ಸ್ವತಂತ್ರ ಭಾರತದ ಇತಿಹಾಸದಲ್ಲಿ ಎಂದೂ ಕರ್ನಾಟಕ ರಾಜ್ಯಕ್ಕೆ ಮತ್ತು ರಾಜ್ಯದ ರೈತರಿಗೆ ಆಗಿರದ ಅವಮಾನವನ್ನು ಮಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಯಾವ ಮುಖ ಹೊತ್ತು ವೋಟು ಕೇಳಲು ಬರುತ್ತಿದ್ದಾರೆ ಎಂದು ಕರ್ನಾಟಕ ರಾಜ್ಯ ರೈತಸಂಘ ಪ್ರಶ್ನಿಸಿದೆ.
ಮೈಸೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ರೈತಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ, “122 ವರ್ಷಗಳಲ್ಲಿ ಇಲ್ಲದ ಬರವನ್ನು ಕರ್ನಾಟಕವು ಎದುರಿಸುತ್ತಿದೆ. ಬರ ಪರಿಹಾರಕ್ಕೆ ನಿಯಮಾನುಸಾರ ಮನವಿ ಮಾಡಿ 6 ತಿಂಗಳಾದರೂ, ಕನಿಷ್ಠ ಒಂದು ಸಭೆಯನ್ನೂ ಕರೆಯಲು ಸಮಯ ಕೊಡದ ಅಮಿತ್ ಶಾ ಚುನಾವಣೆ ನಡೆಸಲು ಮಾತ್ರ ಸಾಕಷ್ಟು ಸಮಯ ಹೊಂದಿದ್ದಾರೆ. ನಾಳೆ ಚನ್ನಪಟ್ಟಣದಲ್ಲಿ ಅವರು ಚುನಾವಣಾ ಪ್ರಚಾರ ನಡೆಸುವ ನೈತಿಕ ಅರ್ಹತೆ ಹೊಂದಿಲ್ಲ” ಎಂದು ಹೇಳಿದರು.
“ಕರ್ನಾಟಕದ 240ರಲ್ಲಿ 223 ತಾಲೂಕುಗಳು ಬರಪೀಡಿತವೆಂದು ಘೋಷಿತವಾಗಿವೆ. ಹವಾಮಾನ ಇಲಾಖೆಯು ಮುಂದಿಟ್ಟಿರುವ ಅಂಕಿ ಅಂಶಗಳ ಪೈಕಿ ಕಳೆದ 122 ವರ್ಷಗಳಲ್ಲೇ ಅತ್ಯಂತ ಹೆಚ್ಚು ಬರ (73% ಮಳೆಯ ಕೊರತೆ) ಆಗಸ್ಟ್ ತಿಂಗಳಲ್ಲೂ, ಕಳೆದ 122 ವರ್ಷಗಳಲ್ಲಿ ಮೂರನೆಯ ಅತಿ ಹೆಚ್ಚು ಬರ (56% ಮಳೆಯ ಕೊರತೆ) ಜೂನ್ ತಿಂಗಳಲ್ಲೂ ಕರ್ನಾಟಕವು ಎದುರಿಸಿದೆ. ಇದರಿಂದ ₹35,162.05 ಕೋಟಿ ಬೆಳೆ ನಷ್ಟವಾಗಿದ್ದು, ರಾಜ್ಯ ಸರ್ಕಾರವು ₹18,171 ಕೋಟಿ ಬರ ಪರಿಹಾರವನ್ನು ಕೋರಿ ಸೆಪ್ಟೆಂಬರ್ 22 ಮತ್ತು ಅಕ್ಟೋಬರ್ 20ರಂದು ಮನವಿ ಸಲ್ಲಿಸಿದೆ. ಇದರಲ್ಲಿ ₹4,663.12 ಕೋಟಿ ಇನ್‌ಪುಟ್ ಸಬ್ಸಿಡಿ, ₹12,577.9 ಬರ ಪರಿಹಾರವಲ್ಲದೇ ₹566.78 ಕೋಟಿ ಕುಡಿಯುವ ನೀರು, ₹363.68 ಕೋಟಿ ಜಾನುವಾರುಗಳ ನಿರ್ವಹಣೆಗೆ ಅಗತ್ಯವಿದ್ದ ಅನುದಾನವೂ ಸೇರಿತ್ತು” ಎಂದು ತಿಳಿಸಿದ್ದಾರೆ.
