- ಕಮಲನಗರ ತಾಲೂಕಿನ ತೋರಣಾ ಗ್ರಾಮದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಗ್ರಾಮ ಘಟಕ ಉದ್ಘಾಟನೆ
- ಗ್ರಾಮ ಮಟ್ಟದಿಂದ ರೈತ ಸಂಘಟನೆ ಬಲವಾದರೆ ರೈತರ ಅನೇಕ ಸಮಸ್ಯೆಗಳು ಈಡೇರಲು ಸಾಧ್ಯ.
ಗ್ರಾಮ ಮಟ್ಟದಲ್ಲಿ ರೈತರನ್ನು ಒಗ್ಗೂಡಿಸಿ ರೈತರ ಸಮಸ್ಯೆಗಳ ಪರಿಹಾರಕ್ಕಾಗಿ ಹೋರಾಡಲು ಸಂಘಟನೆ ಬಲಪಡಿಸುವುದು ಅಗತ್ಯವಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಸಿದ್ರಾಮಪ್ಪ ಆಣದೂರೆ ಹೇಳಿದರು.
ಕಮಲನಗರ ತಾಲೂಕಿನ ತೋರಣಾ ಗ್ರಾಮದಲ್ಲಿ ಆಯೋಜಿಸಿದ್ದ ರೈತ ಸಂಘದ ಗ್ರಾಮ ಘಟಕ ಉದ್ಘಾಟಿಸಿ ಮಾತನಾಡಿದ ಅವರು, ” ಜಿಲ್ಲೆ ಕಳೆದ ಎರಡು ವರ್ಷಗಳಿಂದ ಬರಗಾಲ ಎದುರಿಸುತ್ತಿದ್ದು, ರೈತರು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಅದರೂ ಸರ್ಕಾರ ಬರಪೀಡಿತ ಜಿಲ್ಲೆ ಘೋಷಣೆಗೆ ಹಿಂದೇಟು ಹಾಕುತ್ತಿದೆ. ನಾವೆಲ್ಲರೂ ಗ್ರಾಮ ಮಟ್ಟದಿಂದ ಸಂಘಟಿಸಿ ಹೋರಾಡಲು ಸಜ್ಜಾಗಬೇಕು” ಎಂದು ಕರೆ ನೀಡಿದರು.
ರೈತ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಶ್ರೀಮಂತ ಬಿರಾದರ ಮಾತನಾಡಿ, ಜಿಲ್ಲೆಯ ರೈತರು ಬರಗಾಲ ಸೇರಿದಂತೆ ಅನೇಕ ಸಮಸ್ಯೆಗಳು ಎದುರಿಸುತ್ತಿದ್ದಾರೆ. ಸಮಸ್ಯೆಗಳ ಈಡೇರಿಕೆಗೆ ಒತ್ತಾಯಿಸಿ ಜಿಲ್ಲಾ ರೈತ ಸಂಘ ಪ್ರತಿಭಟನೆಗಳು ನಡೆಸುತ್ತಲೇ ಇದೆ. ರೈತ ವಿವಿಧ ಬೇಡಿಕೆಗಳ ಪರಿಹಾರಕ್ಕೆ ಹೋರಾಟ ನಡೆಸಲು ಸಂಘಟನೆ ಮುಖ್ಯವಾಗಿದೆ. ತಾಲೂಕು, ಗ್ರಾಮ ಮಟ್ಟದಲ್ಲಿ ಸಂಘಟನೆ ಬಲವಾದರೆ ಸಂಘಕ್ಕೆ ಇನ್ನಷ್ಟು ಸಾಮರ್ಥ್ಯ ಬರುತ್ತದೆ” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷ ಸುನೀಲ ಸಿಗರೆ ಅಧ್ಯಕ್ಷತೆ ವಹಿಸಿದ್ದರು, ಕಮಲನಗರ ತಾಲೂಕು ಅಧ್ಯಕ್ಷ ಪ್ರವೀಣ ಕುಲಕರ್ಣಿ, ಔರಾದ ತಾಲೂಕು ಅಧ್ಯಕ್ಷ ಪ್ರಕಾಶ ಬಾವಗೆ, ವಿಶ್ವನಾಥ ಧರಣೆ, ಮನೋಹರ ಬಿರಾದರ, ಜನಾರ್ಧನ ಸಾವಗೆಕರ್, ಕಲ್ಲಪ್ಪ ದೇಶಮುಖ, ರಾಜಕುಮಾರ ಪಾಟೀಲ್ ಸೇರಿದಂತೆ ಇತರರಿದ್ದರು. ದಯಾನಂದ ರಾಜೋಳೆ ನಿರೂಪಿಸಿದರು, ಸಚಿನ ಸಿಂಧೆ ವಂದಿಸಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಲೋಕಸಭಾ ಕ್ಷೇತ್ರದ ಅಭಿವೃದ್ಧಿಗೆ ಸಿಎಂ ಸಿದ್ದರಾಮಯ್ಯನವರಿಗೆ ಪ್ರಸ್ತಾವನೆ ಸಲ್ಲಿಕೆ: ಕೇಂದ್ರ ಸಚಿವ ಖೂಬಾ
ತೋರಣಾ ಗ್ರಾಮ ಘಟಕದ ಪದಾಧಿಕಾರಿಗಳ ಆಯ್ಕೆ: ಉಮಾಕಾಂತ ಮಳಕೆರೆ (ಅಧ್ಯಕ್ಷ), ಕಿಶನರಾವ ವನಮಾರೆ, ಗೋಪಾಳರಾವ ಪಾಂಚವರೆ (ಉಪಾಧ್ಯಕ್ಷ), ಸಾಗರ ಸೂರ್ಯಕಾಂತ ( ಪ್ರಧಾನ ಕಾರ್ಯದರ್ಶಿ), ಪಂಡರಿನಾಥ ಪಾಂಚವಾರೆ ( ಸಹ ಕಾರ್ಯದರ್ಶಿ), ಹಾವಗಿರಾವ ಕೋರೆ ( ಖಜಾಂಚಿ) ಹಾಗೂ ಇತರರಿಗೆ ಸದಸ್ಯರಾಗಿ ಆಯ್ಕೆ ಮಾಡಲಾಗಿದೆ ಎಂದು ಕಮಲನಗರ ತಾಲೂಕು ಅಧ್ಯಕ್ಷ ಪ್ರವೀಣ ಕುಲಕರ್ಣಿ ತಿಳಿಸಿದ್ದಾರೆ.