಷಕುಮಾರ ಜೋಳದಾಪಗೆ, ಡಯಟ್ ಉಪನ್ಯಾಸಕಿ ಗೀತಾ ಎಸ್. ಗಡ್ಡಿ, ಅಖಿಲ ಭಾರತ ದಾಸ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ರವೀಂದ್ರ ಲಂಜವಾಡಕರ, ಕರುನಾಡು ಸಾಹಿತ್ಯ ವೇದಿಕೆಯ ಅಧ್ಯಕ್ಷ ಡಾ. ಶಾಮರಾವ ನೆಲವಾಡೆ, ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ಸುನೀಲ ಭಾವಿಕಟ್ಟಿ, ವೈಷ್ಣೋದೇವಿ ಸಾಂಸ್ಕೃತಿಕ ಟ್ರಸ್ಟ್ನ ಅಧ್ಯಕ್ಷ ಸಂಗಮೇಶ ಬಿರಾದಾರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಬಸವರಾಜ ಮೂಲಗೆ ಸ್ವಾಗತಿಸಿದರು, ದಿಲೀಪಕುಮಾರ ಮೋಘ ನಿರೂಪಿಸಿದರು. ಅಜಿತ ನೇಳಗೆ ವಂದಿಸಿದರು.