“2005ರ ಬರ ನಿರ್ವಹಣೆ ಕೈಪಿಡಿಯಂತೆ, ಇಂತಹ ಮನವಿ ಸಲ್ಲಿಸಿದ ಒಂದು ವಾರದಲ್ಲಿ ಐಎಂಸಿಟಿ (INTERMINISTERIAL CENTRAL TEAM) ರಚನೆಯಾಗಬೇಕು. ಅದು ಖುದ್ದು ರಾಜ್ಯಕ್ಕೆ ಭೇಟಿ ನೀಡಿ 10 ದಿನಗಳಲ್ಲಿ ವರದಿ ಸಲ್ಲಿಸಬೇಕು. ವರದಿ ಸಲ್ಲಿಕೆಯಾದ ತಿಂಗಳಲ್ಲಿ ರಾಷ್ಟ್ರೀಯ ವಿಪತ್ತು ನಿವಾರಣಾ ನಿಧಿ (ಎನ್‌ಡಿಆರ್‌ಎಫ್)ಯಿಂದ ಹಣ ಬಿಡುಗಡೆ ಮಾಡಬೇಕು. ಇದಕ್ಕಾಗಿ ಉನ್ನತ ಮಟ್ಟದ ಸಮಿತಿ(ಎಚ್‌ಎಲ್‌ಸಿ)ಯು ಪೂರ್ವಭಾವಿ ಸಭೆ ಸೇರಬೇಕು. ಈ ಸಭೆಯು ಗೃಹ ಸಚಿವರ ಅಧ್ಯಕ್ಷತೆಯಲ್ಲಿ ನಡೆಯಬೇಕಿತ್ತು” ಎಂದು ಬಡಗಲಪುರ ನಾಗೇಂದ್ರ ತಿಳಿಸಿದ್ದಾರೆ.
“ಕೇಂದ್ರ ಸರ್ಕಾರವು ನಡೆದುಕೊಂಡ ರೀತಿ ಅಪ್ರಜಾತಾಂತ್ರಿಕ, ಅಮಾನವೀಯ ಮತ್ತು ಕ್ರೌರ್ಯದಿಂದ ಕೂಡಿದೆ. ಏಕೆಂದರೆ, ಅನುದಾನ ಬಿಡುಗಡೆ ಮಾಡುವುದಿರಲಿ, ಆ ಕುರಿತ ಸಭೆಯನ್ನೂ ಕೇಂದ್ರ ಸರ್ಕಾರ ಕರೆಯಲಿಲ್ಲ. ಅಕ್ಟೋಬರ್ ತಿಂಗಳ 4ರಿಂದ 9ನೇ ತಾರೀಖಿನ ನಡುವೆ ಅಧಿಕಾರಿಗಳ ತಂಡ ಬಂದು ಪರಾಮರ್ಶೆ ನಡೆಸಿದ ಮೇಲೆ, ರಾಜ್ಯದ ಸಚಿವರುಗಳ ನಿಯೋಗ ಅಕ್ಟೋಬರ್ 25ರಂದು ಖುದ್ದಾಗಿ ದೆಹಲಿಗೆ ಹೋಗಿ ಅಮಿತ್ ಶಾ ಅವರ ಇಲಾಖೆಯ ಕಾರ್ಯದರ್ಶಿ ಮತ್ತು ಕೃಷಿ ಇಲಾಖೆಯ ಕಾರ್ಯದರ್ಶಿಯವರಿಗೆ ಮತ್ತೆ ಮನವಿ ಸಲ್ಲಿಸಿತು. ಆದರೂ ಅಮಿತ್ ಶಾ ಅವರು ಸಭೆ ಕರೆಯಲಿಲ್ಲ” ಎಂದು ರೈತಸಂಘ ಕಿಡಿಕಾರಿದೆ.
“ಅಮಿತ್ ಶಾ ಮತ್ತು ಇತರ ಸಚಿವರಿಗೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿಯಿಂದ ಹಣ ಬಿಡುಗಡೆ ಮಾಡಬೇಕೆಂದು ಕೋರಿ ಮುಖ್ಯಮಂತ್ರಿಗಳು ನವೆಂಬರ್ 15ರಂದು ಮತ್ತೆ ಪತ್ರ ಬರೆದರು. ಅದಕ್ಕೆ ಯಾವ ಪ್ರತಿಕ್ರಿಯೆಯೂ ಬಾರದೇ ಇದ್ದಾಗ, ಕಂದಾಯ ಸಚಿವರು ಮತ್ತು ಕೃಷಿ ಸಚಿವರು ನವೆಂಬರ್ 23ರಂದು ಖುದ್ದಾಗಿ ದೆಹಲಿಗೆ ಹೋಗಿ ಕರ್ನಾಟಕ ಎದುರಿಸುತ್ತಿರುವ ಸಂಕಷ್ಟವನ್ನು ವಿವರಿಸಿ ಹಣ ಬಿಡುಗಡೆ ಮಾಡಲು ಕೋರಿದರು. ಇಷ್ಟಾದರೂ ಅಮಿತ್ ಶಾ ಕಾನೂನು ಪ್ರಕಾರ ಕಡ್ಡಾಯವಾಗಿ ಕರೆಯಲೇಬೇಕಿದ್ದ ಸಭೆಯನ್ನೂ ಕರೆಯಲಿಲ್ಲ” ಎಂದು ಆರೋಪಿಸಿದೆ.
“ಇದೆಲ್ಲಾ ಏನು ತೋರಿಸುತ್ತದೆ? ಇವರು ದೇಶ ಆಳಲು ಲಾಯಕ್ಕಿಲ್ಲ ಎಂಬುದನ್ನಷ್ಟೇ ಸಾಬೀತುಪಡಿಸುತ್ತದೆ. ಇದೇ ಅವಧಿಯಲ್ಲಿ ದೇಶದ ವಿವಿಧ ಭಾಗಗಳಲ್ಲಿ ನಡೆಯುತ್ತಿದ್ದ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಲು, ವಿವಿಧ ಪಕ್ಷಗಳಲ್ಲಿದ್ದ ಭ್ರಷ್ಟರನ್ನು ತಮ್ಮ ಪಕ್ಷಕ್ಕೆ ಸೇರಿಸಿಕೊಳ್ಳಲು ಅದಕ್ಕಾಗಿ ವಿವಿಧ ತಂತ್ರಗಳನ್ನು ಹೆಣೆಯಲು ಇವರಿಗೆ ಸಮಯವಿತ್ತು ಎಂಬುದನ್ನು ನಾವು ಮಾಧ್ಯಮಗಳಲ್ಲಿ ನೋಡಿದ್ದೇವೆ” ಎಂದು ರೈತ ಸಂಘ ಆಕ್ರೋಶ ಹೊರಹಾಕಿದೆ.
“ವಿಧಿಯಿಲ್ಲದೇ ರಾಜ್ಯದ ಮುಖ್ಯಮಂತ್ರಿ ಮತ್ತು ಕಂದಾಯ ಮಂತ್ರಿಗಳು ಖುದ್ದಾಗಿ ದೆಹಲಿಗೆ ಹೋಗಿ ಡಿಸೆಂಬರ್ 19ರಂದು ಪ್ರಧಾನ ಮಂತ್ರಿಗಳನ್ನೇ ಭೇಟಿ ಮಾಡಿ ಮತ್ತೊಮ್ಮೆ ಮನವಿ ಮಾಡಿದರು. ಮರುದಿನ ಡಿಸೆಂಬರ್ 20ರಂದು ಇದೇ ಗೃಹ ಸಚಿವರನ್ನು ಭೇಟಿ ಮಾಡಿ ಎನ್‌ಡಿಆರ್‌ಎಫ್‌ನಿಂದ ಹಣ ಬಿಡುಗಡೆ ಮಾಡುವ ಸಲುವಾಗಿ ಉನ್ನತ ಮಟ್ಟದ ಸಭೆ ಕರೆಯುವಂತೆ ಕೋರಿದರು. ಡಿಸೆಂಬರ್ 23ರಂದೇ ಸಭೆ ಕರೆಯಲಾಗುವುದು ಎಂದು ಕರ್ನಾಟಕದ ಮುಖ್ಯಮಂತ್ರಿಗಳ ನಿಯೋಗಕ್ಕೆ ಭರವಸೆ ನೀಡಿದ್ದರು ಎಂಬುದು ಪತ್ರಿಕಾ ವರದಿಗಳಿಂದ ತಿಳಿಯುತ್ತದೆ. ಆದರೆ, ಆ ಸಭೆಯೇ ನಡೆಯಲಿಲ್ಲ. ಜನವರಿ 19ರಂದು ಕರ್ನಾಟಕದ ಮುಖ್ಯಮಂತ್ರಿಗಳು ಇನ್ನೂ ಒಮ್ಮೆ ಪ್ರಧಾನ ಮಂತ್ರಿಗಳಿಗೆ ಪತ್ರ ಬರೆದು ರಾಜ್ಯದ ಬರಪರಿಹಾರಕ್ಕೆ ಅನುದಾನ ಬಿಡುಗಡೆ ಮಾಡಲು ಆಗ್ರಹಿಸಿದರು” ಎಂದು ಹೇಳಿದೆ.
“ಕರ್ನಾಟಕಕ್ಕೆ ಯಾಕೆ ಶಿಕ್ಷೆ? ಕರ್ನಾಟಕದಿಂದ ಆರಿಸಿ ಹೋದ ಬಿಜೆಪಿಯ 25 ಮತ್ತು ಬಿಜೆಪಿಯನ್ನು ಬೆಂಬಲಿಸುವ ಇನ್ನಿಬ್ಬರು ಸಂಸದರು ಏನು ಮಾಡುತ್ತಿದ್ದರು? ನಿಯಮಾನುಸಾರ ಸಭೆ ಸೇರಿಸಿ ಅನುದಾನ ಬಿಡುಗಡೆ ಮಾಡಬೇಕಿದ್ದ ಗೃಹ ಸಚಿವರು ಈವರೆಗೆ ಸಭೆ ಕರೆಯಲಿಲ್ಲ. ಇದು ರಾಜ್ಯದ ಜನರಿಗೆ ಮಾಡಿದ ಅವಮಾನವಾಗಿದೆ ಮತ್ತು ರಾಜ್ಯದ ರೈತಕುಲದ, ಜನ-ಜಾನುವಾರುಗಳ ಬವಣೆಯತ್ತ ತೋರಿದ ಕ್ರೌರ್ಯವಾಗಿದೆ” ಎಂದಿದೆ.
“ಇವೆಲ್ಲದರ ನಂತರ ರಾಜ್ಯದ ಇಡೀ ಸಚಿವ ಸಂಪುಟವೇ ದೆಹಲಿಗೆ ಹೋಗಿ ಫೆಬ್ರವರಿ 7ರಂದು ಪ್ರತಿಭಟನೆಯನ್ನೂ ಮಾಡಿದರು. ಆಗಲೂ ಬಿಜೆಪಿ, ರಾಜ್ಯದ ಸಂಸದರು ಮತ್ತು ಕೇಂದ್ರ ಸರ್ಕಾರ ರಾಜಕಾರಣದ ಮಾತುಗಳನ್ನು ಆಡಿದರೇ ಹೊರತು ಬರಪರಿಹಾರದ ವಿತರಣೆ ಮಾಡಲಿಲ್ಲ. ಇದೀಗ ರಾಜ್ಯ ಸರ್ಕಾರವು ತನಗೆ ಬರಬೇಕಿದ್ದ ಬರ ಪರಿಹಾರಕ್ಕಾಗಿ ಸುಪ್ರೀಂಕೋರ್ಟಿನ ಮೊರೆ ಹೋಗುವ ಸ್ಥಿತಿ ತಂದಿದ್ದಾರೆ” ಎಂದು ಹೇಳಿದೆ.
“ಇಷ್ಟೆಲ್ಲಾ ಇದ್ದಾಗಲೂ, ಧೈರ್ಯವಾಗಿ ಕರ್ನಾಟಕದಲ್ಲಿ ಚುನಾವಣಾ ಪ್ರಚಾರಕ್ಕೆ ಅಮಿತ್ ಶಾ ಅವರು ಬರುತ್ತಿದ್ದಾರೆಂದರೆ, ಕರ್ನಾಟಕ ಇಷ್ಟು ಹೀನ ಸ್ಥಿತಿಗೆ ಬಂತೇ ಎಂಬ ಪ್ರಶ್ನೆ ಏಳುತ್ತದೆ. ಕರ್ನಾಟಕದ ಜನರ ಪರವಾಗಿ ಕರ್ನಾಟಕ ರಾಜ್ಯ ರೈತಸಂಘವು ಅಮಿತ್ ಶಾ ಅವರ ಈ ದಾರ್ಷ್ಟ್ಯವನ್ನು ಖಂಡಿಸುತ್ತದೆ. ಈ ಪ್ರಮಾಣದಲ್ಲಿ ನಮಗೆ ಅನ್ಯಾಯವೆಸಗಿದ್ದರೂ, ಅವರನ್ನು ಮತ್ತೆ ಚುನಾವಣಾ ಪ್ರಚಾರಕ್ಕೆ ಕರೆಸುವ ಧೈರ್ಯವನ್ನು ತೋರಿದ ಬಿಜೆಪಿ ಈ ರಾಜ್ಯದ ಮಟ್ಟಿಗೆ ಸತ್ತು ಹೋಗಿದೆ. ಅಮಿತ್ ಶಾ ಅವರ ಈ ಚುನಾವಣಾ ಪ್ರಚಾರವನ್ನು ರೈತಸಂಘ ಖಂಡಿಸುತ್ತದೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದ ರೈತಸಂಕುಲ ಬಿಜೆಪಿಗೆ ಬುದ್ದಿ ಕಲಿಸುತ್ತದೆ” ಎಂದು ಈ ಮೂಲಕ ಘೋಷಿಸಿದೆ.
ಈ ಸುದ್ದಿ ಓದಿದ್ದೀರಾ? ರಾಜಪ್ಪ ದಳವಾಯಿಯವರು ಸಾಂಸ್ಕೃತಿಕ ಶ್ರಮಜೀವಿ: ಬರಗೂರು ರಾಮಚಂದ್ರಪ್ಪ
“ರೈತ ವಿರೋಧಿ ಪಕ್ಷದೊಂದಿಗೆ ಕೈ ಜೋಡಿಸಿರುವ ಜೆಡಿಎಸ್ ಪಕ್ಷವು ಇದಕ್ಕೆ ಸಮರ್ಥನೆ ಒದಗಿಸಲು ತಿಣುಕುತ್ತಿರುವುದು ಆಘಾತ ತರುತ್ತಿದೆ. ಕರ್ನಾಟಕದ ಪಕ್ಷವಾಗಿದ್ದ ಜೆಡಿಎಸ್ ಈಗ ರಾಜ್ಯದ ಹಿತಕ್ಕೆ ಮಾರಕವಾಗುವಂತಹ ಹೇಳಿಕೆಗಳನ್ನು ನೀಡುತ್ತಿದೆ. ರಾಜ್ಯ ಸರ್ಕಾರವೇನು ಮಾಡಿದೆ ಎಂಬ ಪ್ರಶ್ನೆ ಕೇಳುವುದು ವಿರೋಧ ಪಕ್ಷದ ಕರ್ತವ್ಯ. ಅದನ್ನು ಜೆಡಿಎಸ್ ಕೇಳಿದೆ. ಆದರೆ, ಕೇಂದ್ರದ ಬಿಡಿಗಾಸೂ ಬಾರದೇ ಇದ್ದಾಗ ಸುಮಾರು 628 ಕೋಟಿ ರೂ. ಬರಪರಿಹಾರ ವಿತರಿಸಿರುವ ರಾಜ್ಯ ಸರ್ಕಾರವನ್ನೇ ಟೀಕೆ ಮಾಡಿರುವ ಆ ಪಕ್ಷವು ಕೇಂದ್ರದ ಈ ಆಮಾನವೀಯ, ಅಪ್ರಜಾತಾಂತ್ರಿಕ, ಆಸಾಂವಿಧಾನಿಕ ನಡೆಯನ್ನೇಕೆ ಖಂಡಿಸುತ್ತಿಲ್ಲ? ಜೆಡಿಎಸ್‌ನ ಈ ನಿಲುವು ಕೂಡಾ ಖಂಡನೀಯ” ಎಂದು ರೈತಸಂಘ ಹೇಳಿದೆ.
